ಹುಬ್ಬಳ್ಳಿ ರೈಲ್ವೆ: ಇಂದಿನಿಂದ ವಿವಿಧ ರೈಲುಗಳ ಸಂಚಾರ ತಾತ್ಕಾಲಿಕ ರದ್ದು, ಪಟ್ಟಿ
ಹುಬ್ಬಳ್ಳಿ, ಜೂನ್ 08: ರಾಜ್ಯಾದ್ಯಂತ ಮಳೆ ಆರ್ಭಟ ಶುರುವಾಗಿದೆ. ಈ ಕಾರಣದಿಂದ ನೈಋತ್ಯ ರೈಲ್ವೆ ವಲಯದ (SWR) ಅಧಿಕಾರಿಗಳು ಕರ್ನಾಟಕದಲ್ಲಿ ರೈಲು ಮಾರ್ಗಗಳ ಸುರಕ್ಷತಾ ತಪಾಸಣೆ, ಪರಿಶೀಲನೆ ಆರಂಭಿಸಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಕಾರಣದಿಂದ ಇಂದು ಜೂನ್ 7ರಿಂದ ಕೆಲವು ರೈಲುಗಳ ಸಂಚಾರ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.
ಮಳೆಗಾಲದಲ್ಲಿ ಪ್ರವಾಹ, ಇನ್ನಿತರ ಕಾರಣಗಳಿಂದ ರೈಲ್ವೆ ಆಸ್ತಿಗಳಿಗೆ ಹಾನಿ ಆಗುವ ಸಾಧ್ಯತೆ ಇರುತ್ತದೆ. ಹೀಗಾಗದಂತೆ ಮುಂಜಾಗ್ರತಾ ದೃಷ್ಟಿಯಿಂದ ಹಾಗೂ ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ತಪಾಸಣೆ ನಡೆಯುತ್ತಿದೆ. ರೈಲು ಪ್ರಯಾಣ ಹಾಗೂ ಸರಾಗ ರೈಲು ಸಂಚಾರವನ್ನ ಖಚಿತ ಪಡಿಸಿಕೊಳ್ಳಲಾಗುತ್ತದೆ.

ಈ ಕುರಿತು ಪ್ರತಿಕ್ರಿಯಿಸಿರುವ ನೈಋತ್ಯ ರೈಲ್ವೆ ವಲಯವು, ಘಾಟ್ ಪ್ರದೇಶಗಳಾದ ಮೈಸೂರು ರೈಲ್ವೆ ವಿಭಾಗದ ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ಹಾಗೂ ಹುಬ್ಬಳ್ಳಿ ವಿಭಾಗದ ಕ್ಯಾಸ್ಟಲ್ ರಾಕ್- ಕುಲೇಮ್ಲ ವಿಶೇಷ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.
ರೈಲ್ವೆ ಸೌಕರ್ಯ, ಸುರಕ್ಷತೆ ಒದಗಿಸಲು ಬದ್ಧ
ಇಂದಿನ ಪ್ರತಿಕೂಲ ಹವಮಾನ ಪರಿಸ್ಥಿತಿ ಸಂದರ್ಭದಲ್ಲಿ ರೈಲ್ವೆ ಸೌಕರ್ಯ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ನೈಋತ್ಯ ರೈಲ್ವೆ ವಲಯ ಬದ್ಧವಾಗಿದೆ ಎಂದು ವಲಯದ ತಿಳಿಸಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರೈಲ್ವೆ ವಲಯವು ಭಾರಿ ಮಳೆ ಹಾಗೂ ಚಂಡಮಾರುತ ಮುನ್ಸೂಚನೆಯನ್ನು ಪಡೆಯಲು ಭಾರತೀಯ ಹವಮಾನ ಇಲಾಖೆಯಿಂದ (ಐಎಂಡಿ) ವಿಶೇಷ ಉಪಕರಣಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಸಂಭಾವ್ಯ ತೊಂದರೆಯಿಂದ ಎಚ್ಚೆತ್ತುಕೊಳ್ಳಲು ಅನುಕೂಲವಾಗುತ್ತದೆ.

ದುರ್ಬಲ ರೈಲ್ವೆ ಹಳಿಗಳು ದುರಸ್ಥಿ
ಇನ್ನೂ ಹಳೆಯದಾದ, ದುರ್ಬಲ ರೈಲ್ವೆ ಹಳಿಗಳನ್ನು ಮಳೆಗಾಲದ ಹಿನ್ನೆಲೆಯಲ್ಲಿ ಪರಿಶೀಲಿಸಿ, ಸರಿಪಡಿಸುವ ಕಾರ್ಯ ನಡೆದಿದೆ. ರೈಲ್ವೆ ಯಾರ್ಡ್‌ಗಳಲ್ಲಿ ನೀರು ಹರಿದಹೋಗಲು ಒಳಚರಂಡಿ ವ್ಯವಸ್ಥೆಯನ್ನು ಸುಗಮಗೊಳಿಸಲಾಗುತ್ತಿದೆ. ಮಳೆಗಾಲದ ಸಮಯದಲ್ಲಿ ರೈಲು ಸಂಚಾರದಲ್ಲಿ ಸಮಸ್ಯೆಯಾಗದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಮಳೆಗಾಲದಲ್ಲಿ ಜೋರು ಗಾಳಿ ಮಳೆಗೆ ರೈಲು ಹಳಿಗಳ ಮೇಲೆ ಮರಗಳು ಬಿದ್ದರೆ, ನೀರಿನ ಹರಿವು ಹೆಚ್ಚಿದರೆ ಅಥವಾ ಇನ್ನಿತರ ಸಮಸ್ಯೆಗಳನ್ನು ಉಂಟಾದರೆ ತ್ವರಿತವಾಗಿ ಸ್ಥಳಕ್ಕೆ ಭೇಟಿ ನೀಡಲಾಗುವುದು. ಅಲ್ಲಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ವಿಶೇಷ ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದೆ ಎಂದು SWR ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
SWR: ಈ ರೈಲುಗಳು ಸೇವೆ ತಾತ್ಕಾಲಿಕ ರದ್ದು, ಪಟ್ಟಿ
ಜೂ. 8ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ- ಗೋಮತಿ ನಗರ, 11ರಂದು ಗೋಮತಿ ನಗರ- ಎಸ್‌ಎಸ್‌ಎಸ್ ಹುಬ್ಬಳ್ಳಿ, 9 ರಂದು ಬೆಳಗಾವಿ ಗೋಮತಿ ನಗರ, 11 ರಂದು ಗೋಮತಿ ನಗರ- ಬೆಳಗಾವಿ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ರೈಲಿನ ಸಂಖ್ಯೆ ತಿಳಿಯಿರಿ.
* ಹುಬ್ಬಳ್ಳಿ ರೈಲು ನಿಲ್ದಾಣದಿಂದ ಗೋಮತಿ ನಗರ ವರೆಗೆ ಇದೇ ಜೂನ್ 08 ರಂದು ಪ್ರಾರಂಭವಾಗಬೇಕಿದ್ದ ರೈಲು (ಸಂಖ್ಯೆ 07305) ಎಕ್ಸ್‌ಪ್ರೆಸ್ ರೈಲಿನ ಪ್ರಯಾಣವನ್ನು ರದ್ದುಗೊಳಿಸಲಾಗುತ್ತದೆ.
* ಗೋಮತಿ ನಗರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಜೂನ್ 11ರಿಂದ ಕಾರ್ಯಾಚರಣೆ ಆರಂಭಿಸಬೇಕಿದ್ದ ರೈಲಿನ (ಸಂಖ್ಯೆ 07306) ಸಂಚಾರ ಸೇವೆ ತಾತ್ಕಾಲಿಕವಾಗಿ ರದ್ದುಗೊಂಡಿದೆ.
* ಇನ್ನೂ ಬೆಳಗಾವಿ-ಗೋಮತಿ ನಗರವರೆಗೆ ಇದೇ ಜೂನ್ 09ರಿಂದ ಸಂಚಾರ ಸೇವೆ ಪ್ರಾರಂಭಿಸಬೇಕಿದ್ದ ರೈಲಿನ (ಸಂಖ್ಯೆ 07389) ಸಂಚಾರವನ್ನು ತಾತ್ಕಾಲಿಕವಾಗಿ ಮಾಡಲಾಗಿದೆ.
* ಮರಳಿ ಗೋಮತಿ ನಗರಯಿಂದ ಬೆಳಗಾವಿಗೆ ಜೂನ್ 11ರಿಂದ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದ್ದ ರೈಲು (ಸಂಖ್ಯೆ 07390) ಪ್ರಯಾಣ ರದ್ದುಗೊಂಡಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications