ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

4ನೇ ಯತ್ನದಲ್ಲಿ ಯುಪಿಎಸ್ಸಿ ಪಾಸಾದ ಹುಬ್ಬಳ್ಳಿಯ ಫಕೀರೇಶ್ ಬಾದಾಮಿ

By ಬಸವರಾಜ ಮರಳಿಹಳ್ಳಿ
|
Google Oneindia Kannada News

ಹುಬ್ಬಳ್ಳಿ, ಜೂನ್ 7: ಹುಟ್ಟಿದ್ದು ಕೃಷಿ ಕುಟುಂಬದಲ್ಲಿ. ಓದಿದ್ದು ಕನ್ನಡ ಮಾಧ್ಯಮದಲ್ಲಿ. ಇದೀಗ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 269ನೇ ರ‍್ಯಾಂಕ್ ಪಡೆದಿದ್ದಾರೆ ಹುಬ್ಬಳ್ಳಿಯ ಉಣಕಲ್‌ನ ಫಕೀರೇಶ್ ಬಾದಾಮಿ.

ನಗರದ ಉಣಕಲ್‌ನ ರೈತ ಕಲ್ಲಪ್ಪ ರಾಮಪ್ಪ ಬಾದಾಮಿ ಹಾಗೂ ಗೌರಮ್ಮ ಅವರ ಹಿರಿಯ ಮಗನೇ ಫಕೀರೇಶ್. 10ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾಗಿದ್ದರು. ಕಠಿಣ ಪರಿಶ್ರಮದೊಂದಿಗೆ ಸ್ಥಿರತೆಯಿಂದ ಅಧ್ಯಯನ ಮಾಡಿದರೆ ಯಶಸ್ಸು ಸಾಧ್ಯ ಎನ್ನುವುದು ಅವರ ಯಶಸ್ಸಿನ ಮಂತ್ರ.

Hubballi: Pakkiresh Kallappa Badami got 269th rank in UPSC exam, here is his story

"ಗುರಿ ಸಾಧನೆ ಸಾಧನೆಗೆ ನಮ್ಮ ಸಮಸ್ಯೆಗಳು ಅಡ್ಡಿಯಾಗಬಾರದು. ಸಮಸ್ಯೆಗಳನ್ನು ಮೆಟ್ಟಿ ನಿಂತರೆ ಮಾತ್ರ ಗುರಿ ತಲುಪಲು ಸಾಧ್ಯ. ಗುರಿ ಸಾಧನೆ ಮಾಡಬೇಕು ಎನ್ನುವವರು ತಮ್ಮ ಹಿನ್ನೆಲೆ ಬಗ್ಗೆ ಪೂರ್ವಾಗ್ರಹ ಪೀಡಿತರಾಗಬಾರದು. ಮುಖ್ಯವಾಗಿ ಸಾಧಕನಿಗೆ ಕೀಳರಿಮೆಯಂತೂ ಇರಲೇಬಾರದು," ಎಂಬುದು ಫಕ್ಕೀರೇಶ್ ಅವರ ಸ್ಪಷ್ಟ ನಿಲುವು.

ಹುಬ್ಬಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿರುವ ನಾನು ಬೆಳಗಾವಿ ಜಿಲ್ಲೆಯ ರಾಮದುರ್ಗದ ಕ್ರೀಡಾ ವಸತಿ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಹುಬ್ಬಳ್ಳಿಯ ಚೇತನಾ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರೈಸಿದೆ. 2012ರಲ್ಲಿ ಪದವಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಆರಂಭಿಸಿ ಕೆಲ ಕಾಲ ದೆಹಲಿ, ಬೆಂಗಳೂರು ಹಾಗೂ ಧಾರವಾಡದಲ್ಲಿ ತರಬೇತಿ ಪಡೆದು ಪರೀಕ್ಷೆ ಎದುರಿಸಿದೆ. ಆದರೆ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಆದರೆ ಈ ಸೋಲಿನ ಬಗ್ಗೆ ಧೃತಿಗೆಡಲಿಲ್ಲ," ಎನ್ನುತ್ತಾರೆ ಫಕೀರೇಶ್.

Hubballi: Pakkiresh Kallappa Badami got 269th rank in UPSC exam, here is his story

ಈ ಮಧ್ಯೆ ಆಗ ಸಿಐಡಿ ಡಿಸಿಪಿಯಾಗಿದ್ದ ಜೀನೆಂದ್ರ ಖಣಗಾವಿ ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಬೇಕಾದ ಕೌಶಲಗಳ ಕುರಿತು ಮಾರ್ಗದರ್ಶನ ಮಾಡಿದ್ದರು. ಇದೇ ಮುಂದೆ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಹಕಾರಿಯಾಯಿತು ಎನ್ನುತ್ತಾರೆ ಫಕೀರೇಶ್.

Hubballi: Pakkiresh Kallappa Badami got 269th rank in UPSC exam, here is his story

ಮಾತು ಮುಂದುರಿಸಿದ ಅವರು, "ಕನ್ನಡ ಮಾಧ್ಯಮ ಯುಪಿಎಸ್ಸಿ ಪರೀಕ್ಷೆಗೆ ಅಡ್ಡಿ ಅಲ್ಲ. ಆದರೆ ಈ ಮಾಧ್ಯಮದಲ್ಲಿ ಗುಣಮಟ್ಟದ ಅಧ್ಯಯನದ ಕೊರತೆ ಹೆಚ್ಚು. ಅಲ್ಲದೆ ಬರವಣಿಗೆಯ ವೇಗವನ್ನು ರೂಢಿಸಿಕೊಂಡರೆ ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯುವುದು ಹೆಚ್ಚು ಸೂಕ್ತ. ಆದರೆ, ಇಂಗ್ಲಿಷ್‌ಗಿಂತ ಕನ್ನಡದಲ್ಲಿ ಎರಡು ಪಟ್ಟು ಹೆಚ್ಚು ಬರೆಯಬೇಕಾದ ಅನಿವಾರ್ಯತೆ ಇದೆ," ಎಂದು ಅವರು ಮಾಹಿತಿ ನೀಡಿದರು.

"ನಾಗರೀಕ ಪರೀಕ್ಷೆಯ ಜೀವಾಳವೇ ಪ್ರಚಲಿತ ವಿದ್ಯಮಾನಗಳು. ಪರೀಕ್ಷಾರ್ಥಿಗೆ ಪ್ರಚಲಿತ ಘಟನೆಗಳ ಕುರಿತು ಅರಿವು ಹೊಂದಿರಬೇಕು. ಇದಕ್ಕಾಗಿ ದಿನಪತ್ರಿಕೆ, ಇಂಟರ್‌ನೆಟ್ ಸೇರಿದಂತೆ ಅನುಕೂಲವಾಗುವ ಮಾಧ್ಯಮಗಳನ್ನು ಅವಲಂಬಿಸಬೇಕು. ಪ್ರತಿದಿನ ತನ್ನ ಸುತ್ತಮುತ್ತಲೂ ಏನು ನಡೆಯುತ್ತಿದೆ ಎಂಬುದರ ಅರಿವು ಇರಬೇಕು. ರಾಜಕೀಯ, ಆಡಳಿತ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಚಲಿತಗಳನ್ನು ಕರಗತ ಮಾಡಿಕೊಂಡಿರಬೇಕು. ಹೀಗಾದಾಗ ಮಾತ್ರ ನಾಗರೀಕ ಸೇವಾ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ," ಎಂಬುದು ಫಕೀರೇಶ್ ಅವರ ನಿಲುವು.

ಸಂದರ್ಶನದ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಯುಪಿಎಸ್‌ಸಿಯ ಸಂದರ್ಶನ ಯಾವುದೇ ವಿಷಯಾಧಾರಿತವಾಗಿರುವುದಿಲ್ಲ. ಅದು ನಮ್ಮ ವ್ಯಕ್ತಿತ್ವ ಹಾಗೂ ಸಮಸ್ಯೆ ಪರಿಹರಿಸುವಿಕೆಯ ಜಾಣ್ಮೆಗೆ ಸಂಬಂಧಿಸಿದ್ದಾಗಿರುತ್ತದೆ. ಸಂದರ್ಶನ ಒಂದು ರೀತಿಯ ಚರ್ಚೆಯಿಂದ ಕೂಡಿರುತ್ತದೆಯಲ್ಲದೆ ನಮ್ಮ ಆಸಕ್ತಿ ಕುರಿತಾದ ವಿಷಯಗಳೇ ಸಂದರ್ಶನದ ವಿಷಯ ವಸ್ತುಗಳಾಗಿರುತ್ತದೆ. ಮೂಲತಃ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರನಾಗಿದ್ದರಿಂದ ಸಂದರ್ಶಕರೊಬ್ಬರು ಈ ಕುರಿತಾದ ಪ್ರಶ್ನೆಗಳನ್ನೇ ಕೇಳಿದರು. ಅಲ್ಲದೆ ನಾನೊಬ್ಬ ಫುಟ್‌ಬಾಲ್ ಆಟಗಾರ ಎಂದು ಹೇಳಿದದರಿಂದ ಆ ಕುರಿತಾದ ಪ್ರಶ್ನೆಗಳು ನನಗೆ ಎದುರಾದವು. ಇದರ ಹೊರತಾಗಿಯೂ ಸಮಸ್ಯೆಯನ್ನು ಪರಿಹರಿಸುವ ಹಾಗೂ ಸಾಮಾನ್ಯ ಜ್ಞಾನದ ಕುರಿತಾದ ಪ್ರಶ್ನೆಗಳು ಸಂದರ್ಶನದಲ್ಲಿ ತೂರಿ ಬಂದವು ಎಂದು ಸಂದರ್ಶನದ ಸಾರಂಶವನ್ನು ವಿವರಿಸಿದರು.

ಪರೀಕ್ಷೆಯಲ್ಲಿ ಯಶಸ್ಸು ಸಿಗಲಿಲ್ಲ ಎಂದ ಮಾತ್ರಕ್ಕೆ ಹಿಂಜರಿಯಬಾರದು. ಕಠಿಣ ಶ್ರಮದೊಂದಿಗೆ ತಾಳ್ಮೆಯಿಂದ ಅಧ್ಯಯನ ಮಾಡಿದರೆ ಎಂತವರೂ ನಾಗರೀಕ ಸೇವಾ ಪರೀಕ್ಷೆಯಲ್ಲಿ ಯಶಸ್ಸುಗಳಿಸಬಹುದು ಎಂದು ಅವರ ಕಿವಿ ಮಾತು.

ಫಕೀರೇಶ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಕಲಿತಿದ್ದಾರೆ. ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮಗಳನ್ನೂ ನೀಡಿದ್ದಾರೆ. ಈಗಲೂ ಹವ್ಯಾಸಕ್ಕಾಗಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾರೆ. ಹೀಗೆ ವಿಭಿನ್ನ ಅಭಿರುಚಿ ಹೊಂದಿರುವ ಫಕೀರೇಶ್ ಲೋಕಸೇವಾ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

English summary
Pakkiresh Kallappa Badami, resident of Unkal village here in Hubballi, has got the 269th rank in the Union Public Service Commission (UPSC). He is the son of Kallappa Badami and Gauramma Badami and passed the examinations in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X