Hubballi Old Bus Stand: ಸುಸಜ್ಜಿತ ಹಳೇ ಬಸ್ ನಿಲ್ದಾಣ ನಿರ್ಮಾಣ ಪೂರ್ಣ, ಸಾರ್ವಜನಿಕ ಬಳಕೆ ಯಾವಾಗ?
ಹುಬ್ಬಳ್ಳಿ, ನವೆಂಬರ್ 22: ಉತ್ತರ ಕರ್ನಾಟಕದ ಪ್ರಮುಖ ನಗರ ಮತ್ತು ರಾಜ್ಯ ವಾಣಿಜ್ಯ ನಗರ ಹುಬ್ಬಳ್ಳಿಯ ಸಾರ್ವಜನಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇಲ್ಲಿನ ಚನ್ನಮ್ಮ ವೃತ್ತದ ಸಮೀಪದ ಹಳೇ ಬಸ್ ನಿಲ್ದಾಣಕ್ಕೆ ಆಧುನಿಕವಾಗಿ ರೂಪಗೊಳ್ಳುತ್ತಿದೆ. ಕಳೆದ ಎರಡು ವರ್ಷಗಳಿಂದ ನಡೆಯಿತ್ತಿದ್ದಾರೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಬಹುತೇಕ ಎಲ್ಲವು ಅಂತಿಮ ಅಂತಕ್ಕೆ ಬಂದಿದೆ. ಈ ಮೂಲಕ ನಗರದ ಮಹತ್ವದ ಹೆಗ್ಗುರುತುಗಳಲ್ಲಿ ಒಂದಾದ ಹಳೇ ಬಸ್ ನಿಲ್ದಾಣಕ್ಕೆ ಗತವೈಭವ ಮರಳಲಿದೆ.
ಹುಬ್ಬಳ್ಳಿಯ ಈ ಹಳೇ ಬಸ್ ನಿಲ್ದಾಣದಿಂದ ರಾಜ್ಯದ ಮೂಲೆ ಮೂಲೆಗಳಿಗೆ ಬಸ್ ಸಂಚಾರವಿತ್ತು. ಜನಸಂಖ್ಯೆ, ಅಗತ್ಯತೆ ತಕ್ಕಂತೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 2022ರಲ್ಲಿ ನಿಲ್ದಾಣದ ಅಭಿವೃದ್ಧಿ ಆರಂಭಿಸಲಾಯಿತು. ಅದಾದ ಬಳಿಕ ಚನ್ನಮ್ಮ ವೃತ್ತದಲ್ಲಿ ಒಂದಷ್ಟು ಕಾಮಗಾರಿ ಶುರುವಾದ ಹಿನ್ನೆಲೆಯಲ್ಲಿ ಈ ಭಾಗದಲ್ಲಿನ ಓಡಾಟಕ್ಕೆ ಒಂದಷ್ಟು ತೊಂದರೆ ಉಂಟಾಗುತ್ತಿತ್ತು. ಆದಷ್ಟು ಶೀಘ್ರವೇ ಇಲ್ಲ ತ್ವರಿತಗತಿಯ ಸಂಚಾರ ಇಲ್ಲಿ ಶುರುವಾಗಲಿದೆ.

ತಾಲೂಕುಗಳಿಗೆ ಹುಬ್ಬಳ್ಳಿ ಮುಖ್ಯ ಸಾರಿಗೆ ಕೇಂದ್ರ
ಛೋಟಾ ಮುಂಬೈ ಎಂದು ಕರೆಸಿಕೊಳ್ಳುವ ಹುಬ್ಬಳ್ಳಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳಿಗೆ ಹುಬ್ಬಳ್ಳಿಯೇ ಸಂಚಾರ ಪ್ರಮುಖ ಕೇಂದ್ರವಾಗಿದೆ. ಇದೆಲ್ಲ ಗಮನದಲ್ಲಿಟ್ಟುಕೊಂಡು ನಡೆಸಲಾದ ಕಟ್ಟಡ ಕಾಮಗಾರಿ, ಮೇಲ್ಛಾವಣಿ ನಿರ್ಮಾಣ ಬಹುತೇಕ ಎಲ್ಲವು ಪೂರ್ಣಗೊಂಡಿದೆ.
ನಿಲ್ದಾಣದ ಮುಂದೆ ಗ್ಲಾಜು ಅಳವಡಿಕೆ ಇನ್ನಿತರ ಸಣ್ಣಪುಟ್ಟ ಕೆಲಸಗಳು ಮಾತ್ರವೇ ಬಾಕಿ ಇದೆ. ಶೀಘ್ರವೇ ಮೊದಲಿನಂತೆ ಬಸ್‌ಗಳ ಸಂಚಾರ, ಜನರ ಓಡಾಟ ಆರಂಭವಾಗಲಿದೆ. ಮೊದಲಿಗಿಂತಲೇ ಹೆಚ್ಚಿನ ವರ್ಚಸ್ಸು ಪಡೆದುಕೊಳ್ಳಲಿದೆ. ಪ್ರಯಾಣಿಕರಿಗೆ ಹೊಸ ರೂಪದಲ್ಲಿ ಹಳೆ ಬಸ್ ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆ ನಿರ್ದೇಶಕ ರುದ್ರೇಶ ಗಾಳಿ ಮಾಹಿತಿ ನೀಡಿದ್ದಾಎರ.
ಗ್ಲಾಸ್ ಅಳವಡಿಕೆ ಸೇರಿ ಸಣ್ಣ ಪುಟ್ಟ ಕೆಲಸಗಳು ಬಾಕಿ
ಮುಖ್ಯ ಕಟ್ಟಡ, ಗ್ಲಾಸ್ ಮುಂಭಾಗದ ಕೆಲಸಗಳು ಭರದಿಂದ ಸಾಗಿವೆ. ಇದೇ ನವೆಂಬರ್ ತಿಂಗಳ ಅಂತ್ಯಕ್ಕೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಹಲವು ವಿಶೇಷ ಸೌಲಭ್ಯಗಳನ್ನು ಒಳಗೊಂಡಿರುವ ಕಾರಣ ನಿಲ್ದಾಣವು ಸುವ್ಯವಸ್ಥಿತವಾಗಿ ಮತ್ತು ಅತ್ಯಾಕರ್ಷವಾಗಿರಲಿದೆ.

ಜನದಟ್ಟಣೆ ಹಾಗೂ ಪ್ರಯಾಣಿಕರ ಆದ್ಯತೆಗೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ. ಚನ್ನಮ್ಮ ವೃತ್ತದ ಬಳಿಯೇ ಇರುವ ಕಾರಣಕ್ಕೆ ವಾಹನ ದಟ್ಟಣೆ ಇಲ್ಲಿ ಹೆಚ್ಚಿರುತ್ತದೆ. ಪ್ರಯಾಣಿಕರ ಸುರಕ್ಷತೆ, ಸಾಗುವ ಮಾರ್ಗಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ
ಟರ್ಮಿನಲ್ 3 ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.
ರೂ. 42 ಕೋಟಿ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣ
2022ರಲ್ಲಿ 3 ಎಕರೆ 7 ಗುಂಟೆ ಜಾಗದಲ್ಲಿ ರೂ. 42 ಕೋಟಿಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಮೊದಲನೇ ಹಂತ ಬೇಸ್ಮೆಂಟ್, ಗ್ರೌಂಡ್ ಮಹಡಿ ಮತ್ತು 1ನೇ ಮಹಡಿ ಇರಲಿದೆ. ಹುಬ್ಬಳ್ಳಿಯ ಹಳೇ ನಿಲ್ದಾಣದ ಹೊಸ ರೂಪ ಕಾರ್ಯ ನಿರ್ವಹಣೆ ಹೇಗಿರಲಿದೆ? ಬಿಆರ್‌ಟಿಎಸ್ ಮತ್ತು ಸಿಟಿ ಸೇವೆಗಳನ್ನು ನೆಲ ಮಹಡಿಯಿಂದ ನಿರ್ವಹಣೆಗೆ ನಿಯೋಜಿಸಲಾಗುವುದು.
ಪಾರ್ಕಿಂಗ್ ಸೇರಿ ನಿಲ್ದಾಣದಲ್ಲಿ ಎಲ್ಲ ವ್ಯವಸ್ಥೆ
ಇನ್ನೂ ಇಲ್ಲಿಂದ ಉಪನಗರ ಸೇವೆಗೆ ನಿಯೋಜಿತ ಬಸ್‌ಗಳು 1ನೇ ಮಹಡಿಯಿಂದ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತದೆ. ನೆಲಮಾಳಿಗೆಯಲ್ಲಿ ಸುಮಾರು 100 ಬೈಕ್‌ಗಳು, 70 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಬಸ್ ಟರ್ಮಿನಲ್ ಸ್ವಾವಲಂಬಿಯಾಗಲು ಟರ್ಮಿನಲ್ 25,000 kW ಸೌರ ವಿದ್ಯುತ್ ಸ್ಥಾವರ ಸೌಲಭ್ಯ ಒದಗಿಸಲಾಗಿದೆ. ವಿದ್ಯುತ್ ಇಲ್ಲದಿದ್ದಾಗಲೂ ನಿಲ್ದಾಣದೊಳಗೆ ಬೆಳಕು ಇರುತ್ತದೆ. ಇನ್ನೂ ಬೇಸ್ಮೆಂಟ್ನಲ್ಲಿ ವಾಹನಗಳ ಪಾರ್ಕಿಂಗ್ಗೂ ಸ್ಥಳಾವಕಾಶ ಇದೆ. ಮೊದಲ ನೆಲಮಹಡಿಯಲ್ಲಿ ಬಿಆರ್‌ಟಿಎಸ್ ಹಾಗೂ ಸಿಟಿ ಬಸ್ ನಿಲ್ದಾಣಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ.
16 ಸಾರಿಗೆ ನಿಲ್ಲುವಷ್ಟು ವಿಶಾಲ ಜಾಗ
ಸಿಟಿ ಬಸ್ಗಾಗಿ 8 ಬೇಜ್ ಹಾಗೂ ಬಿಆರ್‌ಟಿಎಸ್ 6 ಬೇಜ್, 1,407 ಸ್ಕ್ವೇರ್ ಮೀಟರ್ ವಾಣಿಜ್ಯ ಮಳಿಗೆ,ಮೊದಲ ಮಹಡಿ ಸಾರಿಗೆ ಬಸ್ಗಾಗಿ ಮೀಸಲಿಡಲಾಗಿದೆ. ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ಕನಿಷ್ಠ 16 ಬಸ್‌ಗಳು ನಿಂತುಕೊಳ್ಳುವಷ್ಟು ವಿಶಾಲ ಜಾಗ ಇಲ್ಲಿದೆ ಎಂದು ಅವರು ವಿವರಿಸಿದ್ದಾರೆ.
ಪ್ರತಿ ಮಹಡಿಯಲ್ಲೂ ಪುರುಷರು, ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸಾ ಘಟಕ ಸ್ಥಾಪಿಸಲಾಗಿದ್ದು, ಓರ್ವ ವೈದ್ಯ ಸಿಬ್ಬಂದಿ ಹೊಂದಿರುವ ಚಿಕ್ಕ ಆಸ್ಪತ್ರೆಗೆ ಇಲ್ಲಿರಲಿದೆ.
ಹಿರಿಯ ನಾಗರಿಕರು, ವೃದ್ಧರು, ಮಕ್ಕಳು, ಮಹಿಳೆಯರ ಅನುಕೂಲಕ್ಕಾಗಿ ಲಿಫ್ಟ್ ಹಾಗೂ ಎಕ್ಸಿಲೇಟರ್ ವ್ಯವಸ್ಥೆ ಮಾಡಿದ್ದೇವೆ. ಇಷ್ಟೆಲ್ಲ ವ್ಯವಸ್ಥಿತ ಸೌಲಭ್ಯ ಹೊಂದಿರುವ ನಿಲ್ದಾಣದ ಕಾಮಗಾರಿಯ ಕೆಲಸವನ್ನು 2 ವರ್ಷ 4 ತಿಂಗಳಲ್ಲಿ ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.











Click it and Unblock the Notifications