ಹುಬ್ಬಳ್ಳಿ: ಶೇ. 40 ಆಯ್ತು, ಈಗ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಶೇ. 25 ಕಮಿಷನ್ ಆರೋಪ
ಹುಬ್ಬಳ್ಳಿ, ನವೆಂಬರ್ 26: ರಾಜ್ಯ ಸರ್ಕಾರದ ವಿರುದ್ಧ ಮತ್ತೊಂದು ಕಮಿಷನ್ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪ್ರಧಾನಿ ಕಚೇರಿಯ ಕದ ತಟ್ಟುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ ಸರ್ಕಾರ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಈ ಕುರಿತು ವಾಕ್ಸಮರವೇ ನಡೆದಿದೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ 40% ಕಮಿಷನ್ ಆರೋಪವನ್ನು ವಿಪಕ್ಷಗಳು ಮಾಡುತ್ತಲೆ ಇವೆ. ಇದರ ನಡುವೆ ಇದೀಗ ರಾಜ್ಯ ಸರ್ಕಾರದ ವಿರುದ್ಧ 25% ಕಮಿಷನ್ ಎನ್ನುವ ಹೊಸ ಆರೋಪ ಕೇಳಿಬರುತ್ತಿದೆ.

ಹೌದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಮಂಡಳಿ (ಹೆಸ್ಕಾಂ) ಅಧಿಕಾರಿಗಳ ವಿರುದ್ಧ ಕಮಿಷನ್ ಆರೋಪ ಕೇಳಿಬಂದಿದೆ. ಯಾವುದೇ ಗುತ್ತಿಗೆ ಪಡೆಯಬೇಕಾದರೆ ಶೇಕಡಾ 25ರಷ್ಟು ಕಮಿಷನ್ ನೀಡಬೇಕು ಎಂದು ಅನುಮತಿ ಪಡೆದ ರಾಜ್ಯ ಗುತ್ತಿಗೆದಾರರ ಸಂಘ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಸರ್ಕಾರ ಮತ್ತು ಹೆಸ್ಕಾಂ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ ಗಂಭೀರ ಆರೋಪ ಮಾಡಿದ ಹೆಸ್ಕಾಂ ಗುತ್ತಿಗೆದಾರರು, 25% ಕಮಿಷನ್ ಪಡೆದು ಹೊರ ರಾಜ್ಯದ ಗುತ್ತಿಗೆದಾರರಿಗೆ 472 ಕೋಟಿ ರೂಪಾಯಿ ಟೆಂಡರ್ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"472 ಕೋಟಿ ರೂಪಾಯಿ ಟೆಂಡರ್‌ಗೆ 25% ಕಮಿಷನ್ ಪಡೆದುಕೊಂಡಿದ್ದಾರೆ. ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದರೆ ಸುಮಾರು 3,000 ಗುತ್ತಿಗೆದಾರರಿಗೆ ಕಲಸ ಸಿಗುತ್ತಿತ್ತು. ಇದನ್ನೆಲ್ಲ ಬಿಟ್ಟು ಕಮಿಷನ್ ಆಸೆಗೆ ಕೇವಲ 40 ಜನರಿಗೆ ಟೆಂಡರ್ ನೀಡಿದ್ದಾರೆ. ಈ ಎಲ್ಲಾ ಭ್ರಷ್ಟಾಚಾರಕ್ಕೆ ಹೆಸ್ಕಾಂ ಎಂ.ಡಿ ಡಿ. ಭಾರತಿ ಮತ್ತು ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲೊಟ್ಟಿ ಕಾರಣ," ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಇನ್ನು ಈ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ದೇಶದಲ್ಲಿ ಭಾರಿ ಸದ್ದು ಮಾಡಿತ್ತು. ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು. ಅಲ್ಲದೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು, ಈ ಪ್ರಕರಣ ಮುಂದೆ ಯಾವ ರೀತಿಯಾಗಿ ತುರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications