Hubballi Special Train: ಹುಬ್ಬಳ್ಳಿಗೆ ಏಕಮುಖ ವಿಶೇಷ ರೈಲು: ವೇಳಾಪಟ್ಟಿ, ಸಂಪೂರ್ಣ ವಿವರ ಇಲ್ಲಿದೆ
ಹುಬ್ಬಳ್ಳಿ ಜೂನ್ 23: ಹುಬ್ಬಳ್ಳಿ-ಧಾರವಾಡ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಂದಿನಿಂದ ಹಜರತ್ ನಿಜಾಮುದ್ದೀನ್‌ಗೆ ವಿಶೇಷ ರೈಲು ಸಂಚಾರ ಮಾಡಲಿದೆ. ಈ ರೈಲಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ರೈಲು ಸೇವೆ ಹೆಚ್ಚಿಸಲು ರೈಲ್ವೆ ಇಲಾಖೆ ಯೋಚಿಸಿದೆ. ಪ್ರಯಾಣಿಕರ ನೂಕುನುಗ್ಗಲು ನಿವಾರಣೆಗಾಗಿ ಯಶವಂತಪುರದಿಂದ ಹುಬ್ಬಳ್ಳಿ ಮೂಲಕ ಹಜರತ್ ನಿಜಾಮುದ್ದೀನ್‌ಗೆ ಏಕಮುಖ ವಿಶೇಷ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ರೈಲು ಸಂಖ್ಯೆ 06519 ಯಶವಂತಪುರ-ಹಜರತ್ ನಿಜಾಮುದ್ದೀನ್ ಏಕಮುಖ ವಿಶೇಷ ರೈಲು 23 ಜೂನ್ 2024 ರಂದು ರಾತ್ರಿ 11:40 ಕ್ಕೆ ಯಶವಂತಪುರದಿಂದ ಹೊರಡಲಿದೆ. ಇದು ಹಜರತ್ ನಿಜಾಮುದ್ದೀನ್ ಅನ್ನು 26 ಜೂನ್ 2024 ರಂದು ಬುಧವಾರ ಬೆಳಿಗ್ಗೆ 06:30 ಕ್ಕೆ ತಲುಪಲಿದೆ.
ವಿಶೇಷ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ನಿಲ್ಲುತ್ತದೆ:
ತುಮಕೂರು, ಬಾಣಸಂದ್ರ, ಅರಸೀಕೆರೆ, ದಾವಣಗೆರೆ, ಹರಿಹರ, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಪುಣೆ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ಭೂಪಾಲ್, ಬಿನಾ, ವಿರಂಗನ ಲಕ್ಷ್ಮೀಬಾಯಿ ಝಾನ್ಸಿ, ಮತ್ತು ಆಗ್ರಾ ಕ್ಯಾಂಟ್.

ಈ ವಿಶೇಷ ರೈಲು 9 ಸ್ಲೀಪರ್ ಕ್ಲಾಸ್, 11 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್/ಡಿ ಸೇರಿದಂತೆ ಒಟ್ಟು 22 ಕೋಚ್‌ಗಳನ್ನು ಒಳಗೊಂಡಿರುತ್ತದೆ ಎಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
ಬೆಂಗಳೂರು: ಗರ್ಡರ್ ಬದಲಾವಣೆಗಾಗಿ ರೈಲು ರದ್ದು
ನಿಟ್ಟೂರು-ಸಂಪಿಗೆ ರಸ್ತೆ ರೈಲು ನಿಲ್ದಾಣಗಳ ನಡುವೆ ಇರುವ ಲೆವೆಲ್ ಕ್ರಾಸಿಂಗ್‌ನಲ್ಲಿ ಹಳಿಯಲ್ಲಿ ಗರ್ಡರ್ ಅಳವಡಿಸುವ ಮತ್ತು ತೆರೆಯುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಜೂನ್ 27 ರಿಂದ ಜುಲೈ 4ರವರೆಗೆ 8 ರೈಲುಗಳನ್ನು ರದ್ದುಪಡಿಸಲಾಗಿದೆ. ಕೆಲವನ್ನು ಭಾಗಶ: ರದ್ದು ಮಾಡಲಾಗಿದ್ದು, ಇನ್ನು ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ.
ತುಮಕೂರು- ಚಾಮರಾಜನಗರ, ಚಾಮರಾಜನಗರ-ಮೈಸೂರು, ಚಾಮರಾಜನಗರ-ಯಶವಂತಪುರ, ಯಶವಂತಪುರ-ಚಾಮರಾಜನಗರ, ತುಮಕೂರು-ಕೆಎಸ್‌ಆರ್ ಬೆಂಗಳೂರು, ಕೆಎಸ್‌ಆರ್ ಬೆಂಗಳೂರು-ತುಮಕೂರು, ಯಶವಂತಪುರ-ಶಿವಮೊಗ್ಗ, ಶಿವಮೊಗ್ಗ-ಯಶವಂತಪುರ ರೈಲುಗಳನ್ನು ಈ ಅವಧಿಯಲ್ಲಿ ರದ್ದು ಮಾಡಲಾಗಿದೆ.
ಕೆಎಸ್‌ಆರ್ ಬೆಂಗಳೂರು-ತುಮಕೂರು-ಕೆಎಸ್‌ಆರ್ ಬೆಂಗಳೂರು ರೈಲುಗಳನ್ನು ಹಿರೇಹಳ್ಳಿ-ತುಮಕೂರು ನಡುವೆ ಭಾಗಶ: ರದ್ದುಗೊಳಿಸಲಾಗಿದೆ. ತಾಳಗುಪ್ಪ-ಕೆಎಸ್‌ಆರ್ ಬೆಂಗಲೂರು ರೈಲು, ಕೆಎಸ್‌ಆರ್ ಬೆಂಗಲೂರು-ಧಾರವಾಡ-ಕೆಎಸ್‌ಆರ್ ಬೆಂಗಳೂರು ರೈಲುಗಳು ಅರಸೀಕೆರೆ- ಬೆಂಗಲೂರು ನಡುವೆ ಭಾಗಶ: ರದ್ದು ಮಾಡಲಾಗಿದೆ.
ವಾಸ್ಕೋ ಡ ಗಾಮ-ಯಶವಂತಪುರ ರೈಲು, ಮೈಸೂರು-ವಾರಾಣಾಸಿ, ಯಶವಂತಪುರ-ಜೈಪುರ, ಮೈಸೂರು-ಬೆಳಗಾವಿ ರೈಲುಗಳ ಅರಸಿಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿದೆ. ಮೈಸೂರು-ಉದಯಪುರ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸಿಕೆರೆ, ದಾವಣಗೆರೆಗೆ ತೆರಳಲಿದೆ.












Click it and Unblock the Notifications