ಹುಬ್ಬಳ್ಳಿ ಅಗ್ನಿದುರಂತದಲ್ಲಿ ಸಾವನ್ನಪ್ಪಿದವರಿಗೆ ತಿಂಗಳಾದರೂ ಸಿಕ್ಕಿಲ್ಲ ಪರಿಹಾರ
ಹುಬ್ಬಳ್ಳಿ, ಅಗಸ್ಟ್ 24: ನಗರದ ಹೊರವಲಯ ತಾರಿಹಾಳ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಐ.ಸಿ. ಪ್ಲೇಮ್ ಕಾರ್ಖಾನೆಯಲ್ಲಿ ಜುಲೈ 23 ರಂದು ಸಂಭವಿಸಿದ್ದ ಅಗ್ನಿ ದುರಂತದಲ್ಲಿ 6 ಜನ ಬಡ ಕಾರ್ಮಿಕರು ಮೃತಪಟ್ಟಿದ್ದರು. ಆದರೆ ಕಾರ್ಮಿಕರು ಸತ್ತು ತಿಂಗಳಾದರೂ ಇನ್ನೂ ಸರಕಾರ ಘೋಷಿಸಿರುವ ಪರಿಹಾರ ಮಾತ್ರ ಇನ್ನೂ ಸಂತ್ರಸ್ತ ಕುಟುಂಬದ ಕೈಸೇರಿಲ್ಲ.
ಅಗ್ನಿ ದುರಂತದ ಸುದ್ದಿ ತಿಳಿಯುತ್ತಿದ್ದರಂತೆ ಜನ ಪ್ರತಿನಿಧಿಗಳ ದಂಡೇ ಅಲ್ಲಿಗೆ ಬಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವು ಜನಪ್ರತಿನಿಧಿಗಳು ಬಂದು ಪರಿಹಾರ ಭರವಸೆ ನೀಡಿ ಹೋಗಿದ್ದರು. ಬಹುದೊಡ್ಡ ಅಗ್ನಿ ಅವಘಡ ಸಂಭವಿಸಿ ಇದರಲ್ಲಿ ಮೃತಪಟ್ಟ 6 ಕಾರ್ಮಿಕರ ಕುಟುಂಬದವರಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ತಲಾ ಐದು ಲಕ್ಷ ರೂ. ಪರಿಹಾರ ಧನ ವಿತರಣೆಯಾಗಿಲ್ಲ.
ಘಟನೆಯಲ್ಲಿ ಅಂದು ಒಬ್ಬ ಮಹಿಳೆ, ಮರುದಿನ ಇಬ್ಬರು ಮೃತಪಟ್ಟಿದ್ದರು. ನಂತರ ಮೂವರು ಕಾರ್ಮಿಕರು ಸೇರಿ ಒಟ್ಟು ಆರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದ ಮರುದಿನ ಕಿಮ್ಸ್‌ಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ ಹಾಗೂ ಅಧಿಕಾರಿಗಳು, ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಆದರೆ ಈವರೆಗೂ ಬಿಡಿಗಾಸೂ ಕೂಡ ಮೃತರ ಕುಟುಂಬದವರ ಕೈ ಸೇರಿಲ್ಲ

ಮೃತರ ಮಕ್ಕಳ ಆರೈಕೆ ಮಾಡಲು ಬಾಲ ವಿಕಾಸ ಯೋಜನೆಯಡಿ ಮೂರು ವರ್ಷಗಳ ಕಾಲ ಅನುದಾನ ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು. ಇದರ ಬಗ್ಗೆಯೂ ಇದುವರೆಗೂ ಸ್ಪಷ್ಟನೆ ಸಿಕ್ಕಿಲ್ಲ. ಈಗ ಸರಕಾರ ಸ್ಥಳೀಯ ಜನ ಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚೆತ್ತುಕೊಂಡು ಕೂಡಲೇ ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ನೊಂದ ಕುಟುಂಬಗಳು ಆಗ್ರಹಿಸುತ್ತಿವೆ.
ಅಗ್ನಿ ದುರಂತದಲ್ಲಿ ಮೃತಪಟ್ಟವರ ಹೆಸರು
ಗದಗ- ಬೆಟಗೇರಿ ಮೂಲದ ವಿಜಯಲಕ್ಷ್ಮಿ ಯಚ್ಚಲಗಾರ (34), ತಾರಿಹಾಳದ ಗೌರವ್ವ ಹಿರೇಮಠ (45), ಚನ್ನವ್ವ ಅರಿವಾಳ (42), ಕಲಟಗಿ ತಾಲೂಕು ಲಿಂಗನಕೊಪ್ಪದ ಮೌಳೇಶ ಹದ್ದನ್ನವರ (27), ಬಿಡ್ನಾಳ ಎಸ್.ಎಂ.ಕೃಷ್ಣಾ ನಗರದ ಮಲ್ಲಿಕ್ರೆಹಾನ್ ಕೊಪ್ಪದ (18), ಭಂಡಿವಾಡದ ನಿರ್ಮಲಾ ಹುಚ್ಚಣ್ಣವರ (29) ಮೃತಪಟ್ಟ ಕಾಮಿರ್ಕರು.
ತಾರಿಹಾಳ ಅಗ್ನಿ ಅವಡದಲ್ಲಿ ಗಾಯಗೊಂಡಿದ್ದ 8 ಕಾಮಿರ್ಕರನ್ನೂ ಬದುಕಿಸಿಕೊಳ್ಳಲು ಸಾಕಷ್ಟು ಶ್ರಮಪಟ್ಟರೂ 6 ಜನ ಮೃತಪಟ್ಟರು. ಇಬ್ಬರು ಚೇತರಿಸಿಕೊಂಡಿದ್ದಾರೆ. ಮೃತರ ಕುರಿತ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು. ಎರಡು- ಮೂರು ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ತಿಳಿಸಿದ್ದಾರೆ.

ಕಾನೂನು ಉಲ್ಲಂಘಿಸಿದವರಿಗೆ ನೋಟಿಸ್
ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಆಗಸ್ಟ್ 12ರಂದು ತುರ್ತು ಸಭೆ ನಡೆಸಿದ್ದರು. ಧಾರವಾಡ ಮತ್ತು ಹುಬ್ಬಳ್ಳಿ ನಗರ ಅಭಿವೃದ್ಧಿ ಹೊಂದಿರುವ ಕೈಗಾರಿಕಾ ವಸಾಹತು ಮತ್ತು ಕೈಗಾರಿಕಾ ಪ್ರದೇಶದಲ್ಲಿ ಪರಿಶೀಲನೆಗೆ ನಡೆಸಿದ್ದರು. ಜೊತೆಗೆ ಕೈಗಾರಿಕೆಗಳು, ಅಂಗಡಿ ಮತ್ತು ಮುಂಗಟ್ಟುಗಳನ್ನು ಪರಿಶೀಲಿಸಲು ಆದೇಶ ನೀಡಿದ್ದಾರೆ.
ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯದಿರುವ ಕೈಗಾರಿಕಾ ಘಟಕಗಳಿಗೆ ನೋಟಿಸ್ ನೀಡಲಾಗಿದೆ. ಮೂರು ದಿನಗಳ ಒಳಗಾಗಿ ಇಲಾಖೆಯ ನಿಯಮಾವಳಿ ಪ್ರಕಾರ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದಾರೆ. ಎಲ್ಲಾ ಕೈಗಾರಿಕಾ ಘಟಕಗಳಿಗೆ ಇರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಎರಡು ತಿಂಗಳು ಕಾಲಾವಕಾಶ ನೀಡಲಾಗಿದೆ. ಕಾನೂನು ಉಲ್ಲಂಘಿಸಿದ ಕೈಗಾರಿಕಾ ಘಟಕಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.












Click it and Unblock the Notifications