ಬಡ್ಡಿ ಸಮೇತ ಹಣ ಹಿಂದಿರುಗಿಸುವಂತೆ ರೇಣುಕಾ ಲಕ್ಷ್ಮೀ ಡೆವಲಪರ್ಸ್‌ಗೆ ಗ್ರಾಹಕರ ಆಯೋಗ ಆದೇಶ
ಧಾರವಾಡ, ಜೂನ್ 14: ಹಣ ಪಡೆದು 9 ವರ್ಷ ಕಳೆದರೂ ಲೇಔಟ್ ನಿರ್ಮಿಸದೇ ಗ್ರಾಹಕರಿಗೆ ವಂಚಿಸಿದ ಸಂಸ್ಥೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಪಡೆದ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ಆದೇಶ ಹೊರಡಿಸಿದೆ.
ಹುಬ್ಬಳ್ಳಿಯ ವೀರಾಪುರ ಓಣಿಯ ತುಕಾರಾಮ ಕಟಾರೆ ಎನ್ನುವವರು 2013ರಲ್ಲಿ ರೇಣುಕಾ ಲಕ್ಷ್ಮೀ ಡೆವಲಪರ್ಸ್‌ನವರಿಂದ ನಾಗಶೆಟ್ಟಿಕೊಪ್ಪದಲ್ಲಿ ಶ್ರೀ ಗಣೇಶ ಟೌನ್‍ಶೀಪ್ ಎನ್ನುವ ಹೆಸರಿನಲ್ಲಿ ನಿರ್ಮಿಸುತ್ತಿದ್ದ ಲೇಔಟ್‌ನಲ್ಲಿ ಪ್ಲಾಟ ನಂ.4 ನ್ನು 12 ಲಕ್ಷ ಕೊಟ್ಟು ಖರೀದಿಸಿದ್ದರು.

ಈ ಬಗ್ಗೆ ಉಭಯತರ ಮಧ್ಯೆ ಕರಾರು ಒಪ್ಪಂದ ಪತ್ರ ಆಗಿತ್ತು. ದೂರುದಾರರು 12 ಲಕ್ಷ ರೂಪಾಯಿ ಹಣವನ್ನು ರೇಣುಕಾ ಲಕ್ಷ್ಮೀ ಡೆವಲಪರರ್ಸ್‌ಗೆ ಸಂದಾಯ ಮಾಡಿದ್ದರೂ ಅವರು ಲೇಔಟ ನಿರ್ಮಾಣ ಮಾಡಿರಲಿಲ್ಲ. ಸುಮಾರು 9 ವರ್ಷ ಕಳೆದರೂ ಎದುರುದಾರರು ಲೇಔಟ್ ನಿರ್ಮಾಣ ಮಾಡದೇ ಮತ್ತು ತನಗೆ ಸೈಟು ಖರೀದಿ ಹಾಕಿಕೊಡದೇ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ರೇಣುಕಾ ಲಕ್ಷ್ಮೀ ಡೆವಲಪರ್ಸ್‌ನವರ ಮೇಲೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ದೂರುದಾರ ತುಕಾರಾಮ ಕಟಾರೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಸದಸ್ಯರು, 2013ರಲ್ಲಿ ದೂರುದಾರನಿಂದ 12 ಲಕ್ಷ ರೂಪಾಯಿ ಹಣ ಪಡೆದುಕೊಂಡು ಲೇಔಟ್ ನಿರ್ಮಾಣ ಮಾಡದೇ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ದೂರುದಾರರಿಗೆ ಮೋಸ ಎಸಗಿ ಸೇವಾ ನ್ಯೂನ್ಯತೆಗೈದಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ದೂರುದಾರರು ಸಂದಾಯ ಮಾಡಿದ 12 ಲಕ್ಷ ರೂಪಾಯಿ ಮತ್ತು ಅದರ ಮೇಲೆ ಸೆಪ್ಟಂಬರ್ 11, 2013ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.15 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿ ಒಂದು ತಿಂಗಳ ಒಳಗಾಗಿ ರೇಣುಕಾ ಲಕ್ಷ್ಮೀ ಡೆವಲಪರ್ಸ್ ವಾಪಸ್ ಹಣ ನೀಡುವಂತೆ ಆಯೋಗ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 1 ಲಕ್ಷ ರೂಪಾಯಿ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ 10,000 ರೂಪಾಯಿ ಹಣ ನೀಡುವಂತೆ ರೇಣುಕಾ ಲಕ್ಷ್ಮೀ ಡೆವಲಪರ್ಸ್‌ನ ಆನಂದ ಹಬೀಬ್ ಅವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿಗಳು ಮತ್ತು ಸಹಾಯಕ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications