ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವಿಶೇಷತೆಗಳು!

ಹುಬ್ಬಳ್ಳಿ, ಏಪ್ರಿಲ್ 16; ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ಕಾರಣ ಶಾಸಕ ಸ್ಥಾನಕ್ಕೆ ಶೆಟ್ಟರ್ ರಾಜೀನಾಮೆ ನೀಡಿ ಬೆಂಗಳೂರಿನ ವಿಮಾನ ಏರಿದ್ದಾರೆ. ಈ ಕ್ಷೇತ್ರದಲ್ಲಿ ಹಲವು ಅಚ್ಚರಿಗಳಿವೆ. ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಸದ್ಯದ ಪ್ರಶ್ನೆ.

ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿ ಕ್ಷೇತ್ರವಿದು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಗೆದ್ದ ಜಗದೀಶ್‌ ಶೆಟ್ಟರ್ 21ನೇ ಮುಖ್ಯಮಂತ್ರಿಯಾಗಿದ್ದರು. ಎಸ್. ಆರ್. ಬೊಮ್ಮಾಯಿ ಇದೇ ಕ್ಷೇತ್ರದಿಂದ ಗೆದ್ದು 11ನೇ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ಜಗದೀಶ್ ಶೆಟ್ಟರ್ 1994ರಲ್ಲಿ ಎಸ್. ಆರ್. ಬೊಮ್ಮಾಯಿ ಸೋಲಿಸಿದ ಬಳಿಕ ಸತತ ಆರು ಬಾರಿ ಇಲ್ಲಿಂದ ಗೆಲುವು ಸಾಧಿಸಿದ್ದಾರೆ.

jagadish-shettar

ಒಮ್ಮೆ ಆಯ್ಕೆ ಮಾಡಿದವರನ್ನು ಮತ್ತೆ ಮತ್ತೆ ಆಯ್ಕೆ ಮಾಡುವುದು ಕ್ಷೇತ್ರದ ಜನರ ವಿಶೇಷತೆ. ಅದಕ್ಕೆ ಸಾಕ್ಷಿ ಎಂಬಂತೆ 1957 ರಿಂದ 2018ರ ತನಕ ಕೇವಲ ನಾಲ್ಕು ಜನರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಿಂದ 6 ಬಾರಿ ಗೆಲುವು ದಾಖಲು ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ ಅವರದ್ದು.

ಎದುರಾಳಿಗಳು ಒಂದೇ ಪಕ್ಷದಲ್ಲಿ; ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಮತ್ತೊಂದು ಅಚ್ಚರಿಯ ಅಂಶ ಎಂದರೆ ಇಲ್ಲಿ 2018ರಲ್ಲಿ ಎದುರಾಳಿಗಳಾಗಿದ್ದ ಎಲ್ಲರೂ ಈಗ ಒಂದೇ ಪಕ್ಷದಲ್ಲಿದ್ದಾರೆ. ಎಲ್ಲರೂ ಸಹ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಜಗದೀಶ್ ಶೆಟ್ಟರ್ 75,794 ಮತಗಳನ್ನು ಪಡೆಯುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು.

hubballi-dharwad

ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು ಡಾ. ಮಹೇಶ್ ನಲ್ವಾಡ್. ಚುನಾವಣೆಯಲ್ಲಿ ಅವರು 54,488 ಮತಗಳನ್ನು ಪಡೆದು 2ನೇ ಸ್ಥಾನ ಪಡೆದಿದ್ದರು. ಚುನಾವಣೆ ಬಳಿಕ ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಈ ಮೂಲಕ ಈ ಸಲದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಹುಡುಕಬೇಕಾದ ಅನಿವಾರ್ಯತೆ ಹುಟ್ಟುಹಾಕಿದ್ದರು.

ಜೆಡಿಎಸ್‌ನಿಂದ ಕಳೆದ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದ ರಾಜಣ್ಣ ಕೊರವಿ 10,754 ಮತಗಳನ್ನು ಪಡೆದು ಸೋಲು ಕಂಡಿದ್ದರು. ಇವರು ಸಹ ಚುನಾವಣೆ ಬಳಿಕ ಬಿಜೆಪಿಗೆ ಬಂದಿದ್ದಾರೆ. ಒಟ್ಟು 26 ಅಭ್ಯರ್ಥಿಗಳು ಕಳೆದ ಬಾರಿ ಚುನಾವಣಾ ಕಣದಲ್ಲಿದ್ದರು. 21,306 ಮತಗಳ ಅಂತರದಿಂದ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದರು.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಒಟ್ಟು ಮತದಾರರು ಸುಮಾರು 2,48,904. ಲಿಂಗಾಯತ ಸಮುದಾಯ ಇಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಸಮುದಾಯದ ಮತಗಳು ಸುಮಾರು 74 ಸಾವಿರ. ಆದ್ದರಿಂದ ಪಕ್ಷಗಳು ಸಹ ಲಿಂಗಾಯತ ಸಮುದಾಯದ ನಾಯಕರಿಗೆ ಟಿಕೆಟ್ ನೀಡುತ್ತದೆ.

ದಾವಣಗೆರೆಯ ಧಣಿ ಎಂದೇ ಕರೆಸಿಕೊಳ್ಳುವ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಶಾಮನೂರು ಶಿವಶಂಕರಪ್ಪ ಜಗದೀಶ್ ಶೆಟ್ಟರ್ ಬೀಗರು. ಭಾನುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ಕಳಿಸಿದ ವಿಮಾನದಲ್ಲಿಯೇ ಶೆಟ್ಟರ್ ಬೆಂಗಳೂರಿನತ್ತ ಹೊರಟಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಈ ಬಾರಿಯ ಟಿಕೆಟ್ ಆಕಾಂಕ್ಷಿ ರಜತ್ ಉಳ್ಳಾಗಡ್ಡಿ ಸಹ ಶೆಟ್ಟರ್ ಜೊತೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಇನ್ನು ಈ ಬಾರಿಯ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇನ್ನೂ ಸಹ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಜಗದೀಶ್ ಶೆಟ್ಟರ್ ನಡೆ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿಯು ಬಿಜೆಪಿ ಶೆಟ್ಟರ್‌ಗೆ ಟಿಕೆಟ್ ನೀಡಲಿದೆ ಎಂದು ಅಂದಾಜಿಸಲಾಗಿತ್ತು. ಕಾಂಗ್ರೆಸ್‌ನಿಂದ ರಜತ್ ಉಳ್ಳಾಗಡ್ಡಿ, ಗಿರೀಶ್ ಗದಿಗೆಪ್ಪಗೌಡ, ಅನಿಲ್ ಕುಮಾರ್ ಪಾಟೀಲ್ ಆಕಾಂಕ್ಷಿಯಾಗಿದ್ದರು. ಜೆಡಿಎಸ್‌ನಿಂದ ತಬ್ರೇಜ್ ಸಂಶಿ ಟಿಕೆಟ್ ಆಕಾಂಕ್ಷಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+