ಬಿಜೆಪಿಯಿಂದ ಕೋಮುಭಾವನೆ ಸೃಷ್ಟಿ ಎಂದ ಪ್ರಸಾದ್ ಅಬ್ಬಯ್ಯ: ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಹುಬ್ಬಳ್ಳಿ, ಜನವರಿ 02: ಒಂದು ಕಡೆ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ದಿನಗಳು ಸಮೀಪಿಸುತ್ತಿವೆ. ಮತ್ತೊಂದೆಡೆ ಮೂರು ದಶಕದ ಹಳೆಯ ರಾಮಜನ್ಮಭೂಮಿ ಕುರಿತು ನಡೆದಿದ್ದ ಹೋರಾಟದ ಮರುಪರಿಶೀಲನೆ ಆರಂಭವಾಗಿದೆ. ಇದೆಲ್ಲವು ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಇದೀಗ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವುದೇ ಜವಾಬ್ದಾರಿ ಇಲ್ಲದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕರಿಗೆ ಕೇವಲ ಕೋಮುಭಾವನೆ ಕೆರಳಿಸುವ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಮ ಜನ್ಮಭೂಮಿ ಪ್ರಕರಣದಲ್ಲಿ ಬಂಧನ ಮಾಡಿದ್ದು ಯಾವುದೇ ಕೆಟ್ಟ ಉದ್ದೇಶವಿಲ್ಲ. ಅದು ಬಾಕಿ ಪ್ರಕರಣದಲ್ಲಿ ಅವರ ಬಂಧನ ಆಗಿದೆ ಆದರೆ ಅದಕ್ಕೋ ರಾಜಕಾರಣಕ್ಕೋ ಬಣ್ಣ ಹಚ್ಚುವ ಕೆಲಸ ಬೇಡ ಎಂದು ಅವರು ಸ್ಪಸ್ಟಪಡಿಸಿದರು.

ಚುನಾವಣೆಗೆ ಹುನ್ನಾರ
ಪೊಲೀಸರು ಅವರ ಅವರ ಕೆಲಸ ಮಾಡತ್ತಿದ್ದಾರೆ. ಅದೊಂದು ರೂಟಿನ್ ಕೆಲಸ ಅಷ್ಟೇ ಆದರೆ ಇದನ್ನೇ ದೊಡ್ಡ ರಾದ್ಧಾಂತ ಮಾಡುವುದು ಸರಿಯಲ್ಲ. ಈಗ ಲೋಕಸಭಾ ಚುನಾವಣೆ ಸಮೀಪುಸತ್ತಿದೆ. ಇದೆ ಇದೇ ವಿಷಯವನ್ನ ರಾಜಕೀಯ ವಿಷಯವಾಗಿ ಬಳಸಿಕೊಳ್ಳಲು ಹುನ್ನಾರ ನಡೆದಿದೆ ಎಂದು ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಜನರಿಗೆ ಗೊತ್ತಿದೆ ಯಾವುದು ಸರಿ ಯಾವುದು ಸರಿ ಇಲ್ಲ ಅಂತಾ ಎಂದ ಅವರು ಇನ್ನು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್ ಅಶೋಕಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಬೇಕು. ಇದೆಲ್ಲ ಬಿಟ್ಟು ಇಂತಹ ಅನವಶ್ಯಕ ವಿಷಯಗಳ ಕುರಿತು ಪ್ರತಿಭಟನೆ ಮಾಡಬಾರದು.
ಪ್ರಕರಣ ತಿರುಚುತಿದ್ದಾರೆ
ಸದ್ಯ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಆಗಬೇಕು ಅದರ ಬಗ್ಗೆ ಅವರು ಮೊದಲು ಮಾತನಾಡಿ. ನಮ್ಮ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಬಹಳಷ್ಟು ಒತ್ತು ನೀಡಲಾಗಿದೆ. ಇದನ್ನು ಸಹಿಸಿಕೊಳ್ಳದ ಬಿಜೆಪಿ ನಾಯಕರು ಈ ರೀತಿಯಾಗಿ ಪ್ರಕರಣವನ್ನು ತಿರುಚಲು ಮುಂದಾಗಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯ ಜನರಿಗೆ ನಾವು ಕೊಟ್ಟ ಐದು ಗ್ಯಾರಂಟಿಗಳು ಬಹಳಷ್ಟು ಯಶಸ್ವಿಯಾಗಿವೆ. ಈ ಯಶಸ್ಸನ್ನ ಸಹಿಸಿಕೊಳ್ಳದ ಅವರು ಈಗ ಇದೊಂದು ಚುನಾವಣಾ ಗಿಮಿಕ್ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು. ರಾಮಜನ್ಮಭೂಮಿ ವಿಷಯ ಕುರಿತು ಅನಗತ್ಯವಾಗಿ ಗೊಂದಲ ಮಾಡಬಾರದು. ಹಳೇ ಹುಬ್ಬಳ್ಳಿ ಪ್ರಕರಣವೇ ಬೇರೆ ಈ ಪ್ರಕರಣವೇ ಬೇರೆ ಎಂದು ಅವರು ಹೇಳಿದರು.

ಹಿಂದೂ ದ್ವೇಷದ, ಮುಸ್ಲಿಂ ತುಷ್ಟೀಕರಣದ ರಾಜಕಾರಣ
ರಾಜ್ಯ ಸರ್ಕಾರದ ಕುಹಕ, ನೀಚತನದಿಂದ ರಾಮ ಭಕ್ತರ ಬಂಧಿಸಿದೆ. ರಾಮ ಮಂದಿರ ನಿರ್ಮಾಣವಾದರೆ ನಿಮಗೇಕೆ ಹೊಟ್ಟೆಕಿಚ್ಚು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರು ಹಿಂದು ಕಾರ್ಯಕರ್ತರ ಬಂಧನಕ್ಕೆ ಇದನ್ನು ಕೋರ್ಟ ವಾರಂಟ್ ಎಂದು ಸುಳ್ಳು ಹೇಳುತ್ತಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಇವರೇ ಪತ್ರ ಬರಿಯುತ್ತಾರೆ. ಕೆಜಿಹಳ್ಳಿ, ಡಿಜೆ ಹಳ್ಳಿ, ಪಿಎಫ್‌ಐ ಪ್ರಕರಣ ಹಿಂಪಡೆಯೋದು ಇವರೇ ಎಂದು ವಾಗ್ದಾಳಿ ನಡೆಸಿದರು.
ಐಎಸ್‌ಐಎಸ್ ಸರ್ಕಾರ ಎಂದು ಸಿದ್ದರಾಮಯ್ಯ ತಿಳಿದುಕೊಂಡಿದ್ದಾರೆ. ಮುಸಲ್ಮಾನರ ತುಷ್ಟೀಕರಣದ ಪರಾಕಾಷ್ಟೆ ಇದು ಎಂದು ಜೋಶಿ ಕಿಡಿಕಾರಿದರು. ಸಿದ್ದರಾಮಯ್ಯ ಅನಗತ್ಯವಾಗಿ ದ್ವೇಷ, ಅಸೂಯೆ ಹುಟ್ಟು ಹಾಕುತ್ತಿದ್ದಾರೆ. ಇದನ್ನೇ ಮುಂದುವರೆಸುತ್ತೇವೆ ಎಂಬ ದಾರ್ಷ್ಟ್ಯ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಹಿಂದೂ ದ್ವೇಷದ, ಮುಸ್ಲಿಂ ತುಷ್ಟೀಕರಣದ ಪರಾಕಾಷ್ಟೆಯಾಗಿದೆ ಎಂದು ಗುಡುಗಿದರು.












Click it and Unblock the Notifications