Hubli Airport: ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಸ್ತರಣೆ-ನವೀಕರಣ ಅಪ್ಡೇಟ್ ಮಾಹಿತಿ
ಹುಬ್ಬಳ್ಳಿ, ನವೆಂಬರ್ 28: ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ವಿಮಾನ ನಿಲ್ದಾಣದ ಸಂಚಾರ ದಟ್ಟಣೆ ಅವಶ್ಯಕತೆ ಹಾಗೂ ಸಾಮರ್ಥ್ಯದ ಪರಿಮಿತಿಯನ್ನು ವಿಸ್ತರಣೆ ಆಗಲಿದೆ. ಮುಂದಿನ ಮೂರು ವರ್ಷಗಳ ಏರ್‌ಪೋರ್ಟ್ ಅಗತ್ಯತೆಗಳು, ಸಂಚಾರ ದಟ್ಟಣೆಗೆ ಅನುಗುಣವಾಗಿ ಹೊಸ ನಿಲ್ದಾಣದ ನಿರ್ಮಾಣ ಕಾರ್ಯ ಇದೇ ಡಿಸೆಂಬರ್ ಅಂತ್ಯದೊಳಗೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ.
ಹೌದು, ಹುಬ್ಬಳ್ಳಿ ನಗರ ಬೆಳೆಯುತ್ತಿರುವ ನಗರಗಳ ಪೈಕಿ ಪ್ರಮುಖ ನಗರವಾಗಿದೆ. ವಿಮಾನಯನ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಈ ಸಂಬಂಧ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧಿಕಾರಿಗಳ ಜೊತೆಗೆ ಮಂಗಳವಾರ ಪ್ರಹ್ಲಾದ್ ಜೋಶಿ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು. ಸಭೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ಬಳಕೆದಾರರ ಸಲಹಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ಹುಬ್ಬಳ್ಳಿ ವಿಮಾನ ನಿಲ್ದಾಣದ ಈಗಿನ ಸಾಮರ್ಥ್ಯ ಗಾತ್ರ ಹಾಗೂ ಇತರ ಸೌಲಭ್ಯಗಳ ವಿಸ್ತರಣೆಗಾಗಿ ಸಚಿವ ಜೋಶಿ ಅವರ ಕೋರಿಕೆಯ ಮೇರೆಗೆ ಈಗಾಗಲೇ ಕೇಂದ್ರ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಿದೆ. ಈಗ ಒಟ್ಟು 340 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಕೊನೆಗೊಳ್ಳಲಿದೆ.
ತಜ್ಞ ಸಂಸ್ಥೆಗಳ ಸಂಪರ್ಕಿಸಲು ಜೋಶಿ ಸಲಹೆ
ಡಿಸೆಂಬರ್ ಅಂತ್ಯದ ಒಳಗೆ ಕಾಮಗಾರಿ ಆರಂಭವಾಗುವುದು. ನಿರ್ಮಾಣ ಕಾರ್ಯ ಮುಕ್ತಾಯಗೊಂಡಾಗ ಈ ಭಾಗದ ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆಯನ್ನು ಪ್ರತಿಫಲಿಸುವಂತೆ ಹೊರನೋಟ (ಫ್ರಂಟ್ ಎಲಿವೇಶನ್) ಹೇಗಿರಬೇಕೆಂಬುದನ್ನು ಸಚಿವರು ಅಧಿಕಾರಿಗಳಿಗೆ ವಿವರಿಸಿದರು. ಈ ಸಂಬಂಧವಾಗಿ ಸ್ಥಳೀಯವಾಗಿ ಲಭ್ಯವಿರುವ ತಜ್ಞ ಸಂಸ್ಥೆಗಳ ಸೇವೆ ಪಡೆಯುವಂತೆ ತಿಳಿಸಿದರು.
15,950 ಚ.ಮಿ. ವಿಸ್ತೀರ್ಣದಲ್ಲಿ ಹೊಸ ನಿಲ್ದಾಣದಲ್ಲಿ 4 ಏರೋ ಬ್ರಿಜ್ ಸಹಿತ ಏಕ ಕಾಲಕ್ಕೆ 2,400 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ, ಮತ್ತಿತರ ಸುಸಜ್ಜಿತ ನಿಲ್ದಾಣವಾಗಲಿದೆ ಹಾಗೂ ಸಮಸ್ತ ಉತ್ತರ ಕರ್ನಾಟಕದ ಹೆಮ್ಮೆಯ ನಿಲ್ದಾಣವಾಗಿ ಹೊರ ಹೊಮ್ಮಲಿದೆ. ನಿಲ್ದಾಣ ಪರಿಸರ ಸ್ನೇಹಿಯಾಗಿರಲಿದೆ ಎಂದು ಜೋಶಿ ಹೇಳಿದರು.
ಪ್ರಯಾಣಿಕರಿಗೆ ಅದ್ಭುತ ಅನುಭವ ನೀಡಲಿದೆ
ನೂತನ ಯೋಜನೆಯಂತೆ ಹುಬ್ಬಳ್ಳಿ ವಿಮಾನ ನಿಲ್ದಾಣ ಅಗಾಧ ಬೆಳವಣಿಗೆ ಕಾಣುತ್ತಿದೆ. ಈ ಬಗ್ಗೆ ಸಭೆಯಲ್ಲಿ ಹಲವಾರು ವಿಷಯಗಳನ್ನು ರ್ಚಚಿಸಲಾಯಿತು. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ ಸಾಕಷ್ಟು ನವೀಕರಣ ಕಾಣಲಿದೆ. ಇದು ಪ್ರಯಾಣಿಕರಿಗೆ ಅದ್ಭುತ ಅನುಭವವನ್ನು ನೀಡಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣ ಉತ್ತರ ಕರ್ನಾಟಕ ಭಾಗದ ಪ್ರಮುಖ ವಿಮಾನ ನಿಲ್ದಾಣವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರವಾಗಿದ್ದು, ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ದೇಶದ ವಿವಿಧ ನಗರಗಳಿಂದ ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ವಿಮಾನ ನಿಲ್ದಾಣ ಪ್ರಮುಖ ಪಾತ್ರ ವಹಿಸುತ್ತದೆ.
ಹೊಸ ಕಟ್ಟಡ ವಿಸ್ತರಣೆ ಯೋಜನೆ
ಧಾರವಾಡ ಕರ್ನಾಟಕದ ವಿದ್ಯಾಕಾಶಿಯಾಗಿದೆ. ಐಐಟಿ ಸೇರಿದಂತೆ ಹಲವಾರು ಉನ್ನತ ಶಿಕ್ಷಣದ ಕಾಲೇಜುಗಳಿವೆ. ಬೃಹತ್ ಕೈಗಾರಿಕಾ ಸಂಸ್ಥೆಗಳನ್ನು ಹೊಂದಿರುವ ಧಾರವಾಡ ಜಿಲ್ಲೆಗೆ ಭವಿಷ್ಯದಲ್ಲಿ ಭೇಟಿ ನೀಡುವ ಪ್ರಯಾಣಿಕರ ಸಂಖ್ಯೆ ಗಮನದಲ್ಲಿಟ್ಟುಕೊಂಡು ಹೊಸ ಕಟ್ಟಡ ವಿಸ್ತರಣೆ ಯೋಜನೆ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಹೊಸ ಟರ್ವಿುನಲ್ ಕಟ್ಟಡ ನಿರ್ಮಾಣಗೊಂಡ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಏರಿಕೆಯಾಗುವ ನಿರೀಕ್ಷೆ ಇದೆ. ದೇಶದ ಹಲವು ನಗರಗಳಿಗೆ ಹುಬ್ಬಳ್ಳಿಯಿಂದ ವಿಮಾನ ಸೇವೆಯನ್ನು ಆರಂಭಿಸಲು ಸಹ ಅನುಕೂಲವಾಗಲಿದೆ.
ವಿಮಾನ ನಿಲ್ದಾಣದ ನಿರ್ದೇಶಕ ಮನೋಜ್ ಶೇಖರನ್, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರನ್, ತಹಶೀಲ್ದಾರ ಕಲ್ಲನಗೌಡ ಪಾಟೀಲ, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರಾದ ಕೌಸ್ತುಭ ಸಂಶೀಕರ, ಸತೀಶ ಮುನವಳ್ಳಿ, ಜಯರಾಮ ಶೆಟ್ಟಿ, ಸುನೀಲ ಸರ್ವದೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.












Click it and Unblock the Notifications