Huabblli Airport: 2.5 ಲಕ್ಷ ಪ್ರಯಾಣಿಕರ ಗುರಿ ಸಹಿತ ಏರ್‌ಪೋರ್ಟ್ ಮೇಲ್ದರ್ಜೆಗೆ: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಸೆಪ್ಟಂಬರ್ 29: ಭವಿಷ್ಯದ ದೃಷ್ಟಿಯಿಂದ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ (Hubballi Airport news) ಪ್ರಯಾಣಿಕ ಜನದಟ್ಟಣೆಯ ಭವಿಷ್ಯ ದೃಷ್ಟಿಯಿಂದ ಇಟ್ಟುಕೊಂಡು ಕೇಂದ್ರ ಸರ್ಕಾರ ಹೊಸ ಟರ್ಮಿನಲ್ ಸ್ಥಾಪನೆಗೆ ಅನುಮೋದನೆ ನೀಡಿತ್ತು. ಕಟ್ಟಡ ನಿರ್ಮಾಣದ ಕಾಮಗಾರಿ ಕೆಲಸ ಬರದಿಂದ ಸಾಗಿದೆ. ಇದು ಈ ಏರ್‌ಪೋರ್ಟ್‌ಗೆ ಅಂತಾರಾಷ್ಟ್ರೀಯ ಮೆರಗು ನೀಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಭಾನುವಾರ ಕೇಂದ್ರ ಸಚಿವರು ವಿಮಾನ ನಿಲ್ದಾಣದ ಟರ್ಮಿನಲ್ ಹೊಸ ಕಟ್ಟಡ ಕಾಮಗಾರಿಯ ಪ್ರಗತಿ ವೀಕ್ಷಿಸಿದರು. ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆಗೆ ಪರಿಶೀಲನಾ ಸಭೆ ನಡೆಸಿ ಬಳಿಕ ಯೋಜನೆ ವಿವರ ಕೊಟ್ಟರು.

ಹುಬ್ಬಳ್ಳಿಯಲ್ಲಿ ಸದ್ಯ ವಾರ್ಷಿಕ 50,000 ಜನರ ನಿರ್ವಹಣೆಗೆ ಆಗುವಷ್ಟು ವಿಶಾಲವಾಗಿ ಟರ್ಮಿನಲ್ ಇದೆ. ಭವಿಷ್ಯ ದೃಷ್ಟಿಯಿಂದ ಈ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಹುಬ್ಬಳ್ಳಿ ನಿರ್ಮಿಸಲಾಗುತ್ತಿದೆ. ನಿಲ್ದಾಣಕ್ಕೆ ಅಗತ್ಯವಾದ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಮೇಲ್ದರ್ಜೆ ಸೌಲಭ್ಯ ನೀಡಲಿದ್ದೇವೆ. ಇದರಿಂದ ಇಡೀ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಪಥ ವೇಗ ಪಡೆಯಲಿದೆ ಎಂದು ಅವರು ವಿವರಿಸಿದರು.
2.5 ಲಕ್ಷ ಪ್ರಯಾಣಿಕರ ನಿರ್ವಹಣೆ ಗುರಿ
ಕೇಂದ್ರ ಸರ್ಕಾರವು ವಾರ್ಷಿಕ 2.5 ಲಕ್ಷ ಪ್ರಯಾಣಿಕರ ನಿರ್ವಹಣೆ ನಿರೀಕ್ಷೆ ಸಹಿತ ಹೊಸ ಬೃಹತ್ ಟರ್ಮಿನಲ್ ನಿರ್ಮಿಸಲು 270 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈಗ ವಾರ್ಷಿಕ 50 ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣ ಬಳಸುತ್ತಿದ್ದಾರೆ. ಆದಷ್ಟು ಶೀಘ್ರವೇ 2.5 ಲಕ್ಷ ಪ್ರಯಾಣಿಕರಿಗೆ ತಕ್ಕಂತಹ ಅಗತ್ಯ ಸೌಲಭ್ಯಗಳನ್ನು ಈ ವಿಮಾನ ನಿಲ್ದಾಣ ಹೊಂದಲಿದೆ ಎಂದರು.

ಬಹುದೊಡ್ಡ ಪ್ರಮಾಣದಲ್ಲಿ ಹೊಸ ಟರ್ಮಿನಲ್ ಅಭಿವೃದ್ಧಿಪಡಿಸುವ ಕಾರ್ಯ ನಡೆಯಲಿದೆ. ನಾವು ಈಗಾಗಲೇ ಕಾಮಗಾರಿ ಆರಂಭಕ್ಕೆ ಕೇಂದ್ರ ಸಚಿವಾಲಯದಿಂದ ತಾತ್ವಿಕ ಒಪ್ಪಿಗೆ ಪಡೆದುಕೊಂಡಿದ್ದೇವೆ. ಶೀಘ್ರವೇ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಿದ್ದೇವೆ ಎಂದು ಹೇಳಿದರು.
10 ಬೋಯಿಂಗ್ ವಿಮಾನ ನಿಲ್ಲುವಂತೆ ವಿಸ್ತರಣೆ
ಹಾಲಿ ವಿಮಾನ ನಿಲ್ದಾಣದಲ್ಲಿ 4 ವಿಮಾನಗಳು ಏಕಕಾಲಕ್ಕೆ ನಿಲ್ಲುವಷ್ಟು ಸ್ಥಳಾವಕಾಶ ಇದೆ. ಅದನ್ನು ಸುಮಾರು 10 ಏರ್‌ಬಸ್, ಬೋಯಿಂಗ್ ವಿಮಾನಗಳು ನಿಲ್ಲಿಸುವಷ್ಟರ ಮಟ್ಟಿಗೆ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಅಭಿವೃದ್ಧಿ ಕಾರ್ಯಕಗಳು ಶೀಘ್ರವೇ ಶುರುವಾಗಲಿವೆ. ಈ ಸಂಬಂಧ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ.
ಕಾಮಗಾರಿಗೆ ಪ್ರಧಾನಿ ಮೋದಿ ಚಾಲನೆ
ಇದೇ ವರ್ಷ 2024ರ ಮಾರ್ಚ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು 273 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಸದ್ಯ ಕಾಮಗಾರಿ ವೇಗ ಪಡೆಯುತ್ತಿದ್ದು, ಇನ್ನಷ್ಟು ಕೆಲಸಗಳಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಹುಬ್ಬಳ್ಳಿಯಲ್ಲಿ ಬೃಹತ್ ಕಾಮಗಾರಿಗೆ ಸಮ್ಮತಿ ನೀಡಿ ಕೈಗೆತ್ತಿಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸಭೆಯಲ್ಲಿ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಪಾಲ್ಗೊಂಡರು. ಏರ್‌ಪೋರ್ಟ್ ಕಾಮಗಾರಿ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಸಚಿವರಿಗೆ ಸಭೆ ಸದಸ್ಯರು ನೀಡಿದರು.












Click it and Unblock the Notifications