Karnataka Rajyotsava 2023: ಮದುವಣಗಿತ್ತಿಯಂತೆ ಜಗಮಗಿಸುತ್ತಿರುವ ಹುಬ್ಬಳ್ಳಿ
ಹುಬ್ಬಳ್ಳಿ, ನವೆಂಬರ್, 01: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿ 50 ವರ್ಷವಾಗಿರುವ ಹಿನ್ನೆಲೆ ಹಾಗೂ 68ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲು ನಗರದಲ್ಲಿ ಭರ್ಜರಿ ತಯಾರಿ ಮಾಡಲಾಗುತ್ತಿದೆ. ಹುಬ್ಬಳ್ಳಿ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಇಡೀ ದಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ಆಚರಿಸಿದರೆ, ಜಿಲ್ಲೆಯ ಆಯಾ ತಾಲ್ಲೂಕಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗಿದೆ. ಈ ಬಾರಿ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದ್ದು, ಅಂದು ವೇದಿಕೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ನಾಡಗೀತೆ, ಸಮೂಹ ಗೀತ ಗಾಯನ ಮತ್ತು ನೃತ್ಯ , ಗೌರವ ವಂದನೆ, ಸಾಧಕರಿಗೆ ಸನ್ಮಾನ, ಪೊಲೀಸ್ ಕವಾಯತು ಕಾರ್ಯಕ್ರಮಗಳನ್ನು ಎಂದಿನಂತೆಯೇ ಆಯೋಜಿಸಲಾಗುವುದು.

ಅಲ್ಲದೆ ನಗರದ ಜಿಲ್ಲಾಧಿಕಾರಿಗಳ ಮೂಲಕ ಕ್ರೀಡಾಂಗಣದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಗುವುದು. ಸ್ಥಳೀಯ ಸಾಹಿತಿಗಳನ್ನು ಒಳಗೊಂಡಂತೆ ಪ್ರಮುಖ ಕನ್ನಡ ಸಾಹಿತಿಗಳ ಭಾವಚಿತ್ರ ಹಾಗೂ ಅವರ ಸಂದೇಶಗಳ ಫಲಕಗಳನ್ನು (ಪ್ಲೆಕ್ಸ್) ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ವೇದಿಕೆ ಸಿದ್ಧತೆ, ಅಲಂಕಾರ, ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಆಹ್ವಾನ ಪತ್ರಿಕೆಗಳ ಮುದ್ರಣ ಮತ್ತು ವಿತರಣೆ, ಆಂಬುಲೆನ್ಸ್ ವ್ಯವಸ್ಥೆ, ಕಾರ್ಯಕ್ರಮ ನಿರ್ವಹಣೆ, ನಿರೂಪಣೆ, ಕ್ರೀಡಾಂಗಣ ಸ್ವತ್ಛತೆ ಇನ್ನಿತರೆ ಸಿದ್ಧತಾ ಕಾರ್ಯಗಳನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಹಂಚಿಕೆ ಮಾಡಿ ಈ ಎಲ್ಲಾ ಕಾರ್ಯಗಳನ್ನು ಸಮರ್ಪಕವಾಗಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ಸಹ ಕೊಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡ ಪರ ಸಂಘಟೆನಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿನ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕನ್ನಡ ನಾಡು ನುಡಿ ಕುರಿತು, ಕವನ, ಗಾಯನ, ಪ್ರಬಂಧ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಕನ್ನಡ ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಮನೆ ಮನೆ ಹಾಗೂ ಬೀದಿ ಬೀದಿಗಳಲ್ಲಿ ರಂಗೋಲಿ ಸಹ ಹಾಕಲಾಗಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಅನೇಕ ಕಚೇರಿಗಳು ಹಾಗೂ ಚೆನ್ನಮ್ಮ ಸರ್ಕಲ್ ವಿದ್ಯುತ್ ದ್ವೀಪಗಳಿಂದ ಕಂಗೊಳಿಸಿತ್ತಿವೆ. ಇನ್ನು ಇದೊಂದು ನಾಡ ಹಬ್ಬ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಮನೆಗಳ ಮುಂದೆ ರಂಗೋಲಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ ಎಂದು ಕನ್ನಡಾಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ.












Click it and Unblock the Notifications