ಹಿಜಾಬ್ ವಿವಾದದ ನಡುವೆ ಪ್ರೌಢಶಾಲೆಗಳ ಆರಂಭದ ಬಗ್ಗೆ ಸಿಎಂ ಬೊಮ್ಮಾಯಿ
ಹುಬ್ಬಳ್ಳಿ ಫೆಬ್ರವರಿ 13: ನಾಳೆಯಿಂದ ಪ್ರೌಢಶಾಲೆಗಳನ್ನು ಆರಂಭಿಸಲಾಗುವುದು ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯಾದ್ಯಂತ ಹಿಜಾಬ್ ವಿವಾದ ಬೂದಿಮುಚ್ಚಿದ ಕೆಂಡದಂತಿದೆ. ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಬಂದ್ ಮಾಡಲಾಗಿದ್ದ ಪ್ರೌಢಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, 'ನಾಳೆಯಿಂದ ಪ್ರೌಢಶಾಲೆಗಳನ್ನ ಆರಂಭಿಸುತ್ತೇವೆ. ಈಗಾಗಲೇ ಜಿಲ್ಲಾಧಿಕಾರಿಗಳು, ಶಾಲಾಡಳಿತ ಮಂಡಳಿಗಳಿಗೆ ಶಾಂತಿ ಸಭೆ ಮಾಡಲು ತಿಳಿಸಿದ್ದೇನೆ. ನಾಳೆ ಶಾಂತಿಯುತವಾಗಿ ಎಲ್ಲಾ ತರಗತಿಗಳು ನಡೆಯುತ್ತವೆ. ಇದನ್ನ ನೋಡಿಕೊಂಡು ಕಾಲೇಜುಗಳ ಆರಂಭದ ಬಗ್ಗೆ ನಿರ್ಧರಿಸುತ್ತೇವೆ. ಮೊದಲಿನ ಹಾಗೇ ಸೌರ್ಹಾದಯುತವಾಗಿ ಶಾಲಾ ಕಾಲೇಜುಗಳನ್ನು ಆರಂಭಿಸುತ್ತೆವೆ. ಜೊತೆಗೆ ಶಾಲಾ ಕಾಲೇಜುಗಳನ್ನು ಆರಂಭಿಸೋದು ನಮ್ಮ ಮೊದಲ ಆಧ್ಯತೆ. ಯಾರು ಪ್ರಚೋದನೆ ನೀಡ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಸಂದೇಶವನ್ನು ಹಾಕ್ತಾರೆ. ಅವೆಲ್ಲವನ್ನೂ ನಮ್ಮ ಅಧಿಕಾರಿಗಳು ಗಮನಿಸುತ್ತಾರೆ. ಅವರ ವಿಚಾರಣೆ ಮಾಡಲು ಕೂಡ ತಿಳಿಸಲಾಗಿದೆ' ಎಂದರು.
ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ
ಇನ್ನೂ ಇದೇ ವೇಳೆ ರಾಜ್ಯ ಬಜೆಟ್ ಮಂಡನೆ ವಿಚಾರ ಮಾತನಾಡಿದ ಅವರು, ಎರಡು ವರ್ಷದಲ್ಲಿ ರಾಜ್ಯದಲ್ಲಿ ಆರ್ಥಿಕತೆ ಬಹಳ ನಷ್ಟದಲ್ಲಿದೆ. ಈ ಬಜೆಟ್‌ನಲ್ಲಿ ಅದಕ್ಕೆ ಬೂಸ್ಟ್ ಕೊಡೋ ಪ್ರಯತ್ನ ಮಾಡುತ್ತೇವೆ. ಸಮಗ್ರ ಕರ್ನಾಟಕದ ಅಭಿವೃದ್ದಿ ಚಿಂತನೆ ಮಾಡಲಾಗುತ್ತದೆ. ಆರ್ಥಿಕ ಅಭಿವೃದ್ದಿ, ಜನಕಲ್ಯಾಣ ಹಾಗೂ ಶಿಸ್ತು ಎಲ್ಲವನ್ನೂ ದೃಷ್ಠಿಯಲ್ಲಿಟ್ಟುಕೊಂಡು ಬಜೆಟ್ ಮಂಡನೆಯಾಗಲಿದೆ ಎಂದರು.
ರಾಜ್ಯದಲ್ಲಿ ನಾಳೆಯಿಂದ ಪ್ರೌಢಶಾಲೆ ಪುನಾರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 10ನೇ ತರಗತಿವರೆಗೆ ಶಾಲೆ ಆರಂಭವಾಗಲಿದೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಫೆಬ್ರವರಿ 12ರಿಂದ 19ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಡಿಸಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ. ಶಾಲೆಯ ಸುತ್ತಮುತ್ತ ಗುಂಪು ಸೇರುವಂತಿಲ್ಲ. ಪ್ರತಿಭಟನೆ, ಮೆರವಣಿಗೆಗೆ ಅವಕಾಶ ಇಲ್ಲ. ಯಾವುದೇ ವ್ಯಕ್ತಿ ಜಾತಿ ಧರ್ಮಕ್ಕೆ ನೈತಿಕತೆ ವಿರುದ್ಧ ನಡೆದುಕೊಳ್ಳುವಂತಿಲ್ಲ ಎಂದು ಆದೇಶಿಸಲಾಗಿದೆ.

ಹಿಜಾಬ್ ವಿವಾದ: ವಿದ್ಯಾರ್ಥಿನಿ ಪರ ವಕೀಲರನ್ನು ಸಮರ್ಥಿಸಿದ ರಾಮಕೃಷ್ಣ ಆಶ್ರಮ
ರಾಜ್ಯದ ಹಲವು ಕಾಲೇಜುಗಳಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಹೆಚ್ಚಾದ ಕಾರಣ ಮತ್ತು ಹೈಕೋರ್ಟ್‌ನಲ್ಲಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ನಾನು ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಕರ್ನಾಟಕದ ಜನತೆಗೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಕಾಲ ಎಲ್ಲಾ ಪ್ರೌಢಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ನೀಡಲು ನಾನು ಆದೇಶಿಸಿದ್ದೇನೆ. ಸಂಬಂಧಪಟ್ಟವರೆಲ್ಲರೂ ಸಹಕರಿಸಬೇಕಾಗಿ ವಿನಂತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವಿ ಮಾಡಿದ್ದಾರೆ.












Click it and Unblock the Notifications