ವಿದ್ಯುತ್ ಬಿಲ್ ಪಾವತಿಸದವರಿಗೆ ಅ.1ರಿಂದ ವಿದ್ಯುತ್ ಸಂಪರ್ಕ ಕಟ್ ನಿಯಮ ಜಾರಿ
ಹುಬ್ಬಳ್ಳಿ, ಸೆಪ್ಟಂಬರ್ 27: ವಿದ್ಯುತ್ ಗ್ರಾಹಕರಿಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ಕಟು ಎಚ್ಚರಿಕೆ ನೀಡಿದೆ. ಯಾವ ಗ್ರಾಹಕರು ಬಾಕಿ ಇರುವ ವಿದ್ಯುತ್ ಬಿಲ್ ಪಾವತಿಸದೇ ಇರುತ್ತಾರೆ ಅವರಿಗೆ ಹೊಸ ಗಡುವು ನೀಡುವ ಜೊತೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ನಿಯಮ ಅಕ್ಟೋಬರ್ 1ರಿಂದಲೇ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ.
ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡಲಾಗುತ್ತದೆ. ಅದರಲ್ಲಿ ಯಾರ ವಿದ್ಯುತ್ ಬಿಲ್ ಬಾಕಿ ಇರುತ್ತದೋ ಅವರು, ಮುಂದಿನ ಒಂದು ತಿಂಗಳು (30 ದಿನಗಳಲ್ಲಿ) ಬಾಕಿ ಪಾವತಿಸದಿದ್ದರೆ ನಿಯಮಗಳ ಪ್ರಕಾರ ಅವರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೆಸ್ಕಾಂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ತಿಂಗಳ ಎರಡು ವಾರದಲ್ಲಿ ವಿದ್ಯುತ್ ಕಡಿತದ ಎಚ್ಚರಿಕೆ
ಅಕ್ಟೋಬರ್ 1ರಿಂದಲೇ ಗಡುವು ಹಾಗೂ ವಿದ್ಯುತ್ ಕಡಿತದ ಕಠಿಣ ನಿಯಮ ಜಾರಿಗೆ ಬರಲಿದೆ. ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್ ಪಾವತಿಸಬೇಕು. ಇಲ್ಲವಾದಲ್ಲಿ ಆ ಗ್ರಾಹಕರ ಮೀಟರ್ ರೀಡಿಂಗ್ ಮಾಡಿಕೊಳ್ಳಲಾಗುತ್ತದೆ. ಬಾಕಿ ಎಷ್ಟು ಉಳಿದಿದೆ ಎಂದು ಲೆಕ್ಕ ಹಾಕಲಾಗುತ್ತದೆ. ನಂತರ ನಿಯಮಗಳ ಪ್ರಕಾರ, ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್ ಲೈನ್ ಸಂಪರ್ಕ ತಪ್ಪಿಸುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಲಿಯವರೆಗೂ ಹೋಗದೇ ಗ್ರಾಹಕರು ವಿದ್ಯುತ್ ಬಿಲ್ ಕೈ ಸೇರುತ್ತಿದ್ದಂತೆ ಬಾಕಿ ಇರುವ ಶುಲ್ಕ ಪಾವತಿಸುವಂತೆ ಹೆಸ್ಕಾಂ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ. ಪ್ರತಿ ತಿಂಗಳ ಮೊದಲ ಎರಡು ವಾರದಲ್ಲಿ ನಿಮಗೆ ಬಿಲ್ ಕೊಡಲಾಗುತ್ತದೆ. ಅದರಲ್ಲಿನ ಬಾಕಿ ನೋಡಿ ಕೂಡಲೇ ಪಾವತಿಸಬೇಕಿದೆ.
ಬಿಲ್ ನೀಡುವವರ ಜತೆ ಲೈನ್‌ಮನ್ ಭೇಟಿ
ಮುಂದಿನ ದಿನಗಳಲ್ಲಿ ಮಾಪಕ ಓದುಗರೊಂದಿಗೆ ಲೈನ್‌ಮೆನ್‌ಗಳು ತೆರಳುತ್ತಾರೆ. ಯಾರು ಬಾಕಿ ಉಳಿಸಿಕೊಂಡ ಬಿಲ್ ಸ್ಥಳದಲ್ಲಿ ಕಟ್ಟಲು ಹಿಂದೇಟು ಹಾಕುತ್ತಾರೆಯೋ ಅವರ ವಿದ್ಯುತ್ ಸಂಪರ್ಕ ಅಂದೇ ಕಡಿತ ಮಾಡಲು, ಅವರ ಮನೆಯ ವಿದ್ಯುತ್ ಸಂಪರ್ಕ ನಿಲ್ಲಿಸಲು ಸೂಚನೆ ಇದೆ ಎಂದರು.
ಗ್ರಾಹಕರ ಅನುಕೂಲಕ್ಕಾಗಿ ವಿದ್ಯುತ್ ಬಿಲ್ ಪಾವತಿಗೆ ಬಡ್ಡಿ ರಹಿತವಾಗಿ ಎರಡು ವಾರಗಳ (15 ದಿನ) ಕಾಲಾವಕಾಶ ನೀಡಲಾಗುತ್ತದೆ. ಆ ನಂತರವೂ ಬಡ್ಡಿ ಸಹಿತ ಪಾವತಿಗೆ 15 ದಿನಗಳ ಕಾಲಾವಕಾಶ ಇರುತ್ತದೆ. ಆದರೂ ಗ್ರಾಹಕರು ಬಿಲ್ ಪಾವತಿಸದಿದ್ದರೆ, ಸಂಪರ್ಕ ಕಡಿತದ ಕ್ರಮ ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಬಾಕಿ ಮೊತ್ತ ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂ.ಗಳಿಗಿಂತ ಅಧಿಕವಾಗಿದ್ದಲ್ಲಿ ಅಂತಹ ಗ್ರಾಹಕರ ವಿದ್ಯುತ್ ಸಂಪರ್ಕವನ್ನು ಸಹ ಕಡಿತ ಮಾಡಲಾಗುವುದು.
ಹಿಂದಿನ ಬಿಲ್ ತೋರಿಸಿ
ಯಾವುದೇ ಗ್ರಾಹಕರು ಆನ್‌ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಿದ್ದು, ಅದು ನಮೂದಾಗದೇ ಇದ್ದಾಗ ಹಿಂದಿನ ಬಿಲ್, ಇಲ್ಲವೇ ಆನ್‌ಲೈನ್ ಪಾವತಿಗೆ ದಾಖಲೆ ತೋರಿಸಬೇಕಾಗುತ್ತದೆ. ಏಕೆಂದರೆ ಕೆಲವೊಮ್ಮೆ ಹೆಸ್ಕಾಂ ತಂತ್ರಾಂಶದಲ್ಲಿ ( ಸಾಫ್ಟ್‌ವೇರ್) ತಾಂತ್ರಿಕ ದೋಷ ಉಂಟಾದಾಗ ತಡವಾಗಿ ಅಪ್ಡೇಟ್ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಬಿಲ್ ಕೇಳುವ ಹೆಸ್ಕಾಂ ಸಿಬ್ಬಂದಿಗೆ ಆನ್‌ಲೈನ್‌ನಲ್ಲಿ ಬಿಲ್ ಪಾವತಿಸಿದ ರಸೀದಿ ತೋರಿಸಿದರೆ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಹೆಸ್ಕಾಂ ತಿಳಿಸಿದೆ.












Click it and Unblock the Notifications