HESCOM: ಭೂಗತ ಕೇಬಲ್‌ಗಳ ಲೋಪದೋಷ ಪತ್ತೆಗೆ ವಿಶೇಷ ವಾಹನ ಪರಿಚಯಿಸಿದ ಹೆಸ್ಕಾಂ
ಹುಬ್ಬಳ್ಳಿ, ಆಗಸ್ಟ್ 27: ಕೆಪಿಟಿಸಿಎಲ್ ವ್ಯಾಪ್ತಿಯಲ್ಲಿ ಹೆಸ್ಕಾ, ಮೆಸ್ಕಾಂ, ಬೆಸ್ಕಾಂ ಸೇರಿದಂತೆ ವಿವಿಧ ವಿದ್ಯುತ್ ಪೂರೈಕೆ ಕಂಪನಿಗಳು ನೆಲದಡಿ ಕೇಬಲ್ ಅಳವಡಿಕೆ ಮಾಡುತ್ತಿವೆ. ಒಂದಷ್ಟು ಕಡೆಗಳಲ್ಲಿ ಈ ಕಾರ್ಯ ಮುಗಿದಿದೆ. ಆದರೆ ಭೂಗತ ಕೇಬಲ್ ನಲ್ಲಿ ದೋಷ ಕಂಡು ಬಂದು ಆಗುತ್ತಿರುವ ಸಮಸ್ಯೆಗೆ ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಹುಬ್ಬಳ್ಳಿಯ ಬೆಸ್ಕಾಂ ಒಂದೊಳ್ಳೆ ಪ್ಲಾನ್ ಮಾಡಿಕೊಂಡಿದೆ.
ಹೌದು, ಹೆಸ್ಕಾಂ ವ್ಯಾಪ್ತಿಯಲ್ಲಿ 11 ಕೆ.ವಿ ಭೂಗತ ವಿದ್ಯುತ್ ಕೇಬಲ್ ದೋಷ ಕಂಡು ಹಿಡಿಯುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೂತನ ವಾಹನವನ್ನು ಲೋರ್ಪಾಪಣೆಗೊಳಿಸಲಾಯಿತು. ಈ ವಾಹನದ ಇಂದು ಮಂಗಳವಾರದಿಂದ ಕಾರ್ಯ ನಿರ್ವಹಣೆ ಆರಂಭಿಸಲಿದ್ದು, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್. ಅವರು ಚಾಲನೆ ನೀಡಿದರು.

ನಗರದ ತಬೀಬ್ ಲ್ಯಾಂಡ್‌ನಲ್ಲಿರುವ ಕಾರ್ಯನಿರ್ವಾಹಕ ಇಂಜಿನೀಯರ್ (ವಿ), ಕಾರ್ಯ ಮತ್ತು ಪಾಲನಾ, ನಗರ ವಿಭಾಗ, ಹೆಸ್ಕಾಂ ಕಚೇರಿಯಲ್ಲಿ ನೂತನ ವಾಹನಕ್ಕೆ ಪೂಜೆ ಸಲ್ಲಿಸಿ, ಬಳಿಕ ಟೇಪ್ ಕತ್ತರಿಸಿ ಲೋಕಾರ್ಪಣೆಗೊಳಿಸಿದರು. ಬಳಿಕ ನೂತನ ವಾಹನದ ವೀಕ್ಷಣೆ ಮಾಡಿದರು.
ಸಮರ್ಪಕ ವಿದ್ಯುತ್ ಪೂರೈಕೆಯ ಧ್ಯೆಯ
ಈ ವೇಳೆ ಹುಬ್ಬಳ್ಳಿ ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಜಯಪ್ರದಾ ಅವರು ನೂತನ ವಾಹನದ ವಿಶೇಷತೆ, ಅದರ ಕಾರ್ಯವಿಧಾನದ ಕುರಿತು ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡಿದರು. ಬಳಿಕ ಅಧಿಕಾರಿಗಳ ಸಭೆ ನಡೆಸಿದ ಎಂ. ಡಿ ಅವರು, ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಸುವುದು ಹೆಸ್ಕಾಂ ಮುಖ್ಯ ಧ್ಯೇಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ತಾಂತ್ರಿಕ ನಿರ್ದೇಶಕರಾದ ಜಗದೀಶ್.ಎಸ್., ಕಾರ್ಯನಿರ್ವಾಹಕ ಇಂಜಿನೀಯರ್ ಜಯಪ್ರದಾ, ಗ್ರಾಮೀಣ ವಿಭಾಗದ ಪ್ರಭಾರಿ ಕಾರ್ಯನಿರ್ವಾಹಕ ಇಂಜಿನೀಯರ್ ಕಿರಣ್ ಕುಮಾರ್, ಎಂ.ಡಿ ಅವರ ತಾಂತ್ರಿಕ ಸಹಾಯಕ ಎಂ.ಬಿ ಸುಣಗಾರ, ಯು.ಜಿ ಕೇಬಲ್ ಎಇಇ ಮಮತಾ ಗುಡಿಮನಿ, ಜೆಇ ಎಂ.ಎಂ. ಭಜಂತ್ರಿ, ಶರತ್ ಹಾಗೂ ಹೆಸ್ಕಾಂ ಸಿಬ್ಬಂದಿ ಸೇರಿದಂತೆ ಅನೇಕರು ಹಾಜರಿದ್ದರು.

ನೂತನ ವಾಹನದ ವಿಶೇಷತೆಗಳು ಏನು?
ಮಂಗಳವಾರ ಲೋಕಾರ್ಪಣೆಗೊಂಡ 11 ಕೆ.ವಿ ಭೂಗತ ವಿದ್ಯುತ್ ಕೇಬಲ್ ಗಳಲ್ಲಿ ದೋಷ ಕಂಡು ಹಿಡಿಯುವ ವಾಹನ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ್ದು ಲಿನಿಕ್ಸ್ ಆಪರೇಟಿಂಗ್ ಸಾಫ್ಟ್‌ವೇರ್ ಹೊಂದಿದೆ. ಸಂಪೂರ್ಣ ಸುರಕ್ಷತೆಯಿಂದ ಕೂಡಿದ್ದು, ಇದರ ನಿರ್ವಹಣೆ ಕೂಡ ಸರಳವಾಗಿದೆ. ಹುಬ್ಬಳ್ಳಿ ನಗರ ವ್ಯಾಪ್ತಿಯಲ್ಲಿ 878 ಕಿ.ಮೀ ನಷ್ಟು ಭೂಗತ ವಿದ್ಯುತ್ ಕೇಬಲ್ ಇದೆ. ಸದ್ಯ ನೂತನ ವಾಹನದ ಸಹಾಯದಿಂದ ಕಡಿಮೆ ಅವಧಿಯಲ್ಲಿಯೇ ದೋಷ ಪತ್ತೆ ಮಾಡಬಹುದು.
ಕೇವಲ 10 ರಿಂದ 15 ನಿಮಿಷಗಳಲ್ಲಿ ಭೂಮಿಯೊಳಗಿನ ವಿದ್ಯುತ್ ಕೇಬಲ್‌ನ ದೋಷವನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ. ಇದರಿಂದ ಸಮಯ ಹಾಗೂ ಶ್ರಮ ಕೂಡ ಉಳಿತಾಯವಾಗಿ, ಗ್ರಾಹಕರಿಗೆ ಅತೀ ಕಡಿಮೆ ಅವಧಿಯಲ್ಲಿ ಭೂಗತ ಕೇಬಲ್‌ನಲ್ಲಿನ ದೋಷ ಕಂಡು ಹಿಡಿದು ಸರಿಪಡಿಸಿ, ವಿದ್ಯುತ್ ಸರಬರಾಜು ಮಾಡಬಹುದಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ವಿರಿಸಿದರು.












Click it and Unblock the Notifications