ವಿವಿಧ ಬೇಡಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ನೇಕಾರರ ಪ್ರತಿಭಟನೆ
ಹುಬ್ಬಳ್ಳಿ, ಜುಲೈ 6: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ಪ್ರತಿನಿಧಿಗಳು ಗುರುವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಪ್ರಧಾನ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರಲ್ಲದೆ ನಿಗಮದ ಅಧ್ಯಕ್ಷ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಹಲವು ವರ್ಷಗಳಿಂದ ನಮ್ಮ ಬೇಡಿಕೆ ಈಡೇರಿಲ್ಲ. ಪ್ರತಿ ಸಲ ಪ್ರತಿಭಟನೆ ನಡೆಸಿದಾಗ ಭರವಸೆ ನೀಡುತ್ತೀರಿ. ನೇಕಾರ ಅಭಿವೃದ್ಧಿಗಾಗಿ ಸ್ಥಾಪಿಸಲಾದ ನಿಗಮದಿಂದ ಯಾವುದೇ ಪ್ರಯೋಜನವಾಗಿಲ್ಲ. ರೈತರಂತೆ ನೇಕಾರರು ಸಹ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಸಂಘದ ಪರವಾಗಿ ಇಬ್ಬರು ಪ್ರತಿನಿಧಿಗಳು ಒಳಗೆ ಬನ್ನಿ ಸಮಸ್ಯೆ ಬಗ್ಗೆ ಚರ್ಚಿಸೋಣ ಎಂದರು. ಇದರಿಂದ ಮತ್ತಷ್ಟು ಕೆರಳಿದ ಒಳಗೆ ಕರೆದುಕೊಂಡು ಹೋಗಿ ರಾಜಿ ಮಾಡುವುದು ಬೇಡ ಎಲ್ಲರ ಎದುರು ನಿಮ್ಮ ನಿರ್ಧಾರ ತಿಳಿಸಿ ಎಂದು ಪಟ್ಟು ಹಿಡಿದರು.
ಸಂಘದ ಪ್ರಮುಖ ಬೇಡಿಕೆಗಳು
ನೇಕಾರರ ಮಜೂರಿ ಶೇ 50ರಷ್ಟು ಹೆಚ್ಚು ಮಾಡಬೇಕು. ನೇಕಾರರ ಮನೆಗಳನ್ನು ಅವರ ಹೆಸರಿನಲ್ಲಿ ನೋಂದಾಯಿಸಬೇಕು. ನೇಕಾರರಿಗೆ ಗುಣಮಟ್ಟದ ನೂಲು ಪೂರೈಕೆ ಮಾಡಬೇಕು. ಶೂಟಿಂಗ್ ಮತ್ತು ಜಕಾರ್ಡ್ ಮಗ್ಗಗಳನ್ನು ಪುನರ್ ಆರಂಭಿಸಬೇಕು. ನಿಗಮದ ಎಂಡಿ ಹಾಗೂ ಅಧ್ಯಕ್ಷರು ಖಾಯಂ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು. ನಿಗಮದ ಕಚೇರಿಯಲ್ಲಿ ನೇಕಾರರ ಮಕ್ಕಳಿಗೆ ಕೆಲಸಕ್ಕೆ ತೆಗೆದುಕೊಳ್ಳುವುದು, ನಿಗಮದಲ್ಲಿ ನಡೆದ ಹಗರಣದ ತನಿಖೆ ಸೇರಿದಂತೆ ಹಲವು ಬೇಡಿಕೆಯನ್ನು ಈಡೇರಿಸುವಂತೆ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ರಾಜ್ಯ ನೇಕಾರರ ಸಂಘದ ಅಧ್ಯಕ್ಷ ಎನ್.ಜೆ. ಮಾಳವದೆ, ಕೊಪ್ಪಳ ಜಿಲ್ಲೆ ಉಪಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ರಾಮಚಂದ್ರ ಮುದಗಲ, ಸರೇಶ ಶಿರಹಟ್ಟಿ, ಪ್ರೇಮವ್ವ ಮುಳಗುಂದ, ಗೌರಮ್ಮ ಬೆಡಗೇಲಿ, ಶೋಭಾ ದಡಿಗೌಡರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications