Ganesh Chaturthi 2023: ಈ ಬಾರಿ ಗಣೇಶನ ವಿಗ್ರಹ ಬಲು ದುಬಾರಿ, ದರಗಳ ವಿವರ ಹೀಗಿದೆ
ಹುಬ್ಬಳ್ಳಿ, ಆಗಸ್ಟ್ 22: ಗಣೇಶ ಹಬ್ಬ ಒಂದು ಸಾಂಪ್ರದಾಯಿಕ ಆಚರಣೆ ಅಲ್ಲಾ ಅದೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಟದ ಕಿಚ್ಚು ಹಚ್ಚಿದ ಹಬ್ಬ. ಹೀಗಾಗಿ ನಾಡಿನಾದ್ಯಂತ ಈ ಹಬ್ಬವನ್ನು ಬಹಳ ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷದ ಗಣೇಶೋತ್ಸವಕ್ಕೆ ಇದೀಗ ದಿನಗಣನೆ ಆರಂಭವಾಗಿದೆ.
ರಾಜ್ಯದೆಲ್ಲೆಡೆ ಹಬ್ಬದ ತಯಾರಿ ಆರಂಭವಾಗಿದ್ದು, ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಭರ್ಜರಿ ಗಣೇಶ ಮೂರ್ತಿ ತಯಾರಿ ನಡೆಯುತ್ತಿದ್ದು, ಈ ಬಾರಿ ಗಣೇಶೋತ್ಸವ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಸಣ್ಣ ಗಣಪತಿ ಮೂರ್ತಿಗಳಿಗೆ 100-200 ಏರಿಕೆ ಕಂಡರೆ ದೊಡ್ಡ ದೊಡ್ಡ ಗಣೇಶ ಮೂರ್ತಿಗಳಿಗೆ 10ರಿಂದ 15 ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ.

ದೊಡ್ಡ ದೊಡ್ಡ ಗಣೇಶ ಮೂರ್ತಿ ತಯಾರಿಕೆಗೆ ಬೇಕಾಗುವ ಹುಲ್ಲು, ಕೊಳಲಿ, ಕಟ್ಟಿಗೆ, ಮಣ್ಣು, ಬಣ್ಣ ಸೇರಿದಂತೆ ಕಲಾವಿದರ ವೇತನವೂ ಏರಿಕೆ ಕಂಡಿದೆ. ಇದರಿಂದ ಈ ಬಾರಿ ಗಣೇಶ ಮೂರ್ತಿಗಳ ಬೆಲೆಯಲ್ಲಿ ಕೊಂಚು ಏರಿಕೆ ಕಾಣಲಿದೆ. ಪಿಒಪಿ ಗಣೇಶ ಮೂರ್ತಿಗಳು ಸ್ವಲ್ಪ ಮಟ್ಟಿಗೆ ನಿಯಂತ್ರಣ ಆದ ನಂತರ ಇದೀಗ ಮಣ್ಣಿನ ಗಣೇಶ ಮೂರ್ತಿಗಳೇ ಲಭ್ಯವಾಗುತ್ತಿವೆ.
ಕೋವಿಡ್ ಸಮಯದಲ್ಲಿ ಸಣ್ಣ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದ ಗಣೇಶೋತ್ಸವ ಮಂಡಳಿಗಳು ಇದೀಗ ಕಳೆದ ವರ್ಷದಿಂದ ಮತ್ತೆ 21 ಅಡಿ ಗಣಪ, 18 ಅಡಿ, 15 ಅಡಿ, 10 ಅಡಿ, 8 ಅಡಿ, 6 ಅಡಿ, 4 ಅಡಿ ಗಣಪ ಪ್ರತಿಷ್ಠಾಪಿಸಲು ಸಿದ್ಧತೆಗಳು ನಡೆದಿವೆ. ಈಗಾಗಲೇ ದೊಡ್ಡ ದೊಡ್ಡ ಗಣೇಶ ಮೂರ್ತಿಗಳ ತಯಾರಿಕೆ ಜೋರಾಗಿ ನಡೆದಿದೆ.
ಹುಬ್ಬಳ್ಳಿ ಕಾ ರಾಜಾಗೆ ಬಲು ತಯಾರಿ
ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲು 21 ಅಡಿ ಗಣೇಶ ಮೂರ್ತಿಯನ್ನು ಮರಾಠಾಗಲ್ಲಿಯಲ್ಲೇ ಅಪ್ಪು ಪಾಸ್ ಹಾಗೂ ಸಪನ್ ಪಾಲ್ ತಂಡ ಸಿದ್ಧಪಡಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಗಣೇಶೋತ್ಸವ ಆಚರಣೆಗೆ ಆಗಮಿಸುವ ಅಪ್ಪು ಪಾಲ್ ಗಣೇಶೋತ್ಸವ ಹಾಗೂ ದಸರಾ ಆಚರಣೆ ಮುಗಿಸಿಕೊಂಡೇ ತಮ್ಮೂರಿಗೆ ಮರಳುತ್ತಾರೆ. ಈ ವರ್ಷ ಸುಮಾರು 90ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದಾರೆ.
ದೊಡ್ಡ ಮೂರ್ತಿಗಳ ತಯಾರಿಕೆಗೆ ಸಮಯ ಹೆಚ್ಚು ಬೇಕಿರುವುದರಿಂದ ಕಡಿಮೆ ಎಂದರೂ 2 ತಿಂಗಳ ಮುಂಚೆಯೇ ಬುಕ್ಕಿಂಗ್ ಮಾಡಿರಬೇಕು. ಹೀಗಾಗಿ ಈಗಾಗಲೇ ಬುಕ್ಕಿಂಗ್ ಬಂದ್ ಮಾಡಲಾಗಿದೆ ಎಂದು ಗಣೇಶ ಕಲಾವಿದರು ಹೇಳುತ್ತಾರೆ.
ದರ ಏರಿಕೆಯಾಗಿರುವುದು ನಿಜ ಆದರೆ ಜನರೇ ತಿಳಿದು ಹೆಚ್ಚಿನ ದರ ನೀಡಬೇಕು. ಹಿಂದೆ ನಮಗೆ ಇಂತಹದೇ ಗಣೇಶ ಮೂರ್ತಿ ಬೇಕು, ಬೇಕಾದಷ್ಟು ದರವಾಗಲಿ ಎಂದು ಹೇಳಿ ಮೂರ್ತಿಗಳನ್ನು ಮಾಡಿಸುತ್ತಿದ್ದರು. ಆದರೀಗ ಅಂತಹ ಸ್ಥಿತಿ ಇಲ್ಲ. ಇರುವ ಗಣೇಶ ಮೂರ್ತಿಗಳಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಗಣೇಶೋತ್ಸವ ಸಮೀಪಿಸುತ್ತಿದ್ದು, ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಕಲಾವಿದರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಈ ವರ್ಷವೂ 100-200 ರೂ.ದರ ಏರಿಕೆ ಕಂಡು ಬರಲಿದೆ.












Click it and Unblock the Notifications