ಧಾರವಾಡ: ಗ್ರಹಣದ ವೇಳೆ ಊಟ ಸವಿದು ಜಾಗೃತಿ ಮೂಡಿಸಿದ ಪ್ರಜ್ಞಾವಂತರ ವೇದಿಕೆ
ಧಾರವಾಡ, ಅಕ್ಟೋಬರ್ 14 : ಸೂರ್ಯಗ್ರಹಣದ ವೇಳೆ ಏನನ್ನೂ ತಿನ್ನಬಾರದು, ಊಟ ಮಾಡಬಾರದು ಎಂದು ಹೇಳುತ್ತಾರೆ. ಆದರೆ ಮಂಗಳವಾರ ಗ್ರಹಣದ ಹಿನ್ನೆಲೆಯಲ್ಲಿ ಮೌಢ್ಯಕ್ಕೆ ಸಡ್ಡು ಹೊಡೆದ ಧಾರವಾಡದ ಸಾಹಿತಿಗಳ ಹಾಗೂ ಪ್ರಜ್ಞಾವಂತರ ವೇದಿಕೆಯವರು ಅಡುಗೆ ಮಾಡಿ ಆಹಾರ ಸೇವನೆ ಮಾಡುವ ಮೂಲಕ ಮೌಢ್ಯವನ್ನು ಹೋಗಲಾಡಿಸುವಂತೆ ಕರೆ ನೀಡಿದ್ದಾರೆ.
ನಗರದ ಕಲಾಭವನದ ಎದುರು ಕಡಪಾ ಮೈದಾನದಲ್ಲಿ ಸಾಹಿತಿಗಳ ನೇತೃತ್ವದಲ್ಲಿ ಸಂಚಾಲಕರು, ಪ್ರಗತಿಪರರು, ಸಮಾನ ಮನಸ್ಕರು ಭಾಗಿಯಾಗಿ ಗ್ರಹಣದ ಸಮಯದಲ್ಲೇ ಊಟ ಸೇವಿಸಿದರು.
ಜನರು ಮೌಢ್ಯದಿಂದ ಹೊರಬರಬೇಕು, ಅವರು ವೈಚಾರಿಕ ಚಿಂತನೆಯತ್ತ ಹೆಜ್ಜೆ ಹಾಕಬೇಕು. ವರ್ಷಕ್ಕೊಮ್ಮೆ ಸಂಭವಿಸುವ ಸೂರ್ಯ, ಚಂದ್ರಗ್ರಹಣ ಗೋಚರಿಸುವ ಅದ್ಭುತ ಕ್ಷಣಗಳ ಸಂದರ್ಭದಲ್ಲಿ ಮೌಢ್ಯ ಆಚರಣೆ ಕೈಬಿಡಬೇಕು. ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಬೇಕು. ಇದಕ್ಕಾಗಿ ಈ ಕಾರ್ಯಕ್ರಮ ಮಾಡಲಾಯಿತು ಎಂದು ಪ್ರಜ್ಞಾವಂತರ ವೇದಿಕೆಯ ಸದಸ್ಯರು ತಿಳಿಸಿದರು.
ಸೂರ್ಯ, ಚಂದ್ರ ಗ್ರಹಣ ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆಯಾಗಿದೆ. ಮಳೆಗಾಲ, ಚಳಿಗಾಲದ ರೀತಿಯಲ್ಲಿ ಬರುವ ಸಂದರ್ಭಗಳಾಗಿವೆ. ಆದರೆ, ಅವುಗಳಿಗೆ ಮೌಢ್ಯದ ಬಣ್ಣ ಹಚ್ಚಿ ಆಚರಣೆ ಮಾಡುವ ಮೂಲಕ ಜನರಲ್ಲಿ ಭಯ ಬಿತ್ತಲಾಗುತ್ತಿದೆ. ಜನರು ಮೌಢ್ಯಗಳ ಆಚರಣೆಯಿಂದ ಹೊರ ಬರಬೇಕು ಎಂದು ಜಾಗೃತಿ ಮೂಡಿಸಿದರು.

ಅಂಗವಿಕಲ ಮಕ್ಕಳು ಹುಟ್ಟುತ್ತಾರೆನ್ನುವುದು ಸುಳ್ಳು
"ಗ್ರಹಣದ ವೇಳೆ ಬಹಳ ದೌರ್ಜನ್ಯ ಅನುಭವಿಸುವವರು ಗರ್ಭಿಣಿಯರು. ಅದನ್ನು ಮಾಡಬೇಡ, ಇದನ್ನು ಮಾಡಬೇಡ ಎಂದು ಗರ್ಭೀಣಿಯರಿಗೆ ನಮ್ಮ ದೇಶದಲ್ಲಿ ಬಹಳ ಹಿಂಸೆ ನೀಡಲಾಗುತ್ತದೆ. ಆದರೆ, ವಿದೇಶದಲ್ಲಿರುವ ಗರ್ಬಿಣಿಯರು ಗ್ರಹಣದ ವೇಳೆ ನಿರಾತಂಕವಾಗಿ ಹೊರಗೆ ಇರುತ್ತಾರೆ. ಅವರಿಗೆ ಯಾವುದೇ ರೀತಿಯ ತೊಂದರೆಗಳು ಆಗುವುದಿಲ್ಲ. ಅಲ್ಲದೇ ಅಂಗವಿಕಲ ಮಕ್ಕಳು ಹುಟ್ಟಿರುವ ಯಾವುದೇ ಉದಾಹರಣೆಗಳು ಇಲ್ಲ. ಇನ್ನೂ, ಪ್ರಾಣಿಗಳಿಗೂ ಯಾವುದೇ ತೊಂದರೆಗಳು ಆಗುವುದಿಲ್ಲ," ಎಂದು ಸಾಹಿತಿ ಶಂಕರ್ ಹಲಗತ್ತಿ ಅವರು ಹೇಳಿದರು.

ನೇರವಾಗಿ ಬರಿಗಣ್ಣಲ್ಲಿ ಸೂರ್ಯನನ್ನು ನೋಡಬಾರದು
"ಎಲ್ಲದ್ದಕ್ಕೂ ವೈಜ್ಞಾನಿಕವಾಗಿ ಕಾರಣಗಳಿವೆ. ಗ್ರಹಣದ ವೇಳೆ ಬರಿಗಣ್ಣಿನಿಂದ ನೇರವಾಗಿ ಸೂರ್ಯನನ್ನು ನೋಡಿದರೆ ಮಾತ್ರ ಕಣ್ಣುಗಳಿಗೆ ತೊಂದರೆಗಳು ಉಂಟಾಗುತ್ತವೆ. ಅದು ಬಿಟ್ಟರೆ ಬೇರೆ ವಿಷಯದಲ್ಲಿ ಯಾವುದೇ ತೊಂದರೆಗಳಿಲ್ಲ. ಕೆರೆ, ಬಾವಿ ಹಾಗೂ ನದಿ ನೀರಿಗೆ ಗ್ರಹಣದ ವೇಳೆ ಯಾವುದೇ ವಿಷಕಾರಿ ವಿಕಿರಣಗಳು ಸೇರುವುದಿಲ್ಲ. ಆದರೆ, ಮನೆಯ ಒಳಗೆ ಮುಚ್ಚಿ ಇಟ್ಟಿರುವ ಪಾತ್ರೆಯ ಒಳಗಿನ ನೀರು ಆಹಾರದಲ್ಲಿ ವಿಷಕಾರಿ ವಿಕಿರಣಗಳು ಸೇರಿಕೊಳ್ಳುತ್ತವೆ ಎಂಬುದು ಶುದ್ಧ ಸುಳ್ಳು ಅದು ಕೇವಲ ಮೂಢನಂಬಿಕೆ," ಎಂದು ಸಾಹಿತಿ ಸಂಜು ಕುಲಕರ್ಣಿ ಹೇಳಿದರು.

ಸಿದ್ಧಾರೂಢಮಠದಲ್ಲಿ ಭಕ್ತರಿಗೆ ದರ್ಶನ
ಇನ್ನೂ, ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲೂ ಸಹ ದಾಸೋಹ ಮುಂದುವರೆದಿದೆ. ಸಿದ್ಧಾರೂಢರ ದೇವಸ್ಥಾನವನ್ನು ಬಂದ್ ಮಾಡದೇ ಭಕ್ತರ ದರ್ಶನಕ್ಕೆ ತೆರೆಯಲಾಗಿದೆ. ಜನರ ಮನಸ್ಸಿನಲ್ಲಿರುವ ಮೌಢ್ಯದ ಭಯವನ್ನು ಹೋಗಲಾಡಿಸಲು ಸಿದ್ಧಾರೂಢ ದೇವಸ್ಥಾನದ ಆಡಳಿತ ಮಂಡಳಿ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಬಂದ್ ಮಾಡದೇ ಭಕ್ತರ ದರ್ಶನಕ್ಕೆ ತೆರೆದಿದ್ದಾರೆ. ವೈಜ್ಞಾನಿಕ ಯುಗದಲ್ಲೂ ಈ ಮೂಢನಂಬಿಕೆ ತೊಲಗಬೇಕು. ಜನರಲ್ಲಿ ಅಡಗಿರುವ ಭಯವನ್ನು ಹೋಗಲಾಡಿಸಲು ವಿನೂತನ ಪ್ರಯೋಗ ಮಾಡಲಾಯಿತು.

ಗ್ರಹಣ ಸಂದರ್ಭದಲ್ಲಿ ಆಹಾರ ವಿತರಣೆ
ಸೂರ್ಯಗ್ರಹಣ ಹಿನ್ನಲೆ ರಾಜ್ಯದ ಹಲವೆಡೆ ದೇವಸ್ಥಾನದಲ್ಲಿ ದರ್ಶನಕ್ಕೆ ನಿರ್ಬಂಧ, ಗ್ರಹಣಾವಧಿಯಲ್ಲಿ ಆಹಾರ ಸೇವನೆ ಮಾಡದಿರುವ ಮೂಡನಂಬಿಕೆ ವಿರೋಧಿಸಿ ಬೆಂಗಳೂರಿನ ಪುರಭವನ ಬಳಿ ಪ್ರತಿಭಟನೆಯೊಂದು ನಡೆದಿದೆ. ಮೂಢನಂಬಿಕೆ ವಿರೋಧಿ ಒಕ್ಕೂಟ ಈ ಪ್ರತಿಭಟನೆ ಆಯೋಜಿಸಿದ್ದು, ಗ್ರಹಣ ಇರುವ ಸಮಯವಾದ ಐದರಿಂದ ಆರು ಗಂಟೆ ಅವಧಿಯಲ್ಲಿ ಆಹಾರ ವಿತರಣೆ ಹಾಗೂ ಸೇವನೆ ಮಾಡಿ ಜಾಗೃತಿ ಮೂಡಿಸಿದರು.
ವೈಜ್ಞಾನಿಕವಾಗಿ ಸೂರ್ಯಗ್ರಹಣವನ್ನು ನೋಡಬೇಕು ಎಂಬ ಉದ್ದೇಶದಿಂದ ಅವರು ಇದನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ಹಣ್ಣು, ಸಿಹಿ ತಿನಿಸು ಇತ್ಯಾದಿ ವಿತರಿಸಿ ಸೇವನೆ ಮಾಡಲಾಗಿದೆ.












Click it and Unblock the Notifications