ತುರ್ತು ಸ್ಪಂದನೆಯಲ್ಲಿ ಪ್ರಥಮ ಸ್ಥಾನ ಪಡೆದ ಹುಬ್ಬಳ್ಳಿ ಕಮಿಷನರೇಟ್: 112 ಸೇವೆಗೆ ಜನರಿಂದ ಭಾರಿ ಮೆಚ್ಚುಗೆ
ತುರ್ತು ಸ್ಪಂದನೆಯಲ್ಲಿ ಹುಬ್ಬಳ್ಳಿ ಕಮಿಷನರೇಟ್ ಮೊದಲ ಸ್ಥಾನ ಪಡೆದಿದೆ.
ಹುಬ್ಬಳ್ಳಿ, ಮಾರ್ಚ್, 20: ಹುಬ್ಬಳ್ಳಿ -ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಬೆಳವಣಿಗೆ ಹಾಗೂ ಜನಸ್ನೇಹಿ ಕಾರ್ಯಗಳು ನಡೆಯುತ್ತಿವೆ. ಸಾಕಷ್ಟು ಬದಲಾವಣೆ ಬಳಿಕ ಇದೀಗ ಪೊಲೀಸ್ ಕಮೀಷನರೇಟ್ ಮಹತ್ವದ ಘಟ್ಟವನ್ನು ತಲುಪುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಮತ್ತೊಂದು ಗೌರವದ ಗರಿಯನ್ನು ಮುಡಿಗೇರಿಸಿಕೊಂಡಿದೆ.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ (ಇಆರ್‌ಎಸ್‌ಎಸ್-112) ಎರಡು ತ್ರೈಮಾಸಿಕ ಪ್ರಗತಿಯ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿದೆ. 2022ರ ಜುಲೈ-ಸೆಪ್ಟೆಂಬರ್ ಮತ್ತು ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಕ್ರಮವಾಗಿ ಸಾರ್ವಜನಿಕರು ಕರೆ ಮಾಡಿದ ಸರಾಸರಿ 5:09 ನಿಮಿಷ ಅಥವಾ 5 ನಿಮಿಷಗಳ ಒಳಗೆ ಸೇವೆಗೆ ಹಾಜರಿರುತ್ತಿತ್ತು.

ಕಳೆದ ತ್ರೈಮಾಸಿಕ ಅವಧಿಯಲ್ಲಿ ಬೆಳಗಾವಿ ನಗರ ಸರಾಸರಿ 5:39 ನಿಮಿಷ, ಮೈಸೂರು ನಗರ ಸರಾಸರಿ 7:42 ನಿಮಿಷಗಳಲ್ಲಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ. ಯಾದಗಿರಿ ಸರಾಸರಿ 40:01 ನಿಮಿಷ, ದಕ್ಷಿಣ ಕನ್ನಡ ಸರಾಸರಿ 38:48 ನಿಮಿಷ, ಚಿತ್ರದುರ್ಗ ಸರಾಸರಿ 37:54 ನಿಮಿಷಗಳಲ್ಲಿ ಸೇವೆ ನೀಡುವ ಮೂಲಕ ಕೊನೆಯ ಮೂರು ಸ್ಥಾನಗಳಲ್ಲಿವೆ. ರಾಜ್ಯಾದ್ಯಂತ 734 ವಾಹನಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿವೆ.
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 2020ರ ಡಿಸೆಂಬರ್ 16ರಂದು ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕಮಿಷನರೇಟ್‌ನಲ್ಲಿ 15 ಠಾಣೆಗಳಿದ್ದು, ಪ್ರತಿ ಠಾಣೆಗೂ ಒಂದೊಂದು ಹೊಯ್ಸಳ ವಾಹನವನ್ನು ನೀಡಲಾಗಿದೆ. ನಿಗದಿಪಡಿಸಿರುವ 24 ಸ್ಥಳಗಳಲ್ಲಿ ವಾಹನಗಳು ನಿಲ್ಲುತ್ತವೆ.
ಒಂದೊಂದು ವಾಹನದಲ್ಲಿ ಎಎಸ್‌ಐ ನೇತೃತ್ವದಲ್ಲಿ ಹೆಡ್ ಕಾನ್‌ಸ್ಟೇಬಲ್ ಮತ್ತು ಕಾನ್‌ಸ್ಟೇಬಲ್ ಕಾರ್ಯ ನಿರ್ವಹಿಸುತ್ತಾರೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರು ಕರೆ ಮಾಡಿದ ಐದು ನಿಮಿಷದಲ್ಲಿ ಸಿಬ್ಬಂದಿ ಸ್ಥಳಕ್ಕೆ ಹಾಜರಾಗುತ್ತಿದ್ದು, ಈ ವ್ಯವಸ್ಥೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಅಪರಾಧ ಪ್ರಕರಣಗಳ ತಡೆಗೆ ಪ್ಲಾನ್
ಯುವತಿಯರನ್ನು ಚುಡಾಯಿಸುವುದು, ಮೊಬೈಲ್, ಚಿನ್ನದ ಸರ ಲೂಟಿ, ಅಪಹರಣ, ಅಪಘಾತ, ದರೋಡೆ, ಕಲಹ, ಕಳವು ಸೇರಿದಂತೆ ಹಲವಾರು ಪ್ರಕರಣಕ್ಕೆ ಕಡಿವಾಣ ಹಾಕಲು ಹು-ಧಾ ಮಹಾನಗರದಲ್ಲಿ 112ರ ಸೇವೆ ಇನ್ನಷ್ಟು ಜನಪ್ರಿಯಗೊಳಿಸಲು ಕಮಿಷನರೇಟ್ ಘಟಕ ಮುಂದಾಗಿದೆ.
ಜನರಿಗೆ ಜಾಗೃತಿ ಮೂಡಿಸಲು ನಿರ್ಧಾರ
ನಗರದ ಪ್ರಮುಖ ಸ್ಥಳಗಳಲ್ಲಿ ಸಂಖ್ಯೆ 112 ವಾಹನದ ಬಗ್ಗೆ ಮಾಹಿತಿ ನೀಡುವ ಬ್ಯಾನರ್‌ಗಳನ್ನು ಮತ್ತು ಫಲಕಗಳನ್ನು ಅಳವಡಿಸಲು ನಿರ್ಧರಿಸಿದೆ. ರೈಲ್ವೆ ಮತ್ತು ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶ ಸೇರಿದಂತೆ ಪ್ರಮುಖ ವೃತ್ತಗಳು, ಮಠ-ಮಂದಿರ, ದೇವಸ್ಥಾನಗಳಲ್ಲಿ ಚಿಕ್ಕ ಬರಹಗಳಿರುವ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿದೆ.
ಎಸ್‌ಪಿ ಸಮಾಜಮುಖಿ ಕಾರ್ಯಕ್ಕೆ ಭಾರಿ ಮೆಚ್ಚುಗೆ
ಹಾಗೆಯೇ ಗದಗ ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದನ್ನರಿತ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ವಾಹನ ಸವಾರರಿಗೆ ಅನುಕೂಲ ಆಗುವಂತಹ ಉತ್ತಮ ಕೆಲಸವೊಂದನ್ನು ಮಾಡಿದ್ದಾರೆ. ಅವರ ಈ ಒಂದು ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟ್ರಾಫಿಕ್ ಸಿಗ್ನಲ್‌ನಲ್ಲಿ ಟಾರ್ಪಲಿನ್ ವ್ಯವಸ್ಥೆ
ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್‌ನಲ್ಲಿ ಬಿಸಿಲಿನ ಬೇಗೆಯಲ್ಲಿ ಒದ್ದಾಡುವ ವಾಹನ ಸವಾರರಿಗೆ ಹಸಿರು ನರ್ಸರಿ ತಾರ್ಪಾಲಿನ್ ಹಾಕಿ ನೆರಳು ಕಲ್ಪಿಸಿಕೊಡುವ ನೂತನ ವ್ಯವಸ್ಥೆ ಮಾಡಿದ್ದು, ಇದಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಟ್ರಾಫಿಕ್ ಕಿರಿಕಿರಿ ಮತ್ತು ಬಿಸಿಲಿನಿಂದ ಬೇಸತ್ತ ಜನರಿಗೆ ಇದು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಲು ಉತ್ತಮ ವ್ಯವಸ್ಥೆಯಾಗಿದೆ. ಎಷ್ಟೇ ಟ್ರಾಫಿಕ್ ಆದರೂ ಈ ಹಸಿರು ನರ್ಸರಿ ತಾರ್ಪಾಲಿನ್ ನೆರಳಿನಲ್ಲಿ ನಿಂತು ಸುಧಾರಿಸಿಕೊಂಡ ಬಳಿಕ ವಾಹನ ಸವಾರರು ಪ್ರಯಾಣವನ್ನು ಮುಂದುವರೆಸುತ್ತಾರೆ.












Click it and Unblock the Notifications