ಹುಬ್ಬಳ್ಳಿಯಲ್ಲಿ ಟೈರ್ ಬ್ಲಾಸ್ಟ್ ಆಗಿ ಹೊತ್ತಿ ಉರಿದ ಖಾಸಗಿ ಬಸ್
ಹುಬ್ಬಳ್ಳಿ, ನವೆಂಬರ್, 13: ಪುಣೆದಿಂದ ಉಡುಪಿಗೆ ಹೋಗುತ್ತಿದ್ದ ಖಾಸಗಿ ಬಸ್‌ನ ಹಿಂದಿನ ಚಕ್ರ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡು ಉರಿದಿದೆ. ನಡು ರಸ್ತೆಯಲ್ಲಿಯೇ ಬಸ್‌ನಲ್ಲಿ ಬೆಂಕಿ ಹೊತ್ತಿ ಉರಿದಿದ್ದು, ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯ ಬಳಿ ಶನಿವಾರ ರಾತ್ರಿ 2:45ರ ಸುಮಾರಿಗೆ ಸಂಭವಿಸಿದೆ.
ರೇಷ್ಮಾ ಟ್ರಾವೆಲ್ಸ್ ಕಂಪನಿಗೆ ಸೇರಿದ ಖಾಸಗಿ ಬಸ್ ನಿನ್ನೆ ಪುಣೆದಿಂದ ಉಡುಪಿಯತ್ತ ಹೋಗುತ್ತಿತ್ತು. ಹುಬ್ಬಳ್ಳಿ-ಧಾರವಾಡ ಬೈಪಾಸ್ ಬಳಿ ಬಸ್ಸಿನ ಹಿಂದಿನ ಚಕ್ರ ಬ್ಲಾಸ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಆಗ ಚಾಲಕ ತಕ್ಷಣವೇ ಬಸ್ ನಿಲ್ಲಿಸಿ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾನೆ. ಇದ್ದಕ್ಕಿದ್ದಂತೆ ಸಂಪೂರ್ಣವಾಗಿ ಬೆಂಕಿ ಆವರಿಸಿದ ಪರಿಣಾಮ ಖಾಸಗಿ ಬಸ್ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಈ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಸೂಪರ್ ಮಾರ್ಟ್ನಲ್ಲಿಅಗ್ನಿ ಅವಘಡ
ಇನ್ನು ಇತ್ತೀಚೆಗಷ್ಟೇ ರಿಚ್ಮಂಡ್ ಟೌನ್ ನಂಜಪ್ಪ ಸರ್ಕಲ್ ಬಳಿಯ ಶಾಂತಾರಾಮ್ ಕಾಂಪ್ಲೆಕ್ಸ್‌ನಲ್ಲಿದ್ದ ಫ್ಯಾಮಿಲಿ ಸೂಪರ್ ಮಾರ್ಟ್ನಲ್ಲಿಅಗ್ನಿ ಅವಘಡ ಸಂಭವಿಸಿತ್ತು. ಶಾರ್ಟ್ ಸರ್ಕ್ಯೂಟ್ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿತ್ತು. ಘಟನೆ ರಾತ್ರಿ ಸಂಭವಿಸಿದ್ದರಿಂದ ಭಾರಿ ಅನಾಹುತ ತಪ್ಪಿತ್ತು. ಅಂಗಡಿಯಲ್ಲಿದ್ದ ಕೆಲ ವಸ್ತುಗಳು ಅಗ್ನಿಗಾಹುತಿ ಆಗಿದ್ದವು. ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿ ಆಗಿತ್ತು.

ವುಡ್ ವರ್ಕ್, ಬುಕ್ಸ್ ಸಂಗ್ರಹಣೆ ಜಾಸ್ತಿ ಇದ್ದಿದ್ದರಿಂದ ಬೆಂಕಿ ವ್ಯಾಪಿಸಿ ಸಂಪೂರ್ಣ ಸೂಪರ್ ಮಾರ್ಕೆಟ್ ಅಗ್ನಿಗಾಹುತಿ ಆಗಿತ್ತು. ಒಂದೇ ರಾತ್ರಿಯಲ್ಲಿ 4 ಕೋಟಿ ನಷ್ಟವಾಗಿದ್ದು, ಹತ್ತಾರು ನೌಕರರ ಬದುಕು ಬೀದಿಗೆ ಬಿದ್ದಿದ್ದರು. ಈ ಶಾಪಿಂಗ್ ಮಾರ್ಟ್ ಅನ್ವರ್ ಎಂಬುವವರ ಮಾಲಿಕತ್ವದಲ್ಲಿ ಇತ್ತು. ಸೆಪ್ಟೆಂಬರ್ 6ರಂದು ರಾತ್ರಿ 1:30ರ ಸುಮಾರಿಗೆ ಕಾಂಪ್ಲೆಕ್ಸ್‌ನ ಒಂದು ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದರು. ಘಟನೆ ಆರಂಭದಲ್ಲೇ ಅಗ್ನಿಶಾಮಕ ದಳದ ವಾಹನವೊಂದು ಸ್ಥಳಕ್ಕೆ ಬಂದಿತ್ತು. ನಂತರ ಬೆಂಕಿಯ ಕೆನ್ನಾಲಿಗೆ ಕಂಡು ಹೆಚ್ಚುವರಿ ಅಗ್ನಿಶಾಮಕ ವಾಹನ ಕರೆಸಿಕೊಳ್ಳಲಾಗಿತ್ತು. ಉಳಿದ ವಾಹನಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಇಡೀ ಕಾಂಪ್ಲೆಕ್ಸ್ ಅಗ್ನಿಗೆ ಆಹುತಿಯಾಗಿತ್ತು.

ಶಾಪಿಂಗ್ ಮಾರ್ಟಿನಲ್ಲಿದ್ದ 4 ಲಕ್ಷ ನಗದು, 3 ಕೋಟಿಯಷ್ಟು ವಸ್ತುಗಳು, 1 ಕೋಟಿ ಮೌಲ್ಯದ ಪೀಠೋಪಕರಣ ಸಂಪೂರ್ಣ ಸುಟ್ಟು ಭಸ್ಮವಾಗಿದ್ದವು. 9 ಅಗ್ನಿಶಾಮಕ ವಾಹನಗಳಿಂದ ಬೆಳಗ್ಗಿನ ಜಾವದವರೆಗೂ ಬೆಂಕಿ ನಂದಿಸುವ ಕಾರ್ಯ ನಡೆದಿತ್ತು.












Click it and Unblock the Notifications