ಧಾರವಾಡ: ಡ್ರೋನ್ ಬಳಸಿ ಜನವಸತಿ, ಜಮೀನು ಮತ್ತು ನಗರೀಕೃತ ಆಸ್ತಿಗಳ ಸಮೀಕ್ಷೆ
ಧಾರವಾಡ, ನವೆಂಬರ್ 10: ರಾಜ್ಯ ಸರಕಾರವು ಜನವಸತಿ ಪ್ರದೇಶಗಳಲ್ಲಿನ ಆಸ್ತಿಗಳ ಅಳತೆ ಕುರಿತು ಸ್ವಾಮಿತ್ವ ಮತ್ತು ಹಿಡುವಳಿ ಜಮೀನುಗಳ ಕುರಿತು ಮರುಭೂಮಾಪನ ಮತ್ತು ನಗರೀಕೃತ ಆಸ್ತಿಗಳ ಅಳತೆ ಕುರಿತು ಯುಪಿಓಆರ್ ಯೋಜನೆಯನ್ನು ಆಧುನಿಕ ತಂತ್ರಜ್ಞಾನದಡಿ ಡ್ರೋನ್ ಅಥವಾ ಯುಎವಿ ಬಳಸಿ ದಾಖಲೆಗಳನ್ನು ತಯಾರಿಸುವ ಕುರಿತು ಮಹತ್ತರವಾದ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲೂಕಿನ ಕೊಟೂರ ಗ್ರಾಮದಲ್ಲಿ ಸಮೀಕ್ಷೆ ಆರಂಭಿಸಲಾಗಿದೆ. ಮರುಭೂಮಾಪನ, ಯುಪಿಓಆರ್ ಮತ್ತು ಬಾಕಿ ಉಳಿದ ಗ್ರಾಮಗಳ ಸ್ವಾಮಿತ್ವ ಯೋಜನೆಯ ಕಾರ್ಯವನ್ನು ಕೈಗೊಳ್ಳುವ ಸಲುವಾಗಿ ಭೂಮಾಪನ ಇಲಾಖೆಯು ಹೈದರಾಬಾದ್ ಮೂಲದ ಸತ್ರ ಸರ್ವಿಸಸ್ ಕಂಪನಿಯ ಸಹಯೋಗದಲ್ಲಿ ಜಿಲ್ಲೆಯ ಧಾರವಾಡ ತಾಲೂಕಿನ ಕೋಟೂರ ಗ್ರಾಮದ ಮೂಲಕ ಡ್ರೋನ್ ಹಾರಾಟವನ್ನು ಪ್ರಾರಂಭಿಸಿದೆ.
ಈ ಯೋಜನೆಯಡಿ ಧಾರವಾಡ ಜಿಲ್ಲೆಯ ಎಲ್ಲಾ ತಾಲೂಕುಗಳ ಒಟ್ಟು 365 ಗ್ರಾಮಗಳಿಗೆ ಸಂಬಂಧಿಸಿದಂತೆ ಅಂದಾಜು 4,260 ಚದರ ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶವು ಯೋಜನೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಡ್ರೋನ್ ಮೂಲಕ ಸಮೀಕ್ಷೆ ಮಾಡುವುದರಿಂದ ಪ್ರತಿ ಜನವಸತಿ ಮತ್ತು ಹಿಡುವಳಿ ಜಮೀನುಗಳಿಗೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನದಡಿ ಗಣಕೀಕೃತ ಮಾಹಿತಿ ಲಭ್ಯವಾಗುತ್ತದೆ. ಸರಕಾರಿ ಆಸ್ತಿಗಳ ಸಂರಕ್ಷರಣೆ ಮಾಡುವ ನಿಟ್ಟಿನಲ್ಲಿ ಇದರಿಂದ ಅನುಕೂಲವಾಗುತ್ತದೆ. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕ್ರಿಯಾಯೋಜನೆಗಳನ್ನು ತಯಾರಿಸುವಲ್ಲಿ ನೆರವಾಗುತ್ತದೆ.
ಆಸ್ತಿಗಳಿಗೆ ಸಂಬಂಧಿಸಿದಂತೆ ಗಣಕೀಕೃತ ಮಾಹಿತಿ ಲಭ್ಯವಾಗುವುದರಿಂದ, ಸಾರ್ವಜನಿಕರಿಗೆ ತ್ವರಿತ ಗತಿಯಲ್ಲಿ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ನಿಖರ ಮಾಹಿತಿಯನ್ನು ಒಳಗೊಂಡಿರುವುದರಿಂದ ವ್ಯಾಜ್ಯಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ವಿಜಯಕುಮಾರ್ ತಿಳಿಸಿದ್ದಾರೆ.

ಕೋಟೂರ ಗ್ರಾಮದಲ್ಲಿ ಡ್ರೋನ್ ಹಾರಾಟ ಪ್ರಾರಂಬಿಸುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಭೂಮಾಪನ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ ಎ.ಪಿ., ಧಾರವಾಡ ಭೂದಾಖಲೆಗಳ ಸಹಾಯಕ ನಿರ್ದೇಶಕಿ ತನ್ವೀನ್ ಡಾಂಗೆ ಮತ್ತು ಭೂದಾಖಲೆಗಳ ಉಪನಿರ್ದೇಶಕರ ಕಚೇರಿಯ ತಪಾಸಕ ಎನ್.ಬಿ.ಶ್ಯಾನಭೋಗರ ಉಪಸ್ಥಿತರಿದ್ದರು.












Click it and Unblock the Notifications