ಹದಿನೈದು ದಿನ ಕಳೆದರೂ ಬಾರದ ಕುಡಿಯುವ ನೀರು: ಪಾಲಿಕೆಯಿಂದ ಬರೀ ಪೊಳ್ಳು ಭರವಸೆ, ರೊಚ್ಚಿಗೆದ್ದ ಹುಬ್ಬಳ್ಳಿ ಮಂದಿ
ಹುಬ್ಬಳ್ಳಿ, ಮೇ, 29: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಕುಡಿಯುವ ನೀರಿಗಾಗಿ ದಿನವೂ ಜನರು ಸರ್ಕಸ್ ಮಾಡುತ್ತಿದ್ದಾರೆ. ಅದೆಷ್ಟೋ ಮನವಿ ಮಾಡಿದರೂ ಕುಡಿಯುವ ನೀರನ್ನು ಪಡೆಯಲು ಜನರಿಗೆ ಸಾಧ್ಯವಾಗುತ್ತಿಲ್ಲ. ಜಲಮಂಡಳಿಯ ಜವಾಬ್ದಾರಿಯನ್ನು ಖಾಸಗೀಕರಣದ ಮೂಲಕ ಎಲ್ ಆ್ಯಂಡ್ ಟಿ ಕಂಪನಿಗೆ ನೀಡಿದೆ. ಆದರೆ ಜನರ ಭವಣೆ ಮಾತ್ರ ಕಡಿಮೆ ಆಗಿಲ್ಲ. ಆದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ಮಾತನ್ನು ಮಾತ್ರ ಪಾಲಿಕೆ ಇನ್ನೂ ಕೈ ಬಿಟ್ಟಿಲ್ಲ.
ಈಗಾಗಲೇ ಹೆಚ್ಚಿದ ತಾಪಮಾನದಿಂದ ಜನರು ಕಂಗಾಲಾಗಿದ್ದು, ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹನಿ ಹನಿ ನೀರಿಗೂ ಹುಬ್ಬಳ್ಳಿ-ಧಾರವಾಡದಲ್ಲಿ ಹಾಹಾಕಾರ ಉಂಟಾಗಿದೆ. ಎಲ್ ಆ್ಯಂಡ್ ಟಿ ಕಂಪನಿಯ ಅವ್ಯವಸ್ಥೆಯಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ನೀರು ಬರುತ್ತಿಲ್ಲ ಎನ್ನುವ ಸಮಸ್ಯೆ ಒಂದು ಕಡೆಯಾದರೇ, ಮತ್ತೊಂದೆಡೆ ಪಾಲಿಕೆಯ ಬೇಜವಾಬ್ದಾರಿಯಿಂದ ಜನರು ಬೇಸತ್ತಿದ್ದಾರೆ.

ಹದಿನೈದು ದಿನ ಕಳೆದರೂ ಹುಬ್ಬಳ್ಳಿ-ಧಾರವಾಡದ ಬಹುತೇಕ ಕಡೆಗಳಲ್ಲಿ ಕುಡಿಯುವ ನೀರು ಬರುತ್ತಿಲ್ಲ. ಅಲ್ಲದೇ ನವನಗರದ ಕಡೆಯ ಕಾರ್ಮಿಕ ಕಾಲೋನಿ ಹಾಗೂ ಎಪಿಎಂಸಿಯಲ್ಲಿರುವ ಬಸವ ಕಾಲೋನಿಯಲ್ಲಿ ಕುಡಿಯಲು ನೀರು ಸಿಗುತ್ತಿಲ್ಲ. ಇದರಿಂದ ಜನರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದಾರೆ. ಏತನ್ಮಧ್ಯೆ ಮೊನ್ನೆಯಷ್ಟೇ ಚುನಾವಣೆ ಬಹಿಷ್ಕಾರ ಮಾಡಲು ಕೂಡ ಜನರು ಮುಂದಾಗಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ ಎಂದು ಇಲ್ಲಿನ ನಿವಾಸಿ ದುರ್ಗಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಹುಬ್ಬಳ್ಳಿಯ ನವ ಅಯೋಧ್ಯಾ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರು ಬರುತ್ತಿದ್ದು, ಜನರು ಅನಿವಾರ್ಯತೆಯಿಂದ ಇದೇ ನೀರನ್ನು ಕುಡಿಯುವಂತಹ ಪರಿಸ್ಥಿತಿ ಎದುರಾಗಿದೆ. ನೀರು ಸರಬರಾಜಿನಲ್ಲಿ ವಿಳಂಬವಾಗುತ್ತಿದ್ದರೂ ಕೂಡ ಜನರಿಗೆ ಕುಡಿಯಲು ಯೋಗ್ಯವಾದ ನೀರು ಸಿಗಂದಂತಾಗಿದೆ.
ಚರಂಡಿ ನೀರಿನಿಂದ ಮಿಶ್ರಣಗೊಂಡ ಅಶುದ್ಧ ನೀರನ್ನು ಜನರು ಕುಡಿಯುವಂತಹ ಅನೀವಾರ್ಯತೆ ಬಂದೊದಗಿದೆ. ಈ ಬಗ್ಗೆ ಸ್ಥಳೀಯರು ತಮ್ಮ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕುಡಿಯುವ ನೀರನ್ನು ಕೊಡಲು ಆಗದ ಪಾಲಿಕೆ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ಆದರೆ ಪಾಲಿಕೆ ಆಯುಕ್ತರು ಮಾತ್ರ ಕೂಡಲೇ ಸಮಸ್ಯೆ ಬಗೆಹರಿಸುವ ಭರವಸೆ ಮಾತನ್ನು ಮಾತ್ರ ಕೈ ಬಿಟ್ಟಿಲ್ಲ.
ಒಟ್ಟಿನಲ್ಲಿ ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯಲ್ಲಿ ಜನರಿಗೆ ಕುಡಿಯಲು ಸಮರ್ಪಕವಾದ ನೀರನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿಗಾಗಿ ಜನರು ಹೋರಾಟ ಮಾಡುವುದು ಅನಿವಾರ್ಯ ಆಗಿದೆ. ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುವುದನ್ನು ಬಿಟ್ಟು ಕುಡಿಯುವ ನೀರಿನ್ನು ಒದಗಿಸುವ ಕಾರ್ಯವನ್ನು ಮಾಡಬೇಕಿದೆ ಎನ್ನುವುದು ಇಲ್ಲಿನ ಸ್ಥಳೀಯರ ಒತ್ತಾಯ ಆಗಿದೆ.
ಚಾಮರಾಜನಗರ ಜಿಲ್ಲೆಯಲ್ಲೂ ಕುಡಿಯುವ ನೀರಿನ ಸಮಸ್ಯೆ
ಹಾಗೆಯೆ ಕುಡಿಯುವ ನೀರಿನ ಸಮಸ್ಯೆ ಜಲಜೀವನ್ ಮಿಷನ್ ಕಾಮಗಾರಿ ವೇಳೆ ಗ್ರಾಮಕ್ಕೆ ಸರಬರಾಜಾಗುವ ನೀರಿನ ಪೈಪ್ ಲೈನ್ ಹಾಗೂ ವಿದ್ಯುತ್ ಕೇಬಲ್ ತುಂಡಾಗಿದ್ದು, ಚಾಮರಾಜನಗರದ ಆನೆ ಹೊಲ ಗ್ರಾಮದ ನಿವಾಸಿಗಳು ಜನರು ಹಳ್ಳದ ಕಲುಷಿತ ನೀರನ್ನು ಬಸಿದು ಮನೆಗಳಿಗೆ ತಂದು ಕುಡಿಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಆನೆ ಹೋಲ ಗ್ರಾಮದಲ್ಲಿ 200 ಮನೆಗಳಿದ್ದು 400 ಹೆಚ್ಚು ಜನಸಂಖ್ಯೆ ಹೊಂದಿರುವ ಕುಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕಲುಷಿತ ನೀರನ್ನು ಬಳಸುವಂತಹ ಪರಿಸ್ಥಿತಿ ಉದ್ಭವಿಸಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಕೊಕ್ಕು ಬೋರೆ ತುಳಸಿಕೆರೆ ಪಾಲಾರ್ ಪಡಸಲನಾಥ ಗ್ರಾಮಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಶೇ.80ರಷ್ಟು ಪೈಪ್ಲೈನ್ ಅಳವಡಿಕೆ ಪೂರ್ಣಗೊಂಡಿದೆ.
ಆದರೆ ಆನೆ ಹೊಲ ಗ್ರಾಮದಲ್ಲಿ ಪೈಪ್ಲೈನ್ ಅಳವಡಿಸಲು ಜೆಸಿಬಿ ಯಂತ್ರದ ಮೂಲಕ ಗುಂಡಿ ತೆಗೆಯುವಾಗ ಅವೈಜ್ಞಾನಿಕವಾಗಿ ಗ್ರಾಮಕ್ಕೆ ಸರಬರಾಜ ಆಗುವ ನೀರಿನ ಪೈಪ್ಲೈನ್ ಮತ್ತು ವಿದ್ಯುತ್ ಕೇಬಲ್ ಕಳೆದ ಎಂಟು ದಿನಗಳ ಹಿಂದೆ ಪೈಪ್ ಲೈನ್ ಓಡೆದಿದೆ. ಅಧಿಕಾರಿಗಳು ಹಾಗೂ ಜಲಜೀವನ್ ಮಿಷನ್ ಯೋಜನೆ ಕೈಗೆತ್ತಿಕೊಂಡ ಗುತ್ತಿಗೆದಾರರು ಈ ಬಗ್ಗೆ ಗಮನ ಹರಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಪೈಪ್ ಲೈನ್ ದುರಸ್ತಿ ಪಡಿಸದೆ ಇರುವುದರಿಂದ ಆನೆ ಹೊಲ ಗ್ರಾಮದಲ್ಲಿ ಜನರು ನೀರಿಗಾಗಿ ಕಿಲೋ ಮೀಟರ್‌ಗಟ್ಟಲೆ ತೆರಳುವಂಥ ಪರಿಸ್ಥಿತಿ ಉಂಟಾಗಿದೆ.
ಸದ್ಯ ಹಳ್ಳದ ನೀರೇ ಆನೆ ಹೊಲ ಗ್ರಾಮದ ನಿವಾಸಿಗಳಿಗೆ ಜೀವಾಧಾರವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಕರಡಿ ಶೀಳು ಹಳ್ಳದಿಂದ ಮಹಿಳೆಯರು ಕಲುಷಿತ ನೀರು ತಂದು ಬಸಿದು ಬಳಕೆ ಮಾಡುತ್ತಿದ್ದಾರೆ. ನೀರಿಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ಮಹಿಳೆಯರು ಹಳ್ಳದ ನೀರನ್ನು ತಂದು ಬಿಂದಿಗೆಗೆ ಬಟ್ಟೆ ಕಟ್ಟಿ ಸೋಸಿ ಕುಡಿಯಲು ತರುವಂತಹ ಶೋಚನೀಯ ಸ್ಥಿತಿ ಗ್ರಾಮದ ಜನರಿಗೆ ಉಂಟಾಗಿದೆ.












Click it and Unblock the Notifications