LPG Price Hike: ಹುಬ್ಬಳ್ಳಿಯಲ್ಲಿ ರಸ್ತೆಗಿಳಿದು ಸರ್ಕಾರದ ವಿರುದ್ಧ "ಸಮರ" ಸಾರಿದ ಮಹಿಳೆಯರು
ದಿನಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಲೇ ಇದ್ದು, ಈ ಬೆಲೆ ಏರಿಕೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ನೂರಾರು ಮಹಿಳೆಯರು ನಡು ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಹುಬ್ಬಳ್ಳಿ, ಮಾರ್ಚ್, 03: ದಿನದಿಂದ ದಿನಕ್ಕೆ ದಿನಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಲೇ ಇದೆ. ಈ ಬೆಲೆ ಏರಿಕೆಯನ್ನು ಖಂಡಿಸಿ ಹುಬ್ಬಳ್ಳಿಯ ಸರ್ವೋದಯ ಸರ್ಕಲ್ ಬಳಿ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ನೂರಾರು ಮಹಿಳೆಯರು ನಡು ರಸ್ತೆಯಲ್ಲಿಯೇ ಅಡುಗೆ ಮಾಡುವುದರ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಡವರಿಗಾಗಿ ಅಚ್ಚೇ ದಿನ ಅಂತಾ ಯಾಮಾರಿಸುತ್ತಾ ಬರುತ್ತಿದೆ. ಇದನ್ನು ಹೊರತುಪಡಿಸಿ ಏನನ್ನು ಮಾಡಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ದಿನಬಳಕೆಯ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುತ್ತೇವೆ ಅಂತಾ ಹೇಳಿದ್ದರು. ಆದರೆ ಅಧಿಕಾರ ಬಂದ ಮೇಲೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಲೇ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1200 ರೂ. ತಲುಪಿದ ಗೃಹಬಳಕೆಯ ಗ್ಯಾಸ್ ಬೆಲೆ
ಮೊದಲೆಲ್ಲ 400 ರೂಪಾಯಿಗೆ ಸಿಗುತ್ತಿದ್ದ ಗ್ಯಾಸ್ ಇದೀಗ 1200 ರೂಪಾಯಿ ತಲುಪಿದೆ. ಈ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರು ಸರ್ವೋದಯ ಸರ್ಕಲ್‌ನಲ್ಲಿ ಗ್ಯಾಸ್ ಸಿಲಿಂಡರ್‌ಗಳಿಗೆ ಪೂಜೆ ಮಾಡಿ ಕಟ್ಟಿಗೆಯ ಮುಖಾಂತರ ನಡು ರಸ್ತೆಯಲ್ಲಿಯೇ ಅಡುಗೆ ಮಾಡಿದರು. ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪರಿಹಾರ ನೀಡದ ಸರ್ಕಾರದ ವಿರುದ್ಧ ಆಕ್ರೋಶ
ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತಪರ ಸರ್ಕಾರ ಎಂದು ಬೊಬ್ಬೆ ಹೊಡೆಯುತ್ತಿದೆ. ಆದರೆ ರೈತನ ಕಣ್ಣೀರು ಒರೆಸುವ ಕೆಲಸಕ್ಕೆ ಮಾತ್ರ ಸರ್ಕಾರ ಮುಂದಾಗಿಲ್ಲ. ಅನ್ನದಾತನ ಕಷ್ಟ ಹೇಳತೀರದಾಗಿದ್ದು, ಸರ್ಕಾರ ಹೇಳುವುದೊಂದು ಮಾಡುವುದು ಮತ್ತೊಂದು ಎನ್ನುವಂತಾಗಿದೆ.
ಹೈನುಗಾರಿಕೆಯನ್ನೇ ನಂಬಿ ಬದುಕುವ ರೈತ ಸಮುದಾಯಕ್ಕೆ ಬಹುದೊಡ್ಡ ಸಂಕಷ್ಟವನ್ನು ತಂದೊಡ್ಡಿದ್ದ ಸಮಸ್ಯೆಯೇ ಚರ್ಮಗಂಟು ರೋಗ. ಚರ್ಮಗಂಟು ರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಪರಿಹಾರ ನೀಡಲು ಘೋಷಣೆ ಮಾಡಿತ್ತು. ಆದರೆ ಈಗ ಯಾವುದೇ ಪರಿಹಾರ ಸಿಗದೇ ರೈತರು ಕಂಗಾಲಾಗಿದ್ದಾರೆ. ಇದುವರೆಗೂ 516 ರಾಸುಗಳಿಗೆ ಹಣ ಬಿಡುಗಡೆಯಾಗಿಲ್ಲ ಎನ್ನುವುದು ಜಿಲ್ಲೆಯ ಜನರ ವಾದವಾಗಿದೆ.












Click it and Unblock the Notifications