ಕಲಘಟಗಿ: ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ವೇಳೆ ಪತ್ರಕರ್ತನ ಮೇಲೆ ಇನ್ಸ್‌ಪೆಕ್ಟರ್ ದರ್ಪ
ಹುಬ್ಬಳ್ಳಿ, ಮಾರ್ಚ್ 16: ಕರ್ತವ್ಯ ನಿರತ ಪತ್ರಕರ್ತನ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ದರ್ಪ ಮೆರೆದ ಘಟನೆ ಕಲಘಟಗಿ ಪಟ್ಟಣದಲ್ಲಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮೌನ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ಬೆನ್ನಲ್ಲೇ ಇನ್ಸ್‌ಪೆಕ್ಟರ್ ಎಸ್.ಎಸ್.ಕೌಜಲಗಿ ಪತ್ರಕರ್ತರ ಮುಂದೆ ಕ್ಷಮೆಯಾಚನೆ ಮಾಡಿದ್ದಾರೆ.
ಕಲಘಟಗಿ ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ವರದಿಗೆ ಖಾಸಗಿ ವಾಹಿನಿಯ ಪತ್ರಕರ್ತರು ತೆರಳಿದ್ದರು. ಈ ವೇಳೆ ಏಕಾಏಕಿ ಮಳೆ ಬಂದ ಹಿನ್ನೆಲೆಯಲ್ಲಿ ಜನರು ವಾಹನಗಳತ್ತ ಮುಖ ಮಾಡಿದ್ದರು. ಈ ವೇಳೆ ಜನರ ವಿಡಿಯೋ ಮಾಡುತ್ತಿದ್ದ ಪತ್ರಕರ್ತರ ಮೇಲೆ ಏಕಾಏಕಿ ಕಲಘಟಗಿ ಪೊಲೀಸ್ ಠಾಣೆಯ ಸಿಪಿಐ ಎಸ್.ಎಸ್.ಕೌಜಲಗಿ ಅವರು ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.

ಈ ಘಟನೆಯಿಂದ ಬೇಸರಗೊಂಡ ಪತ್ರಕರ್ತರು ಗುರುವಾರ ಪೊಲೀಸ್ ಠಾಣೆ ಮುಂದೆ ಮೌನ ಪ್ರತಿಭಟನೆ ನಡೆಸಿದರು. ಇದೇ ವೇಳೆ ಪೊಲೀಸ್ ಅಧಿಕಾರಿಗಳು ಪತ್ರಕರ್ತರ ಮನವೊಲಿಸಲು ಮುಂದಾಗಿದ್ದರು. ಆದರೆ ಪತ್ರಕರ್ತರು ಪ್ರತಿಭಟನೆ ಮುಂದುವರಿಸಿದ್ದರು. ಕೊನೆಯಲ್ಲಿಸಿಪಿಐ ಎಸ್.ಎಸ್.ಕೌಜಲಗಿ ಪತ್ರಕರ್ತರ ಮುಂದೆ ಕ್ಷಮೆ ಕೇಳಿದ್ದಾರೆ.

ಇನ್ನು ಈ ಘಟನೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರು ತೀವ್ರವಾಗಿ ಖಂಡಿಸಿದ್ದಾರೆ. ಪತ್ರಕರ್ತರನ್ನು ನಿಂದಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದು, ಧಾರವಾಡ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸಿಪಿಐ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಭರವಸೆಯನ್ನು ನೀಡಿದ್ದಾರೆ.












Click it and Unblock the Notifications