Vande Bharat; ಬೆಂಗಳೂರು-ಧಾರವಾಡ ರೈಲಿನ ವೇಳಾಪಟ್ಟಿ ಬದಲಾಯಿಸಿ
ಹುಬ್ಬಳ್ಳಿ, ಜುಲೈ 05; ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿದೆ. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಕರ್ನಾಟಕದಲ್ಲಿ ಸಂಚಾರ ನಡೆಸುತ್ತಿರುವ 2ನೇ ವಂದೇ ಭಾರತ್ ರೈಲು ಇದಾಗಿದೆ.
ಜೂನ್ 28ರಿಂದ ಮಂಗಳವಾರ ಹೊರತುಪಡಿಸಿ ವಾರದ ಉಳಿದ ದಿನ ಬೆಂಗಳೂರು-ಧಾರವಾಡ ನಡುವೆ ದಿನಕ್ಕೆ ಒಂದು ಟ್ರಿಪ್ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ಈ ಮೂಲಕ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಬೆಸೆಯಲು ಭಾರತದ ಸೆಮಿ ಹೈಸ್ಪೀಡ್ ರೈಲು ಸಹಾಯಕವಾಗಿದೆ.

ಸದ್ಯ ಮುಂಜಾನೆ ಬೆಂಗಳೂರಿನಿಂದ ಹೊರಡುವ ವಂದೇ ಭಾರತ್ ರೈಲು ಮಧ್ಯಾಹ್ನ ಹುಬ್ಬಳ್ಳಿ-ಧಾರವಾಡ ತಲುಪಲಿದೆ. ಧಾರವಾಡದಿಂದ ಮಧ್ಯಾಹ್ನ ಹೊರಟು ಸಂಜೆ ಬೆಂಗಳೂರು ನಗರಕ್ಕೆ ರೈಲು ಆಗಮಿಸುತ್ತಿದೆ. ಈಗ ಈ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಹೇಗಿರಬೇಕು ವೇಳಾಪಟ್ಟಿ?; ಹುಬ್ಬಳ್ಳಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗ ದಕ್ಷಿಣ, ಪಶ್ಚಿಮ ರೈಲ್ವೆ ಪ್ರಧಾನ ವ್ಯಸ್ಥಾಪಕ ಸಂಜೀವ್ ಕಿಶೋರ್ ಭೇಟಿ ಮಾಡಿ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದೆ.
ವಂದೇ ಭಾರತ್ ರೈಲಿನ ಪ್ರಸ್ತುತ ವೇಳಾಪಟ್ಟಿ ಪ್ರಯಾಣಿಕರಿಗೆ ಅನುಕೂಲಕರವಾಗಿಲ್ಲ. ಆದ್ದರಿಂದ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಮನವಿ ಸ್ವೀಕಾರ ಮಾಡಿರುವ ಸಂಜೀವ್ ಕಿಶೋರ್, ಮನವಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ನಿಯೋಗ ಮನವಿಯಲ್ಲಿ ವಂದೇ ಭಾರತ್ ರೈಲು ಧಾರವಾಡದಿಂದ ಬೆಳಗ್ಗೆ 5.30ಕ್ಕೆ ಹೊರಟು, ಹುಬ್ಬಳ್ಳಿ ಮೂಲಕ ಬೆಂಗಳೂರು ನಗರಕ್ಕೆ ಕಚೇರಿ ಸಮಯಕ್ಕೆ ತಲುಪಬೇಕು. ಸಂಜೆ 5.30ಕ್ಕೆ ಬೆಂಗಳೂರು ನಗರದಿಂದ ಹೊರಟು, ರಾತ್ರಿ 11.30ಕ್ಕೆ ಧಾರವಾಡ ತಲುಪುವಂತೆ ಸಮಯ ಪರಿಷ್ಕರಣೆ ಮಾಡಬೇಕು ಎಂದು ಮನವಿ ಮಾಡಿದೆ.
ಪ್ರಸ್ತುತ ವೇಳಾಪಟ್ಟಿ; ಸದ್ಯ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲು ಮುಂಜಾನೆ ಬೆಂಗಳೂರು ನಗರದಿಂದ ಹೊರಟು ಮಧ್ಯಾಹ್ನ ಧಾರವಾಡಕ್ಕೆ ತಲುಪುತ್ತಿದೆ. ಈ ರೈಲು ಕೇವಲ 5 ಗಂಟೆ 45 ನಿಮಿಷದಲ್ಲಿ ಹುಬ್ಬಳ್ಳಿಗೆ ತಲುಪಲಿದೆ. ಬೆಂಗಳೂರು ನಗರದ ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್) ನಿಲ್ದಾಣದಿಂದ ಹೊರಡುವ ರೈಲು ಯಶವಂತಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ನಿಲುಗಡೆ ಹೊಂದಿದೆ.
ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಬೆಳಗ್ಗೆ 5.45ಕ್ಕೆ ಹೊರಡುವ ರೈಲು, 5.55ಕ್ಕೆ ಯಶವಂತಪುರ, 9.15 ದಾವಣಗೆರೆ, 11.30ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ತಲುಪಲಿದೆ. ಬಳಿಕ 12.10ಕ್ಕೆ ಧಾರವಾಡ ರೈಲು ನಿಲ್ದಾಣಕ್ಕೆ ಆಗಮಿಸಲಿದೆ.
ಧಾರವಾಡದಿಂದ ಮಧ್ಯಾಹ್ನ ಹೊರಡುವ ಧಾರವಾಡ-ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಧಾರವಾಡ ನಿಲ್ದಾಣದಿಂದ ಮಧ್ಯಾಹ್ನ 1.15ಕ್ಕೆ ಹೊರಡಲಿದೆ. 1.35ಕ್ಕೆ ಹುಬ್ಬಳ್ಳಿ, 3.38ಕ್ಕೆ ದಾವಣಗೆರೆ ಮತ್ತು ರಾತ್ರಿ 7.13ಕ್ಕೆ ಯಶವಂತಪುರ ತಲುಪಲಿದೆ. ಬಳಿಕ 7.45ಕ್ಕೆ ಕೆಎಸ್ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ.
ಇತರ ಬೇಡಿಕೆಗಳು; ಹುಬ್ಬಳ್ಳಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ವಂದೇ ಭಾರತ್ ರೈಲು ವೇಳಾಪಟ್ಟಿ ಬದಲಾವಣೆ ಮಾತ್ರವಲ್ಲ ಇತರ ಹಲವು ಬೇಡಿಕೆಗಳನ್ನು ಸಹ ಇಲಾಖೆಗೆ ಸಲ್ಲಿಕೆ ಮಾಡಿದೆ. ಅವುಗಳು ಹೀಗಿವೆ.
* ಹುಬ್ಬಳ್ಳಿ-ಮಹಾರಾಷ್ಟ್ರದ ಕೋಪರಗಾಂವ್ (ಶಿರಡಿ) ನೇರ ರೈಲು ಆರಂಭಿಸುವುದು
* ಹುಬ್ಬಳ್ಳಿ-ನಿಜಾಮುದ್ದೀನ್ ರೈಲಿಗೆ ಲೋಂಡಾದಿಂದ ಹೆಚ್ಚುವರಿ 3 ಎಸಿ, ಸ್ಲೀಪರ್ ಬೋಗಿ ಅಳವಡಿಸುವುದು
* ಮೈಸೂರು-ಉದಯಪುರ ರೈಲನ್ನು ಜೈನರ ತೀರ್ಥಕ್ಷೇತ್ರ ಮೋಹನಖೇಡಾದಲ್ಲಿ ನಿಲುಗಡೆ ಮಾಡುವುದು
* ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಸ್ಥಗಿತಗೊಂಡ ಎಲ್ಲಾ ರೈಲು ಪುನಃ ಆರಂಭಿಸುವುದು












Click it and Unblock the Notifications