ಕ್ಷುಲ್ಲಕ ಕಾರಣಕ್ಕೆ ಹರಿಯುತ್ತಿದೆ ನೆತ್ತರು: ಆತಂಕದಲ್ಲಿಯೇ ಜೀವಿಸುತ್ತಿದ್ದಾರೆ ಹುಬ್ಬಳ್ಳಿ ಜನರು
ಹುಬ್ಬಳ್ಳಿ, ಜುಲೈ 12: ಹೂಬಳ್ಳಿಯಂತೆ ಶಾಂತಿ ಹಾಗೂ ಸೌಹಾರ್ದತೆಯಿಂದ ಇರಬೇಕಿದ್ದ ನಗರ ಹುಬ್ಬಳ್ಳಿ. ವಾಣಿಜ್ಯ ಚಟುವಟಿಕೆಗಳ ಮೂಲಕ ಹೆಸರು ಮಾಡಿದ್ದ ಹುಬ್ಬಳ್ಳಿ ನಗರದಲ್ಲಿ ಸದ್ಯ ಕ್ಷುಲ್ಲಕ ಕಾರಣಕ್ಕೆ ನೆತ್ತರು ಹರಿಯುತ್ತಿದೆ. ಪುಡಿರೌಡಿಗಳ ಹಾವಳಿ ಒಂದು ಕಡೆಯಾದರೇ, ಮತ್ತೊಂದು ಕಡೆಯಲ್ಲಿ ಜನಸಾಮಾನ್ಯರು ಕೂಡ ಕ್ರೈಮ್ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ಆತಂಕ ಸೃಷ್ಟಿಸಿದೆ.
ಕ್ಷುಲ್ಲಕ ಕಾರಣಕ್ಕೆ ಕೊಲೆ, ಚಾಕು ಇರಿತ, ಸಣ್ಣ ಪುಟ್ಟ ಕಾರಣಕ್ಕೆ ಗಲಾಟೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದ ಲಾ ಆ್ಯಂಡ್ ಆರ್ಡರ್ ವ್ಯವಸ್ಥೆ ಹಳ್ಳ ಹಿಡಿದಂತಾಗಿದೆ. ಅದೆಷ್ಟೋ ನಿಯಮಗಳನ್ನು ಜಾರಿಗೊಳಿಸಿದರೂ ಕೂಡ ಅವಳಿನಗರದ ಲಗಾಮು ಪೊಲೀಸರ ಕೈಗೆ ಸಿಗದೇ ಇರುವುದರಿಂದ ಗೃಹ ಇಲಾಖೆ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತಾಗಿದೆ.

ಅವಳಿ ನಗರದಲ್ಲಿ ದಿನವೊಂದಕ್ಕೂ ಕೊಲೆ, ದರೋಡೆ, ಚಾಕು ಇರಿತ, ಮೀಟರ್ ಬಡ್ಡಿ ನೀಡುವವರ ಅಟ್ಟಹಾಸ ಮಿತಿಮೀರಿದೆ. ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊಲೆ, ಕೊಲೆ ಯತ್ನ, ಹಲ್ಲೆಯಂಥ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಚಾಕು, ಚೂರಿ, ತಲ್ವಾರ್, ಮತ್ತಿತರ ಮಾರಕಾಸ್ತ್ರಗಳು ಆಟಿಕೆಯಂತಾಗಿವೆ. ಸಾಮಾನ್ಯರೂ ಸಲೀಸಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ.
ಕಳೆದ ಒಂದು ವಾರದಲ್ಲಿ ಹುಬ್ಬಳ್ಳಿಯಲ್ಲಿ ಮೂರು ಕೊಲೆಗಳಾದ್ರೆ, ಒಂದೇ ದಿನದಲ್ಲಿ ಎರಡು ಕೊಲೆ ನಡೆದಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಒಂದು ಕೌಟುಂಬಿಕ ಕಲಹದ ಕೊಲೆಯಾದರೇ, ಮತ್ತೊಂದು ಕ್ಷುಲ್ಲಕ ಕಾರಣಕ್ಕೆ ಮಾರಾಕಸ್ತ್ರಗಳಿಂದ ಕೊಲೆಯಾಗುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಯುವಕನ ಬೆತ್ತಲೆ ಮಾಡಿ ಹಲ್ಲೆ ಮಾಡಿರುವ ಪ್ರಕರಣ ನೋಡಿದರೆ ಪುಡಿ ರೌಡಿಗಳಿಗೆ ಖಾಕಿಯ ಭಯವೇ ಇಲ್ಲದಂತಾಗಿದೆ.

ಕೇವಲ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಂದಾಜು 45 ಕೊಲೆಗಳು ನಡೆದಿವೆ ಎನ್ನಲಾಗಿದೆ. ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಳೇ ಹುಬ್ಬಳ್ಳಿ ಕೋಮು ಗಲಭೆ ನಂತರ ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ನೆತ್ತರು ಹರಿಯುತ್ತಲೇ ಇದೆ. ಹೀಗಿದ್ದರೂ ಪೊಲೀಸ್ ಇಲಾಖೆ ಮಾತ್ರ ಯಾವುದೇ ಕಠಿಣ ಕ್ರಮಗಳನ್ನು ಜರುಗಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹೈ ಅಲರ್ಟ್ ಆಗುವ ಪೊಲೀಸರು ರೌಡಿಶೀಟರ್ ಗಡಿಪಾರು ಮಾಡುತ್ತಾರೆ. ಆದರೆ ರೌಡಿಶೀಟರ್ ಕಡಿವಾಣ ಮಾತ್ರ ಸಾಧ್ಯವಾಗುತ್ತಿಲ್ಲ. ಅಲ್ಲದೇ ಪೊಲೀಸ್ ಇಲಾಖೆಯು ರೌಡಿ ಪರೇಡ್ ನಡೆಸಿ ಮಾಜಿ ಮಾಜಿ ಹಾಗೂ ಹಾಲಿಗಳಿಗೆ ಬಿಸಿ ಮುಟ್ಟಿಸುವ ಮೂಲಕ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿತ್ತು. ಸದ್ಯ ಪೊಲೀಸ್ ಆಯುಕ್ತರು ರೌಡಿ ಪರೇಡ್ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿ ನಗರದಲ್ಲಿ ಕ್ರೈಂ ಪ್ರಕರಣಗಳು ದಿನವೊಂದಕ್ಕೆ ಹೆಚ್ಚುತ್ತಿದ್ದು, ಜನರು ಯಾವ ಸಮಯದಲ್ಲಿ ಏನಾಗುತ್ತದೆಯೋ ಎಂಬುವಂತ ಆತಂಕದಲ್ಲಿಯೇ ಓಡಾಡುವಂತಾಗಿದೆ. ಇನ್ನಾದರೂ ರಾಜ್ಯದ ಗೃಹ ಸಚಿವರು ಹಾಗೂ ಪೊಲೀಸ್ ಕಮೀಷನರೇಟ್ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.











Click it and Unblock the Notifications