ಹುಬ್ಬಳ್ಳಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿಗಳು
ಹುಬ್ಬಳ್ಳಿ, ಆಗಸ್ಟ್ 24: ಸರ್ಕಾರದ ತಾರತಮ್ಯ, ರಾಜಕೀಯ ಪಕ್ಷಗಳ ಕಿತ್ತಾಟದಲ್ಲಿ ಮಹತ್ವದ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಾರಿಗೆ ಬಂದಿದ್ದ ಅದೆಷ್ಟೋ ಯೋಜನೆಗಳಿಗೆ ಬೊಮ್ಮಾಯಿ ಅವರ ಸರ್ಕಾರ ಕೊಕ್ಕೆ ಹಾಕಿದೆ ಎಂದು ಹುಬ್ಬಳ್ಳಿ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಡಿ ನಿರ್ಮಾಣವಾಗುತ್ತಿರುವ ಬೃಹತ್ ಕಟ್ಟಡಕ್ಕೆ ಅನುದಾನದ ಕೊರತೆ ಆಗಿದೆ. ಇದರಿಂದ ಇದೀಗ ಆ ಬೃಹತ್ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಉತ್ತಮ ಯೋಜನೆಯಡಿ ಜಾರಿಗೆ ಬಂದಿರುವ ಹಲವು ಕಾಮಗಾರಿಗಳು ಅರ್ಧದಲ್ಲೇ ನಿಂತು ಹಳ್ಳಹಿಡಿಯುತ್ತಿವೆ. ಸುಮ್ಮನೆ ಸರ್ಕಾರದ ಹಣ ಪೋಲಾಗುತ್ತಿದೆ ಎಂದು ಜನರು ಕಿರಿಕಾರಿದರು.
ಈ ಬೃಹತ್ ಕಟ್ಟಡ ಒಂದಲ್ಲ ಎರಡಲ್ಲ ಬರೋಬ್ಬರಿ 9ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ಈ ಕಟ್ಟಡ ಜನರ ಉಪಯೋಗಕ್ಕೆ ಅನುಕೂಲ ಆಗುತ್ತಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸರ್ಕಾರದ ನಿರ್ಲಕ್ಷ್ಯತನದಿಂದ ಐದು ವರ್ಷದಿಂದ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನಕ್ಕೆ ಹಣ ಬಿಡುಗಡೆಯಾಗಿತ್ತು. ಹುಬ್ಬಳ್ಳಿಯ ಪಡದಯ್ಯನ ಹಕ್ಕಲದಲ್ಲಿ ಅಂದಿನ ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್. ಆಂಜನೇಯ ಭೂಮಿ ಪೂಜೆ ಮಾಡಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಸರ್ಕಾರದಿಂದ ಕಟ್ಟಡದ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಹಣ ಇನ್ನು ಬಿಡುಗಡೆ ಆಗಿಲ್ಲ.

ಹಣ ಬಿಡುಗಡೆ ಆಗದ ಕಾರಣಕ್ಕೆ ಗುತ್ತಿಗೆದಾರ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿ ಕೈ ತೊಳೆದುಕೊಂಡಿದ್ದಾನೆ. ಈ ಸಂಬಂಧ ಸ್ಥಳೀಯ ಶಾಸಕ ಪ್ರಸಾದ್ ಅಬ್ಬಯ್ಯ ಸರ್ಕಾರದ ಗಮನಕ್ಕೆ ತಂದಿದ್ದರು. ಆದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನುತ್ತಿಲ. ಇನ್ನೂ ಸರ್ಕಾರದ ಕೈಯಲ್ಲಿ ಗುತ್ತಿಗೆದಾರರೋ ಅಥವಾ ಗುತ್ತಿಗೆದಾರ ಕೈಯಲ್ಲಿ ಸರ್ಕಾರವೋ ಎನ್ನುವಂತಹ ಅನುಮಾನಗಳು ವ್ಯಕ್ತವಾಗಿದೆ. ಕಳೆದ ಜನವರಿಯಲ್ಲಿಯೇ ಕೆಲಸ ಪ್ರಾರಂಭಿಸಲು ಗುತ್ತಿಗೆದಾರನಿಗೆ ಸಮಾಜ ಕಲ್ಯಾಣ ಇಲಾಖೆ ಖಡಕ್ ಆದೇಶ ಮಾಡಿದೆ. ಆದರೂ ಸಹಿತ ಗುತ್ತಿಗೆದಾರ ಇತ್ತ ತಿರುಗಿಯೂ ನೋಡಿಲ್ಲ, ಕೆಲಸವನ್ನು ಕೂಡ ಆರಂಭಿಸಿಲ್ಲ. ಇದೇ ಕಾರಣಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಅವರು ಸ್ಥಳಕ್ಕೆ ಭೇಟಿ ನೀಡಿ ಎರಡು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಿದ್ದಾರೆ. ಒಂದು ವೇಳೆ ಕಾಮಗಾರಿ ಆರಂಭಿಸದೇ ಇದ್ದರೆ ಗುತ್ತಿಗೆದಾರನ ಕಪ್ಪು ಪಟ್ಟಿಗೆ ಸೇರಿಸಿ ಹೊಸದಾಗಿ ಟೆಂಡರ್ ಕರೆಯುವುದಾಗಿ ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ಗುತ್ತಿಗೆದಾರನಿಂದ ಒಂಭತ್ತು ಕೋಟಿ ರೂಪಾಯಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಇನ್ನಾದರೂ ಸರ್ಕಾರ ಇಂತಹ ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸಿ ಕಾಮಗಾರಿ ಪೂರ್ಣಗೊಳಿಸಬೇಕಿದೆ ಎಂದು ಅಲ್ಲಿನ ಜನರ ಆಶಯ ಆಗಿದೆ. ಸರ್ಕಾರದ ಯೋಜನೆ ಸಮರ್ಪಕವಾಗಿ ಸಾರ್ವಜನಿಕರ ಕೈಸೇರಬೇಕು ವಿನಃ ಹೊಳೆಯಲ್ಲಿ ಹೋಮವಾಗಬಾರದು ಎಂಬುವುದು ನಮ್ಮ ಆಶಯ ಎನ್ನುವುದು ಅಲ್ಲಿನ ಸ್ಥಳೀಯರ ಅಭಿಪ್ರಾಯ ಆಗಿದೆ. ಹುಬ್ಬಳ್ಳಿಯಲ್ಲಿ ಸಮಾಜ ಕಲ್ಯಾನ ಇಲಾಖೆಯ ಅಡಿ ನಿರ್ಮಾಣ ಅಗುತ್ತಿರುವ ಕಟ್ಟಡಕ್ಕೆ ಈಗಾಗಲೇ ಹಣ ಮಂಜೂರಾಗಿದೆ. ಆದರೂ ಕೂಡ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.












Click it and Unblock the Notifications