Voter Data Theft: ಸಿಎಂ, ಅಶ್ವತ್ಥ್ ನಾರಾಯಣ್ ವಿರುದ್ಧ ದೂರು ದಾಖಲಾಗಬೇಕು: ಸಲೀಂ ಅಹ್ಮದ್
ಹುಬ್ಬಳ್ಳಿ, ನವೆಂಬರ್ 19: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ 150ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ವೆಯಲ್ಲಿ ಮುಂದಿದ್ದು, 130 ಕ್ಷೇತ್ರಗಳಲ್ಲೂ ಮುಂದಿದೆ. ರಾಜ್ಯದ 224 ಕ್ಷೇತ್ರಗಳಿಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಪ್ರವಾಸ ಮಾಡುತ್ತಿದ್ದಾರೆ. ಬಿಜೆಪಿ ನೈತಿಕತೆ ಕಳೆದುಕೊಂಡಿದ್ದು, ಜನರು ಸರ್ಕಾರದ ಕೆಲಸದಿಂದ ಬೇಸರಗೊಂಡಿದ್ದಾರೆ. ಬಿಜೆಪಿ ಪಾಪದ ಕೊಡ ತುಂಬಿದ್ದು, ಯಾವಾಗ ಚುನಾವಣೆ ಬರುತ್ತದೆ ಎಂದು ಜನರು ಕಾಯತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಸೋಲಿಸುವುದು ಖಚಿತ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ದೇಶದಲ್ಲಿಯೇ ರಾಜ್ಯ ಭ್ರಷ್ಟಾಚಾರದ ರಾಜಧಾನಿ ಆಗಿದೆ. ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ ಇದೀಗ ಜನ ಸಂಕಲ್ಪ ಯಾತ್ರೆಯ ನಾಟಕ ಮಾಡುತ್ತಿದೆ. ಅದರ ಬದಲು ಸರ್ಕಾರ ಕ್ಷಮೆ ಯಾತ್ರೆ ಮಾಡಬೇಕು.

ಸಾವಿರಾರು ಜನ ಬೆಂಗಳೂರು ಗುಂಡಿಗಳಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಜನ ಬಿಜೆಪಿ ಸರ್ಕಾರದ ಬಗ್ಗೆ ನೊಂದಿದ್ದಾರೆ. ಬಿಜೆಪಿಯವರಿಗೆ ಸೋಲುತ್ತೇವೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ಸಚಿವ ಅಶ್ವತ್ಥ್ ನಾರಾಯಣ್ ಅವರಿಗೆ ಸೇರಿದ ಚಿಲುಮೆ ಸಂಸ್ಥೆ ಪೊಲಿಂಗ್ ಆಫೀಸರ್ ಆಗಿ ನೇಮಕ ಮಾಡಿದ್ದಾರೆ. ಅವರೆಲ್ಲ ಬಿಜೆಪಿ ಕಾರ್ಯಕರ್ತರಾಗಿದ್ದು, ಮುಖ್ಯಮಂತ್ರಿಗಳು, ಅಶ್ವತ್ಥ್ ನಾರಾಯಣ್ ಹಾಗೂ ತುಷಾರ್ ಗಿರಿನಾಥ್ ವಿರುದ್ಧ ದೂರು ದಾಖಲಾಗಬೇಕು. ಇದು ಕೇವಲ ಬಿಬಿಎಂಪಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಈ ಕಂಪನಿಯಿಂದ ಕೆಲಸ ಶುರುವಾಗಿದೆ. ಚುನಾವಣೆಯಲ್ಲಿ ಬಿಜೆಪಿ ಮತ ಕದಿಯುವ ಕೆಲಸ ಮಾಡುತ್ತಿದೆ. ಇದರ ವಿರುದ್ದ ಬೆಂಗಳೂರಿನಲ್ಲಿ ನಮ್ಮ ನಾಯಕರು ಪ್ರತಿಭಟನೆ ಮಾಡಲಿದ್ದಾರೆ ಎಂದು ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಪರಿಷ್ಕರಿಸಲು ಚುನಾವಣಾ ಆಯೋಗ ಮುಂದಾಗಿತ್ತು. ಈ ಬಗ್ಗೆ ವಿಶೇಷ ಮತದಾರರ ಜಾಗೃತಿ ಅಭಿಯಾನ ನಡೆಸಲು ಚಿಲುಮೆ ಎಂಬ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ, ಈ ಚಿಲುಮೆ ಸಂಸ್ಥೆ ಆದೇಶವನ್ನು ದುರುಪಯೋಗಪಡಿಸಿಕೊಂಡಿದೆ ಎನ್ನುವ ಆರೋಪ ಕೇಳಿಬಂದಿದೆ. ಚಿಲುಮೆ ಸಂಸ್ಥೆ ತನ್ನ ಫೀಲ್ಡ್ ಏಜೆಂಟರನ್ನೇ ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಮತದಾರರ ಹಲವು ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿದೆ ಎನ್ನಲಾಗಿದೆ. ಇದೀಗ ಚಿಲುಮೆ ಸಂಸ್ಥೆ ಸಚಿವ ಅಶ್ವತ್ಥ್ ನಾರಾಯಣ್ ಅವರಿಗೆ ಸೇರಿದೆ ಎಂದು ಕಾಂಗ್ರೆಸ್ ಮುಖಂಡ ಸಲೀಂ ಅಹ್ಮದ್ ಆರೋಪಿಸಿದ್ದಾರೆ.












Click it and Unblock the Notifications