ಮುಂದಿನ ದಿನಗಳಲ್ಲಿ ಪಕ್ಷಾಂತರ ಮತ್ತಷ್ಟು ಹೆಚ್ಚುತ್ತದೆ: ಬಿಜೆಪಿಗೆ ಎಚ್ಚರಿಕೆಯ ಸಂದೇಶ ನೀಡಿದ ಶೆಟ್ಟರ್
ಹುಬ್ಬಳ್ಳಿ, ಸೆಪ್ಟೆಂಬರ್ 08: ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೆಡಿಎಸ್ - ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ವ್ಯಂಗ್ಯವಾಡಿದರು.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಜೆಡಿಎಸ್ ಮತ್ತು ಬಿಜೆಪಿಗೆ ಬಿಟ್ಟ ವಿಚಾರ. ಹಿಂದೆಯೂ ಮೈತ್ರಿ ಮಾಡಿಕೊಳ್ಳುತ್ತೇವೆ ಅಂದರು. ನಂತರ ಅರ್ಧಕ್ಕೆ ಬ್ರೇಕ್ ಆಯ್ತು. ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ಪರಸ್ಪರ ಫೈಟ್ ಮಾಡಿದ್ದರು. ಈಗ ಮತ್ತೆ ಮೈತ್ರಿ ವಿಚಾರ ಮಾತಾಡುತ್ತಿದ್ದಾರೆ ಎಂದರು.

ಅನುಕೂಲವಿದ್ದಾಗ ಮೈತ್ರಿ ಮಾಡಿಕೊಳ್ಳುವುದು, ಅನಾನುಕೂಲವಾದಾಗ ಮೈತ್ರಿಯಿಂದ ಹಿಂದೆ ಸರಿಯುವುದು. ಈ ರೀತಿ ಮಾಡಿದಾಗ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಜೊತೆಗೆ ಆಯಾ ಪಕ್ಷಗಳ ಕ್ರೆಡಿಬಿಲಿಟಿ ಸಹ ಹೋಗುತ್ತದೆ ಎಂದು ಹೇಳಿದರು.
ಮೈತ್ರಿ ವಿಚಾರದಲ್ಲಿ ಭಾರತೀಯ ಜನತಾ ಪಕ್ಷದ ಯಾವಾಗಲೂ ದ್ವಂದ್ವ ನಿಲುವು ಅನುಸರಿಸುತ್ತದೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಸಾವಿರಾರು ಕೋಟಿ ಹಗರಣ ಮಾಡಿದ್ದಾರೆ ಅಂತ ಆರೋಪ ಮಾಡಿದರು. ಒಂದೇ ತಿಂಗಳಲ್ಲಿ ಅವರನ್ನು ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸೇರಿಸಿಕೊಂಡರು. ರಾಜಕೀಯ ಪಕ್ಷಕ್ಕೆ ಗಟ್ಟಿ ನಿರ್ಧಾರಗಳು ಇರಬೇಕು. ಇವತ್ತು ಟೀಕೆ ಮಾಡುವುದು. ನಾಳೆ ಮೈತ್ರಿ ಮಾಡಿಕೊಳ್ಳುವುದರಲ್ಲಿ ಏನರ್ಥವಿದೆ ಎಂದು ಪ್ರಶ್ನಿಸಿದರು.

ಮೈತ್ರಿ ಮಾಡಿಕೊಳ್ಳುವುದು ಅವರಿಗೆ ಬಿಟ್ಟದ್ದು. ಆದರೆ ಬಿಜೆಪಿಯವರು ಬಂದ ಪಕ್ಷಗಳನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಉಡುಪಿಯ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಹೀಗಾಗಿ ಬಿಜೆಪಿಯವರು ಮೊದಲು ತಮ್ಮಲ್ಲಿ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಮೇಲೆ ಏರುತ್ತಿದೆ. ಹಲವಾರು ಬಿಜೆಪಿ ನಾಯಕರು ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ. ಕರ್ನಾಟಕ ಬಿಜೆಪಿಗೆ ಹೆದರಿಕೆ ಶುರುವಾಗಿದೆ. ಇಡೀ ದೇಶದಲ್ಲಿಯೂ ಬಿಜೆಪಿಗೆ ಇದೇ ಸ್ಥಿತಿ ಇದೆ. ತೆಲಂಗಾಣದಲ್ಲಿ ಕಾಂಗ್ರೆಸ್ ನಂಬರ್ ಟು ಸ್ಥಾನದಲ್ಲಿದೆ. ಚುನಾವಣೆ ಬರುವ ಬೆಳಗ್ಗೆ ನಂಬರ್ ಒನ್ ಸ್ಥಾನಕ್ಕೆ ಬಂದರೂ ಅಚ್ಚರಿ ಇಲ್ಲ ಎಂದರು.
ಯಾವಾಗಲೂ ಅಸಹಾಯಕರು ಇಬ್ಬರು ಒಂದಾಗುತ್ತಾರೆ. ರಾಜ್ಯದಲ್ಲಿ ಜೆಡಿಎಸ್ ವೀಕ್ ಆಗಿದೆ ಜೊತೆಗೆ ಬಿಜೆಪಿಯೂ ವೀಕ್ ಆಗಿದೆ. ಹಾಗಾಗಿ ಇಬ್ಬರಿಗೂ ಮೈತ್ರಿ ಅನಿವಾರ್ಯ. ಲೋಕಸಭಾ ಚುನಾವಣೆ ವೇಳೆಗೆ ದೊಡ್ಡಮಟ್ಟದಲ್ಲಿ ರಾಜಕೀಯ ಧೃವಿಕರಣ ಆಗುತ್ತದೆ. ಬಹಳ ಜನ ಬಿಜೆಪಿ ವಿರುದ್ಧ ಬೇಸರಗೊಂಡಿದ್ದಾರೆ. ಬರುವ ದಿನಗಳಲ್ಲಿ ಪಕ್ಷಾಂತರ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.












Click it and Unblock the Notifications