Congress guarantees: ದಾಖಲೆ ತಿದ್ದುಪಡಿಗಾಗಿ ಹುಬ್ಬಳ್ಳಿಯಲ್ಲಿ ಆಧಾರ್ ಸೇವಾ ಕೇಂದ್ರದ ಮುಂದೆ ಜನರ ನೂಕುನುಗ್ಗಲು
ಹುಬ್ಬಳ್ಳಿ, ಜೂನ್, 15: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇ ತಡ ಜನರು ತಮ್ಮ ದಾಖಲಾತಿಯನ್ನು ಸರಿಪಡಿಸಲು ಓಡಾಡುತ್ತಿದ್ದಾರೆ. ಇಷ್ಟು ದಿನಗಳ ಕಾಲ ಸಣ್ಣ ಪುಟ್ಟ ತಿದ್ದುಪಡಿ ಇದ್ದರೂ ನಿರ್ಲಕ್ಷ್ಯ ಮಾಡಿದ್ದ ಜನರು ಈಗ ಆಧಾರ್ ಸೇವಾ ಕೇಂದ್ರದ ಮುಂದೆ ಜಮಾವಣೆಗೊಂಡಿದ್ದಾರೆ. ಹಾಗೆಯೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಕೂಡ ಆಧಾರ್ ಸೇವಾ ಕೇಂದ್ರ ಕೇದ್ರದ ಮುಂದೇ ಜನಸಾಗರವೇ ಸೇರಿದೆ.
ಹುಬ್ಬಳ್ಳಿಯಲ್ಲಿ ಆಧಾರ್ ಸೇವಾ ಕೇಂದ್ರ ಅಕ್ಷರಶಃ ತುಂಬಿ ತುಳುಕುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಅಲ್ಲೊಬ್ಬರು ಇಲ್ಲೊಬ್ಬರು ಕಾಣಿಸಿಕೊಳ್ಳುತಿದ್ದ ಕೇಂದ್ರದಲ್ಲಿ ಇದೀಗ ಸಾವಿರಾರು ಜನರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮಹಿಳೆಯರು ದಿಢೀರ್ ದಾಂಗುಡಿ ಇಟ್ಟಿದ್ದರಿಂದ ಆಧಾರ್ ಸೇವಾ ಕೇಂದ್ರದ ಎದುರು ನೂಕು ನುಗ್ಗಲು ಉಂಟಾಗಿದೆ.

ಹೌದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಉಚಿತ ಪ್ರಯಾಣದೊಂದಿಗೆ ಶುರು ಅಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಹಲವರು ಯೋಜನೆಗಳ ಲಾಭ ಪಡೆಯಲು ಕೇಂದ್ರದತ್ತ ಧಾವಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಡಿ ತಿಂಗಳಿಗೆ 2 ಸಾವಿರ ರೂಪಾಯಿ ಪಡೆಯಲು ಆಧಾರ್ ಕಾರ್ಡ್ ನಿಗಧಿಪಡಿಸಲಾಗಿದೆ. ಆದ್ದರಿಂದ ಬಹುತೇಕ ಜನರು ಆಧಾರ್ ತಿದ್ದುಪಡಿಗೆ ಬರುತ್ತಿದ್ದಾರೆ. ಅಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿರುವುದು ನಿಜಕ್ಕೂ ಆಧಾರ್ ಸೇವಾ ಕೇಂದ್ರದ ಸಿಬ್ಬಂದಿಗಳನ್ನು ಹೈರಾಣಾಗಿಸಿದೆ.
ಇನ್ನೂ ಜನರು ಮೊಬೈಲ್ ನಂಬರ್ ಜೋಡಣೆ, ಮನೆ ವಿಳಾಸ ಬದಲಾವಣೆ ಮಾಡಿಸಿಕೊಳ್ಳುವವರೇ ಹೆಚ್ಚಾಗಿದ್ದು, 'ಗೃಹಲಕ್ಷ್ಮೀ' ಯೋಜನೆಗೆ ಆಧಾರ್ ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ಆಧಾರ್ ಸೇವಾ ಕೇಂದ್ರದ ಮುಂದೆ ಜನರ ನೂಕುನುಗ್ಗಲು ಹೆಚ್ಚಾಗಿದೆ. ಅಲ್ಲದೇ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿರುವುದು ನಿಜಕ್ಕೂ ಪೊಲೀಸ್ ಸಿಬ್ಬಂದಿಯನ್ನು ಕೂಡ ಹೈರಾಣಾಗಿಸಿದೆ. ಆದರೇ ನಾಲ್ಕೈದು ದಿನಗಳ ಕಾಲ ಅಲೆದರೂ ಕೂಡ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಆಗುತ್ತಿಲ್ಲ ಎನ್ನುತ್ತಿದ್ದಾರೆ ಮಹಿಳೆಯರು.
ಒಟ್ಟಿನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಲು ಜನರು ಕೆಲಸ, ಕಾರ್ಯವನ್ನು ಬಿಟ್ಟು ಓಡಾಡುತ್ತಿದ್ದಾರೆ. ಸರ್ಕಾರದ ಯೋಜನೆಯಿಂದ ಜನರು ತಮ್ಮ ದಾಖಲೆಯ ಬಗ್ಗೆ ಜಾಗೃತಿ ವಹಿಸಿರುವುದು ನಿಜಕ್ಕೂ ವಿಶೇಷವಾಗಿದೆ.












Click it and Unblock the Notifications