DCM ಹುದ್ದೆ ಸೃಷ್ಟಿ ಹಿಂದಿರುವುದು CM ಸಿದ್ದರಾಮಯ್ಯ: ಪ್ರಹ್ಲಾದ್ ಜೋಶಿ
ಬೆಂಗಳೂರು, ಜೂನ್ 30: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನದ ವಿಚಾರವನ್ನು ಕಾಂಗ್ರೆಸ್ ಪಕ್ಷದವರೇ ಸೃಷ್ಟಿಸಿದ್ದಾರೆ. ಡಿಸಿಎಂ ಸ್ಥಾನ ಸೃಷ್ಠಿ ವಿಚಾರದಲ್ಲಿ ಸಿಎಂ ಸಿದ್ಧರಾಮಯ್ಯ ಅವರದ್ದೇ ಕೈವಾಡವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಧಾರವಾಡದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗಳ ವಿಚಾರದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿದ್ದಾರೆ. ಆದರೆ ಈ ಬಗ್ಗೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿಲ್ಲ. ಇದು ಎರಡು ಬಣಗಳ ನಡುವಿನ ಗುದ್ದಾಟವಾಗಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಸಿದ್ದರಾಮಯ್ಯ ಅವರು ಉತ್ತರಿಸಿಲ್ಲ. ಡಿಸಿಎಂ ಹೇಳಿಕೆ ವಿಚಾರವಾಗಿ ಒಂದು ಕಡೆ ಡಿ.ಕೆ.ಶಿವಕುಮಾರ್ ನೋಟಿಸ್ ನೀಡುವುದಾಗಿ ಹೇಳುವ ಮೂಲಕ ಇದು ಸಿದ್ದರಾಮಯ್ಯ ಅವರ ಬಣಕ್ಕೆ ಸವಾಲು ಹಾಕಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧ
ಕರ್ನಾಟಕದ ಅಭಿವೃದ್ಧಿ ಸೇರಿದಂತೆ ಎಲ್ಲ ರಾಜ್ಯಗಳ ಹಿತಾಸಕ್ತಿ ಕಾಪಾಡುವುದಕ್ಕೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ. ಕರ್ನಾಟಕದಿಂದ ಯಾವುದೇ ಅಧಿಕಾರಿಗಳು ಬಂದರೂ ಅವರಿಗೆ ನಾವು ಸ್ಪಂದನೆ ನೀಡುತ್ತೇವೆ. ಆದರೆ ರಾಜ್ಯ ಸರ್ಕಾರ ತಮ್ಮ ವೈಫಲ್ಯ ಮುಚ್ಚಿಹಾಕುವ ಉದ್ದೇಶದಿಂದ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಹಲವಾರು ನ್ಯೂನತೆಗಳಿವೆ. ತಮ್ಮ ನ್ಯೂನತೆಗಳನ್ನು ಕೇಂದ್ರ ಸರಕಾರದ ಮೇಲೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ತಮ್ಮ ತಪ್ಪುಗಳಿಂದ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಧಾರವಾಡ ಜಿಲ್ಲೆಯಲ್ಲೇ ಕೆಲವೊಂದಿಷ್ಟು ಯೋಜನೆಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಕರ್ನಾಟಕ ರಾಜ್ಯದ ನೆಲ, ಜಲ, ಸಂಸ್ಕೃತಿ ಹಾಗೂ ಭಾಷೆಯ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಸುಳ್ಳು ಹೇಳಿ ರಾಜಕೀಯ ಮಾಡುವುದೇ ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೆ ಅದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ರಾಜ್ಯ ಸರ್ಕಾರ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಲಿ ಎಂದರು.
ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಸಂಸದರ ಹೇಳಿಕೆ
ರಾಜ್ಯ ಸರ್ಕಾರದಲ್ಲಿ ಸಿಎಂ, ಡಿಸಿಎಂ ಸೃಷ್ಠಿಯ ಬಗ್ಗೆ ಚರ್ಚೆಗಳು ಆಗುತ್ತಿವೆ. ಸಿದ್ದರಾಮಯ್ಯ ಅವರು ಸಿಎಂ ಆದಾಗಿನಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇವೆ. ಕಾಂಗ್ರೆಸ್ ನ ಶಾಸಕರಲ್ಲೇ ಅವರ ಸರ್ಕಾರದ ಬಗ್ಗೆ ಅಸಮಾಧಾನವಿದೆ.
ಸರ್ಕಾರದ ನಡೆ ವಿರುದ್ಧ ಅವರ ಶಾಸಕರೇ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಹೆಚ್ಚಾಗುತ್ತಿದೆ. ಆ ಒಳ ಬೇಗುದಿಯಿಂದ ಯಾವುದೇ ಸಮಯದಲ್ಲಿ ಏನುಬೇಕಾದರೂ ಆಗಬಹುದು. ರಾಜ್ಯ ಸರ್ಕಾರ ಪತನವೂ ಆಗಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕರಿಂದಲೇ ರಾಜ್ಯ ಸರ್ಕಾರದ ಪತನವಾಗುತ್ತದೆ. ಸರ್ಕಾರದ ಒಳ ಬೇಗುದಿಯಿಂದ ಯಾವ ಸಮಯದಲ್ಲಿ ಏನಾಗುತ್ತೊ ಗೊತ್ತಿಲ್ಲ. ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಹಾಕಲು ಬಿಜೆಪಿ ಮೇಲೆ ಬೆರಳು ತೋರಿಸುತ್ತಿದೆ, ಸಾಕಷ್ಟು ಹಗರಣಗಳಾದರೂ ಅವುಗಳನ್ನು ಮುಚ್ಚಿ ಹಾಕಲಾಗುತ್ತಿದೆ.












Click it and Unblock the Notifications