ಭೈರಿದೇವರಕೊಪ್ಪ ದರ್ಗಾ ತೆರವು ಮಾಡಿದ ಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ
ಹುಬ್ಬಳ್ಳಿ, ಡಿಸೆಂಬರ್ 23 : ವಾಣಿಜ್ಯನಗರಿ ಹುಬ್ಬಳ್ಳಿಯ ಭೈರಿದೇವರಕೊಪ್ಪದ ದರ್ಗಾ ತೆರವು ಮಾಡಿದ ಸ್ಥಳಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ.
ಹುಬ್ಬಳ್ಳಿಯ ಭೈರಿದೇವರಕೊಪ್ಪದ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಈಗಾಗಲೇ ಗೋರಿಗಳನ್ನು ಹೆಚ್ಚಿನ ತಂತ್ರಜ್ಞಾನದ ಮೂಲಕ ಸ್ಥಳಾಂತರ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಂಜುಮನ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಮುಸ್ಲಿಂ ಮುಖಂಡರ ಜೊತೆಗೆ ಸಮಾಲೋಚನೆ ನಡೆಸಿದರು.
ದರ್ಗಾ ತೆರವು ಪರಿಶೀಲನೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ನಾಗರಿಕತೆ ಬೆಳೆಯುತ್ತಿದೆ. ಅವಶ್ಯಕತೆಯು ಹೆಚ್ಚಿದೆ. ಅಲ್ಲದೇ ರಸ್ತೆಗಳ ವಿಸ್ತೀರ್ಣವು ಹೆಚ್ಚಾಗುತ್ತಿರುವ ಕಾರಣ ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಇದೇ ರಸ್ತೆಯಲ್ಲಿಯೇ 13 ಧಾರ್ಮಿಕ ಸ್ಥಳಗಳನ್ನು ತೆರವು ಮಾಡಲಾಗಿದೆ. ದೇಗುಲಗಳನ್ನು ಹಾಗೂ ಮಸೀದಿ ಮತ್ತು ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದರು.

ಭೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಾಚರಣೆ ವೀಕ್ಷಣೆಗೆ ಬಂದಿದ್ದೆ. ಇಲ್ಲಿನ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಶಾಂತಿ ಹಾಗೂ ಸೌಹಾರ್ದತೆಯಿಂದ ಇಂತಹ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಅವರಿಗೆ ತುಂಬು ಹೃದಯದಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈಗಾಗಲೇ ದರ್ಗಾವನ್ನು ತೆರವು ಮಾಡಿದ್ದಾರೆ. ಗೋರಿಗಳನ್ನು ಕೂಡ ಶಿಫ್ಟ್ ಮಾಡಿದ್ದಾರೆ. ಹೊಸದಾದ ಮಸೀದಿ ನಿರ್ಮಾಣದ ಬಗ್ಗೆ ಕೂಡ ನನ್ನ ಜೊತೆಗೆ ಮಾತನಾಡಿದ್ದಾರೆ. ಅವರೆಲ್ಲರೂ ಕೂಡಿಕೊಂಡು ಸ್ಥಳದ ಬಗ್ಗೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಲಿ. ಈ ಬಗ್ಗೆ ಸಹಕಾರ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಇನ್ನು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಹೈಕೋರ್ಟ್ ಕೂಡ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಜನರ ಅವಶ್ಯಕತೆಗೆ ಅನುಗುಣವಾಗಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಧಾರ್ಮಿಕ ಸ್ಥಳಗಳನ್ನು ತೆರವು ಮಾಡುವುದು ನೋವಿನ ಸಂಗತಿ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.












Click it and Unblock the Notifications