ಹುಬ್ಬಳ್ಳಿಯಲ್ಲಿ ನಮ್ಮ ಕ್ಲಿನಿಕ್‌ಗೆ ಚಾಲನೆ: ಆರೋಗ್ಯ, ಶಿಕ್ಷಣ ನಮ್ಮ ಆದ್ಯತೆ ಎಂದ ಸಿಎಂ
ಹುಬ್ಬಳ್ಳಿ, ಡಿಸೆಂಬರ್ 14: ಬಡವರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ತಲುಪಿಸಲು ರಾಜ್ಯ ಸರಕಾರ ಆದ್ಯತೆ ನೀಡಿದ್ದು, ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 10 ಸಾವಿರ ಕೋಟಿ ಅನುದಾನ ಮೀಸಲಿಟ್ಟು ವಿನಿಯೋಗಿಸಲಾಗುತ್ತದೆ. ಜನವರಿಯೊಳಗೆ 438 ನಮ್ಮ ಕ್ಲಿನಿಕ್ ಆರಂಭಿಸಲಾಗುವುದು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರಕಾರ ಹೆಚ್ಚು ಆದ್ಯತೆ, ಒತ್ತು ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ ತಾಲೂಕಿನ ಬೈರಿದೇವರಕೋಪ್ಪದ ರೇಣುಕಾ ನಗರದಲ್ಲಿ ನಮ್ಮ ಕ್ಲಿನಿಕ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಬಡವರಿಗೆ, ಜನಸಾಮಾನ್ಯರಿಗೆ ಅತ್ಯಂತ ಅವಶ್ಯಕತೆ ಇರುವ ಆರೋಗ್ಯ ಕಾರ್ಯಕ್ರಮ ಇದು. ಬಡವರ ಆರೋಗ್ಯ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ ಎಂದರು.
ಬಡವರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಖಾಸಗಿ ಆಸ್ಪತ್ರೆಗಳು ಹೆಚ್ಚು ದರ ವಿಧಿಸುವದರಿಂದ ತೊಂದರೆ ಆಗುತ್ತದೆ. ನಮ್ಮ ಸರಕಾರ ಸ್ಪಂದನಾಶೀಲವಾಗಿದೆ. ರಾಜ್ಯದ ತುಂಬ ನಗರದ ಜನಸಾಮಾನ್ಯರಿಗಾಗಿ, ಬಡವರಿಗಾಗಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರ್ಕಾರದ ಆದ್ಯತೆ
ಬಡತನ ಮತ್ತು ಅನಾರೋಗ್ಯ ಎರಡು ಅಭಿವೃದ್ಧಿಯ ಶತ್ರುಗಳು. ಬಡತನದಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚುತ್ತದೆ. ಯಾವುದೇ ತಾರತಮ್ಯವಿಲ್ಲದೇ ಎಲ್ಲರಿಗೂ ಉತ್ತಮ ಚಿಕಿತ್ಸೆ, ಉಚಿತ ಔಷಧೋಪಚಾರ ದೊರೆಯುವಂತೆ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ 10 ಸಾವಿರ ಕೋಟಿ ಆರೋಗ್ಯ ಕ್ಷೇತ್ರಕ್ಕೆ ಅನುದಾನ ಮೀಸಲಿಟ್ಟು , ಆರೋಗ್ಯ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಲಾಗಿದೆ. ಮತ್ತು ಪ್ರಸಕ್ತ ಸಾಲಿನಲ್ಲಿ 8 ಸಾವಿರ ಶಾಲಾ ಕೊಠಡಿ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹೊಸದಾಗಿ 12 ಕೀಮೋಥೆರಪಿ ಕೇಂದ್ರ
ಹಿಂದುಳಿದ ತಾಲೂಕುಗಳನ್ನು ಗುರುತಿಸಿ, ಆರೋಗ್ಯ ಸೇವೆಗಳ ಸುಧಾರಣೆಗೆ ಕ್ರಮವಹಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 45 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಸಕ್ಕರೆ ಖಾಯಿಲೆ ಇರುವವರಿಗೆ ಡಯಾಲಿಸಿಸ್ ಮಾಡುವುದನ್ನು ಪ್ರಸ್ತುತ 30 ಸಾವಿರದಷ್ಟು ಇರುವದನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಮತ್ತು ಕ್ಯಾನ್ಸರ್ ಚಿಕಿತ್ಸೆಗೆ ಹೊಸದಾಗಿ 12 ಕೀಮೋಥೆರಪಿ ಕೇಂದ್ರಗಳನ್ನು ರಾಜ್ಯದಲ್ಲಿ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಜನವರಿಯಿಂದ 60 ವರ್ಷದಾಟಿದ ಪ್ರತಿಯೊಬ್ಬರಿಗೂ ಉಚಿತವಾಗಿ ಕಣ್ಣು ತಪಾಸಣೆ, ಉಚಿತ ಕನ್ನಡಕ ವಿತರಣೆಗೆ ಕ್ರಮವಹಿಸಲಾಗುವುದು. 500 ಕೋಟಿ ವೆಚ್ಚದಲ್ಲಿ ಹುಟ್ಟು ಕಿವಡರಿಗೆ ಶ್ರವಣ ಸಲಕರಣೆ ವಿತರಿಸಲಾಗುವುದು. ಸುಮಾರು 350 (ಬೆಡ್) ಹಾಸಿಗೆ ಸೌಲಭ್ಯ ಇರುವ ರೂ.250 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಯದೇವ ಹೃದ್ರೋಗ ಆಸ್ಪತ್ರೆಯ ಶಾಖೆಗೆ ಕಿಮ್ಸ್ ಆವರಣದಲ್ಲಿ ಬರುವ ಜನವರಿಯಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬಡವರಿಗೆ ಸಂಶೋಧನೆಗಳ ಲಾಭ ಸಿಗುವಂತೆ ಆಗಬೇಕು
ನವನಗರ ಕ್ಯಾನ್ಸರ್ ಆಸ್ಪತ್ರೆಗೆ ಹೊಸ ಉಪಕರಣ ಖರೀದಿಗೆ 10 ರೂಪಾಯಿ ಕೋಟಿ ಅನುದಾನ ನೀಡಲಾಗಿದೆ. ನವನಗರ ಕ್ಯಾನ್ಸರ್ ಆಸ್ಪತ್ರೆ ಬಡವರಿಗೆ ಉತ್ತಮ ಸೇವೆ ನೀಡುತ್ತಿದೆ. ಇನ್ನು ಸಮುದಾಯ ಆಸ್ಪತ್ರೆಗಳ ಮೂಲ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಡವರಿಗೆ, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಹೊಸ ಸಂಶೋಧನೆಗಳ ಲಾಭ ಸಿಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಆರೋಗ್ಯ ಕ್ಷೇತ್ರದ ನೂತನ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ಹೆಚ್ಚು ಕಾಳಜಿ ವಹಿಸಿದೆ. ಪ್ರತಿ ಜಿಲ್ಲೆಯ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಆಗಬೇಕು. ಜಿಲ್ಲೆಯ ಮಕ್ಕಳ ಚಿಕಿತ್ಸೆ, ಆರೋಗ್ಯ ದಾಖಲೆ ಆಗಬೇಕು. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚುವಂತೆ ಮಾಡಬೇಕು ಎಂದರು.

ಸರ್ಕಾರ ಜನಸಾಮಾನ್ಯರ ಆರೋಗ್ಯ ಸುಧಾರಣೆಗೆ ಹೆಚ್ಚು ಒತ್ತು ನೀಡಿದೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, ಗ್ರಾಮೀಣ ಭಾಗದ ಸೊಗಡು ಇರುವ ಬೈರಿದೇವರಕೊಪ್ಪದಲ್ಲಿ ನಮ್ಮ ಕ್ಲಿನಿಕ್ ಚಾಲನೆ ನೀಡಿರುವುದು ನಮಗೆ ಹೆಮ್ಮೆ ಮೂಡಿಸಿದೆ. ಬಜೆಟ್‌ನಲ್ಲಿ ಘೋಷಿಸಿರುವಂತೆ ಮಹತ್ವದ ಆರೋಗ್ಯ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನಸಾಮಾನ್ಯರ ಆರೋಗ್ಯ ಸುಧಾರಣೆಗೆ ಹೆಚ್ಚು ಒತ್ತು ನೀಡಿವೆ. ಕೋವಿಡ್ ಮಹಾಮಾರಿಯನ್ನು ವಿಶ್ವಕ್ಕೆ ಮಾದರಿ ಆಗುವಂತೆ ನಿರ್ವಹಿಸಿ, ಯಶಸ್ವಿಯಾಗಿ ಕೋವಿಡ್ ರೋಗ ಹಿಮ್ಮೆಟ್ಟಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಅದ್ಭುತವಾದ ಸೇವೆ ನೀಡಿ, ಲಕ್ಷಾಂತರ ಜನರ ಜೀವ, ಕೋಟ್ಯಾಂತರ ಜನರ ಆರೋಗ್ಯ ಉಳಿಸಿದೆ ಎಂದರು.












Click it and Unblock the Notifications