Hubballi Car Accident: ಹುಬ್ಬಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡೈವೈಡರ್‌ಗೆ ಡಿಕ್ಕಿ; ನಾಲ್ವರು ಮಹಿಳೆಯರ ಸಾವು
Hubballi Car Accident: ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದೀಗ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಇಂದು (ಏಪ್ರಿಲ್ 6) ಹುಬ್ಬಳ್ಳಿ ಹೊರವಲಯದ ನೂಲ್ವಿ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಸುಜಾತಾ ಹಿರೇಮಠ (60), ಗಾಯತ್ರಿ ಮಾಂತನಮಠ(67), ಶಕುಂತಲಾ ಹಿರೇಮಠ(72) ಸಂಪತ್ ಕುಮಾರಿ (63) ಎಂದು ಗುರುತಿಸಲಾಗಿದೆ. ಮೃತರು ಹುಬ್ಬಳ್ಳಿಯ ಲಿಂಗರಾಜ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಇನ್ನು ಅಪಘಾತದಲ್ಲಿ ಗಾಯಗೊಂಡಿರುವ ಕಾರು ಚಾಲಕ ವಿರೇಶ್ ಹಿರೇಮಠ (65) ಎಂಬುವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.

ಹಾವೇರಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಸಂಪತ್ ಕುಮಾರಿ ಮತ್ತು ವಿರೇಶ್ ಹಿರೇಮಠ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸಂಪತ್ ಕುಮಾರಿ ಅವರು ಮೃತಪಟ್ಟಿದ್ದು, ಕಾರು ಚಾಲಕ ವಿರೇಶ್ ಹಿರೇಮಠ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. ಈ ಅಪಘಾತ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಖಾಸಗಿ ಬಸ್‌ಗಳ ನಡುವೆ ಅಪಘಾತ: ಎರಡು ಖಾಸಗಿ ಬಸ್‌ಗಳ ನಡುವೆ ಅಪಘಾತ ಸಂಭವಿಸಿದ್ದು, ಬಸ್‌ನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಕೋಲಾರ ಜಿಲ್ಲೆ ಶ್ರೀನಿವಾಸಪುರ ಗುಂಟಪಲ್ಲಿ ಕ್ರಾಸ್ ಬಳಿ ಮಾರ್ಚ್ 11ರ ತಡರಾತ್ರಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಆಂದ್ರಪ್ರದೇಶ ಮೂಲದ ಮದನಪಲ್ಲಿಯ ಗಂಗಾಧರ್ ಎಂಬ ಪ್ರಯಾಣಿಕ ಸಾವನ್ನಪ್ಪಿದ್ದಾರೆ. ಅತೀ ವೇಗವಾಗಿದ್ದ ಖಾಸಗಿ ಬಸ್ ಓವರ್ ಟೆಕ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿತ್ತು.
ಘಟನೆಯಲ್ಲಿ ಗಾಯಗೊಂಡವರನ್ನು ಆಂದ್ರಪ್ರದೇಶದ ಮದನಪಲ್ಲಿ ಹಾಗೂ ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಇನ್ನು ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದರು.












Click it and Unblock the Notifications