ಸಂವಿಧಾನ ಬದಲಿಸಲು ಬಿಜೆಪಿ 400 ಸೀಟು ಕೇಳುತ್ತಿದೆ: HM ರೇವಣ್ಣ
ಹುಬ್ಬಳ್ಳಿ, ಏಪ್ರಿಲ್ 29: ಲೋಕಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಈ ಮಧ್ಯೆ ಸ್ಥಾನ ಗೆಲ್ಲುವ ಕುರಿತು ವಿಶ್ವಾಸದ ಹೇಳಿಕೆಗಳು ಕೇಳಿ ಬರುತ್ತಿವೆ. ಇದೀಗ ಅಧಿಕ ಸೀಟು ಗೆಲ್ಲುವುದಾಗಿ ಹೇಳಿದ್ದ ಬಿಜೆಪಿಗೆ ಪಂಚ ಗ್ಯಾರಂಟಿಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ತಿರುಗೇಟು ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು 400 ಸೀಟುಗಳನ್ನು ಕೇಳುತ್ತಿರುವುದು ದೇಶದ ಉದ್ಧಾರಕ್ಕಾಗಿ ಅಲ್ಲ. ದೇಶದ ಸಂವಿಧಾನವನ್ನು ಬದಲಿಸಲು ಅತ್ಯಧಿಕ ಸೀಟುಗಳನ್ನು ಕೇಳುತ್ತಿದ್ದಾರೆ. ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನ ಬೇಕಿಲ್ಲ ಎಂದು ದೂರಿದರು.

ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೌನ ಏಕೆ?
ಬಿಜೆಪಿಯವರಿಗೆ ಆಚಾರ, ವಿಚಾರ ಏನು ಇಲ್ಲ ಬರೀ ಪ್ರಚಾರ ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ವಿರುದ್ಧ ಮುಸ್ಲಿಂ ತುಷ್ಟಿಕರಣದಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಮಾಂಗಲ್ಯ ಕಿತ್ತುಕೊಳ್ಳುವ ಬಗ್ಗೆ ಮಾತನಾಡುತ್ತಾರೆ. ಬಾಯಿ ತೆಗೆದರೆ ಬರಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ದೇಶದಲ್ಲಿ ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುವುದು ಬಿಜೆಪಿಯ ಮೊದಲ ಗುರಿ ಎಂದು ಅವರು ಜರಿದರು. ಸಂವಿಧಾನ ಬದಲು ಮಾಡುವುದು ಬಿಜೆಪಿಯವರ ಆದ್ಯತೆ ಆಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಗುಡುಗು
ಹಾಸನದ ಸಂಸದರು ಅದೆಷ್ಟೋ ಮಹಿಳೆಯರ ಮಾಂಗಲ್ಯ ಕಿತ್ತುಕೊಂಡಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಅವರು ಗುಡುಗಿದರು. ಪ್ರಕರಣ ಕುರಿತು ಪ್ರಧಾನಮಂತ್ರಿಗಳು, ಬಿಜೆಪಿ ನಾಯಕರು ಮಾತನಾಡುವುದಿಲ್ಲ.

ಉತ್ತರ ಪ್ರದೇಶ, ಗುಜರಾತ್ ಅಂತ ರಾಜ್ಯಗಳಲ್ಲಿ ಮಹಿಳೆಯರ ನಾಪತ್ತೆ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಮೋದಿಯವರು ಯಾಕೆ ಮಾತನಾಡುತ್ತಿಲ್ಲ. ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಬ್ರಿಜ್ ಭೂಷಣ ಮಹಿಳಾ ಕುಸ್ತಿಪಟುಗಳ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಅವರು ವ್ಯಂಗ್ಯವಾಡಿದ್ದರು. ಇದೀಗ ನಮ್ಮ ಯೋಜನೆಗಳನ್ನು ಹೈಜಾಕ್ ಮಾಡಿ ಘೋಷಣೆ ಮಾಡಿದ್ದಾರೆ. ಇವರು ವಿಶ್ವಗುರು ಆಗಿದ್ದರೆ ಒಂದಾದರೂ ಸುದ್ದಿಗೋಷ್ಠಿ ನಡೆಸಬೇಕಿತ್ತಲ್ಲವೇ, ಏಕೆ ನಡೆಸಿಲ್ಲ. ಪ್ರಶ್ನೆಗಳಿಗೆ ಉತ್ತರಿಸಲು ಭಯಪಡುವ ಇವರಿಂದ ದೇಶದ ಅಭವೃದ್ಧಿ ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು.












Click it and Unblock the Notifications