ಬಿಜೆಪಿ ಸರ್ಕಾರದ ಯೋಜನೆಗಳ್ಯಾವೂ ಜನರ ಕೈ ಸೇರಲಿಲ್ಲ, ಬರೀ ಪೊಳ್ಳು ಮಾಡ್ತಾರೆ: ಶೆಟ್ಟರ್ ವಾಗ್ದಾಳಿ
ಹುಬ್ಬಳ್ಳಿ, ಮೇ, 11: 0ಪ್ರತಿದಿನವೂ ರಾಜ್ಯ ಸರ್ಕಾರದ ಆಡಳಿತವನ್ನು ಜನರು ನೋಡುತ್ತಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ಜನರಿಗೆ ಬೇಸರ ಮೂಡಿಸಿದೆ. ಯೋಜನೆಗಳು ಜನರಿಗೆ ತಲುಪಲಿಲ್ಲ. ಮೀಸಲಾತಿಯೂ ತಲುಪಲಿಲ್ಲ. ಮೀಸಲಾತಿ ಅನುಷ್ಠಾನ ಮಾಡಲ್ಲಾ ಅಂತಾ ಕೋರ್ಟ್‌ಗೆ ಹೇಳಿದ್ದಾರೆ. ಇಲ್ಲಿ ಜನರಿಗೆ ಮೋಸ ಮಾಡಿದರು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಯಾವುದನ್ನೂ ಕೂಡ ಸರಿಯಾಗಿ ಅನುಷ್ಠಾನಕ್ಕೆ ತರಲಿಲ್ಲ. ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿಲ್ಲ. ಕೈಗಾರಿಕೆಗೆ ಎರಡು ಹೆಕ್ಟೇರ್ ಜಮೀನು ಕೊಡಲು ಆಗಿಲ್ಲ. ಕೆಲಸ ಮಾಡಲು ಆಗದ ಸಿಎಂ ಯಾಕೇ ಇರಬೇಕು? ಬೊಮ್ಮಾಯಿ ನಮ್ಮವರು ಆಗಿದ್ದರು, ಆದರೆ ಅವರ ಕೈಯಲ್ಲಿ ಏನು ಮಾಡಲು ಆಗಿಲ್ಲ ಅನ್ನುವುದು ಜನರ ಭಾವನೆ ಆಗಿದೆ ಎಂದು ವ್ಯಂಗ್ಯವಾಡಿದರು.

ನಾನು ಲೆಕ್ಕಾಚಾರ ಮಾಡಿದ್ದಕ್ಕಿಂತ ದ್ವಿಗುಣ ಬೆಂಬಲ ಸಿಕ್ಕಿದೆ. ಗೆಲುವಿನ ಅಂತರ ಕಳೆದ ಬಾರಿಗಿಂತ ಹೆಚ್ಚಾಗಲಿದೆ. ನಾನು ಆರು ಎಲೆಕ್ಷನ್ ಮಾಡಿದ್ದೀನಿ, ಮತದಾರರಿಗೆ ಹಣ ಹಂಚಿರಲಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹಣ, ಕುಕ್ಕರ್ ಕೊಡುತ್ತಾರೆ. ಆದರೆ ಬಿಜೆಪಿ ಹೆಸರು ಹೇಳಿಕೊಳ್ಳುವ ವ್ಯಕ್ತಿಗಳು ನಮ್ಮ ಕ್ಷೇತ್ರದಲ್ಲಿ ಹತಾಶರಾಗಿ ಹಣ ಹಂಚಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಸ್ಲಮ್‌ಗಳಲ್ಲಿ ಜನರಿಗೆ ಐದುನೂರು, ಸಾವಿರ ಹಣ ಕೊಟ್ಟಿದ್ದಾರೆ. ಹಣ ಬಲದ ಮೇಲೆ ಗೆಲ್ಲುವುದಾದರೆ ಬಹಳಷ್ಟು ಶ್ರೀಮಂತರೇ ಗೆಲ್ಲುತ್ತಿದ್ದರು. ನಮ್ಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಣ ಹಂಚುವ ಒಂದು ಗೀಳಾಗಿಬಿಟ್ಟಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾನು ದೊಡ್ಡ ಬಹುಮತದಿಂದ ಗೆಲ್ಲುತ್ತೇನೆ
ಮತ್ತೊಂದೆಡೆ ಶಿಗ್ಗಾವಿಯಲ್ಲಿ ಪ್ರತಿಕ್ರಿಯಿದ ಸಿಎಂ ಬಸವರಾಜ ಬೊಮ್ಮಾಯಿ, ಶಿಗ್ಗಾವಿ ಜನತೆ ತೋರಿದ ಪ್ರೀತಿಗೆ ನಾನು ಚಿರಋಣಿ. ಚುನಾವಣೆಯನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದರು. ನನ್ನ ವಿರುದ್ಧ ಷಡ್ಯಂತ್ರ, ಅಪ್ರಚಾರ ಮಾಡಿದರು. ಆದರೆ ಅದು ನಿನ್ನೆಗೆ ಮುಗಿದಿವೆ. ನಾನು ದೊಡ್ಡ ಬಹುಮತದಿಂದ ಗೆಲ್ಲುತ್ತೇನೆ. ಅಲ್ಲದೆ ಸಮೀಕ್ಷೆಗಳು ಉಲ್ಟಾ ಹೊಡೆಯಲಿವೆ ಎಂದರು.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್ 107ಕ್ಕೂ ಅಧಿಕ ಸ್ಥಾನ ಅಂತಾ ಹೇಳಿದ್ದವು. ಆದರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆಯಿದೆ. ಮೋದಿಯವರ ಪ್ರಚಾರ ನಮಗೆ ಪ್ಲಸ್ ಆಗಿದೆ ಎಂದರು.
ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ನಾವು ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೆವೆ ಎಂದು ನನಗೆ ವಿಶ್ವಾಸ ಇದೆ. ಅತಂತ್ರ ಎಂಬ ಪ್ರಶ್ನೆಗೆ ಉತ್ತರ ನೀಡಲ್ಲ. ನಾನು 150 ಅಂತಾ ಎಲ್ಲೂ ಹೇಳಿಲ್ಲ. ಆದರೆ ಬಹುಮತ ಅಂತ ಹೇಳಿದ್ದೆ. ಈಗಲೂ ಅದೇ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಹೇಳಿದರು.












Click it and Unblock the Notifications