Winter Session: ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಈ ಬಾರಿ ಸಿಕ್ಕ ದಿನಗಳೆಷ್ಟು
ಹುಬ್ಬಳ್ಳಿ, ಡಿಸೆಂಬರ್ 08: ಬಹುನಿರೀಕ್ಷೆಯ ಬೆಳಗಾವಿ ಚಳಿಗಾಲ ಅಧಿವೇಶನ ನಾಳೆ ಡಿಸೆಂಬರ್ 09ರಿಂದ 20ರವರೆಗೆ ನಡೆಯಲಿದೆ. ಅಗತ್ಯ ಸಿದ್ಧತೆಗಳೆಲ್ಲವು ನಡೆದಿವೆ. ಉತ್ತರ ಕರ್ನಾಟಕ ಸಮಸ್ಯೆಗಳು, ಅಭಿವೃದ್ಧಿ ಯೋಜನೆಗಳು, ಆಡಳಿತ ಹೀಗೆ ಎಲ್ಲವು ಚರ್ಚೆಗೆ ಬರಬೇಕು, ಇಲ್ಲೂ ಅಭಿವೃದ್ಧಿ ಕೆಲಸಗಳು ಆಗಬೇಕು ಎಂಬ ಕಾರಣಕ್ಕೆ ಪ್ರತಿ ವರ್ಷ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಸುತ್ತಾ ಬರಲಾಗಿದೆ. ಆದರೆ ಚರ್ಚೆಗಳ ಮಾತ್ರ ನಗಣ್ಯ, ಎಷ್ಟೋ ಭಾರಿ ಹತ್ತು ದಿನ ಕಲಾಪಗಳೇ ನಡೆಯುವುದಿಲ್ಲ.
ಇದೀಗ ವರ್ಷಾಂತ್ಯಕ್ಕೆ ಎಂದಿನಂತೆ ಚಳಿಗಾಲ ಅಧಿವೇಶನ ಆರಂಭವಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ವಿಷಯಗಳ ಚರ್ಚೆಗೆ ನಾಲ್ಕು ದಿನಗಳನ್ನು ಮೀಸಲಿಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾಹಿತಿ ನೀಡಿದರು. ಅಧಿವೇಶನದ ಈ ಕನಿಷ್ಠ 4 ದಿನಗಳಾದರೂ ಈ ಭಾಗ ವಿಷಯಗಳ ಚಚೆ, ಕ್ರಮಗಳ ನಿರ್ಧಾರಕ್ಕೆ ಸಂಪೂರ್ಣವಾಗಿ ವಿನಿಯೋಗವಾಗಬೇಕು ಎಂಬುದು ಉತ್ತರ ಕರ್ನಾಟಕದವರ ಆಶಯವಾಗಿದೆ.

'ಬೆಳಗಾವಿಯಲ್ಲಿ ನಾಳೆಯಿಂದ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ನಾಲ್ಕು ದಿನ ಮೀಸಲಿಡಲಾಗಿದೆ. ಡಿಸೆಂಬರ್ 10 ಮತ್ತು 11 ಹಾಗೂ ಡಿಸೆಂಬರ್ 17 ಮತ್ತು 18ರಂದು ಕೃಷ್ಣಾ ಮೇಲ್ದಂಡೆ, ಮಹದಾಯಿ-ಕಳಸಾ-ಬಂಡೂರಿ, ತುಂಗ ಭದ್ರಾ, ಕಾರಂಜಾ, ಕೃಷಿ, ಅರಣ್ಯಭೂಮಿ ಅತಿಕ್ರಮಣದಾರರು ಮತ್ತು ಸಂತ್ರಸ್ತರ ಸಮಸ್ಯೆ, ಸಕ್ಕರೆ ಕಾರ್ಖಾನೆ, ತೋಟಗಾರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ವಿಸ್ತ್ರತ ಚರ್ಚೆ ನಡೆಯಲಿದೆ ಎಂದು ಅವರು ವಿವರಿಸಿದರು.
ಈಗಾಗಲೇ ಕಲಾಪದ ಹತ್ತು ದಿನಗಳಲ್ಲಿ ಯಾವೆಲ್ಲ ವಿಷಯಗಳ ಕುರಿತು ಚರ್ಚೆ ನಡೆಯಬೇಕು ಎಂಬದ ವಿಷಯಪಟ್ಟಿ ಸಿದ್ಧಪಡಿಸಲಾಗಿದೆ. ಶೂನ್ಯವೇಳೆ (ಮಧ್ಯಾಹ್ನ 3.30) ನಂತರ ಈ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ರಾತ್ರಿ 10 ಗಂಟೆಯಾದರೂ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದೇವೆ ಎಂದು ಹೇಳಿದರು.
ಇದೇ ವಿಚಾರವಾಗಿ ಈಗಾಗಲೇ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜೊತೆ ಮಾತನಾಡಿದ್ದೇನೆ. ಮಂಗಳವಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆಯಲಾಗಿದೆ. ಉತ್ತರ ಕರ್ನಾಟಕಕ್ಕೆ ನಾಲ್ಕು ದಿನ ಕಲಾಪ, ಹಾಜರಾತಿ ಕುರಿತು ಅಲ್ಲಿಯೂ ತಿಳಿಸುತ್ತೇನೆ. ಈ ಬಾರಿಯ ಅಧಿವೇಶನದ ಕಲಾಪಗಳು ಉತ್ತಮ ರೀತಿಯಲ್ಲಿ ನಡೆಯಲಿದೆ' ಎಂದು ಬಸವರಾಜ ಹೊರಟ್ಟಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಧಿವೇಶನಕ್ಕೆ ಉತ್ತರ ಕರ್ನಾಟಕ ಸೇರಿದಂತೆ ಎಲ್ಲ ಶಾಸಕರು ಗೈರಾದರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮದು ಪ್ರಜಾಪ್ರಭುತ್ವ ದೇಶವಾಗಿದೆ. ಜನರ ಸಮಸ್ಶೆಗಳಿಗೆ ಪರಿಹಾರ ನೀಡುವುದು ಜನಪ್ರತಿನಿಧಿಗಳ ಕರ್ತವ್ಯ. ಅವುಗಳನ್ನು ಅಧಿವೇಶನದಲ್ಲಿ ಕೂಲಂಕಶವಾಗಿ ಚರ್ಚಿಸಿ ಪ್ರಜಾಪ್ರಭುತ್ವದ ಆಶಯಕ್ಕೆ ತಕ್ಕ ಹಾಗೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೆಲವು ಶಾಸಕರು ಸಹಿ ಮಾಡಿ ಹಾಗೆಯೇ ಹೋಗುತ್ತಾರೆ. ಅಧಿವೇಶನದಲ್ಲಿ ಪಾಲ್ಗೊಂಡು ಪ್ರಶ್ನೆ ಕೇಳುವಂತೆ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡುತ್ತಿದ್ದೇವೆ. ಈ ಬಾರಿ ಶೇಕಡಾ 70ರಷ್ಟು ಶಾಸಕರು ಸದನದ ಕಾರ್ಯ ಕಲಾಪಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದರು.
ಮುಖ್ಯವಾಗಿ ಈ ಬಾರಿದ ಅಧಿವೇಶನದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ವಿಶೇಷ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಕೊಟ್ಟರು. ಒಟ್ಟಾರೆಯಾಗಿ ಚಳಿಗಾಲ ಎಷ್ಟು ಸಮರ್ಪಕವಾಗಿ ನಡೆಯುತ್ತದೆ. ರೈತರು ಸೇರಿದಂತೆ ಕಬ್ಬು ಬೆಳೆಗಾರರ ಪ್ರತಿಭಟನೆ, ಮೀಸಲಾತಿ ಹೋರಾಟಗಳ ಜೊತೆಗೆ ವಿಪಕ್ಷಗಳ ಆರೋಪ, ಅಕ್ರಮ ಹಾಗೂ ಭ್ರಷ್ಟಾಚಾರ ತನಿಖೆಗಳ ಪ್ರಸ್ತಾಪಗಳನ್ನು ಸರ್ಕಾರ ಹೇಗೆ ನಿರ್ವಹಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.











Click it and Unblock the Notifications