ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ 35 ಸಾವಿರ ಅಂತರದಲ್ಲಿ ಗೆಲ್ಲಬೇಕು: ಬಿಜೆಪಿ ನಾಯಕರಿಗೆ ಅಮಿತ್ ಶಾ ಸೂಚನೆ
ಹುಬ್ಬಳ್ಳಿ, ಏಪ್ರಿಲ್ 25: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ನಾವು ಯಾವುದೇ ತಂತ್ರಗಾರಿಕೆ ಮಾಡುವ ಅವಶ್ಯಕತೆ ಇಲ್ಲ. ಇಲ್ಲಿನ ಜನರು, ಕಾರ್ಯಕರ್ತರು, ಮತದಾರರೇ ನಿರ್ಧಾರ ಮಾಡುತ್ತಾರೆ. ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಸಲಿದೆ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ ಬೆಲ್ಲದ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೆಂಟ್ರಲ್ ಕ್ಷೇತ್ರದಲ್ಲಿ ಯಾವ ವಿಚಾರವೂ ಕೆಲಸ ಮಾಡಲ್ಲ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ 35 ಸಾವಿರ ಲೀಡ್ ಆಗಬೇಕು ಅಂತಾ ಅಮಿತ್ ಶಾ ಹೇಳಿದ್ದಾರೆ.ಹೀಗಾಗಿ ಕನಿಷ್ಠ ಪಕ್ಷ 35 ರಿಂದ 40 ಸಾವಿರ ಅಂತರದಲ್ಲಿ ಮಹೇಶ ಟೆಂಗಿನಕಾಯಿ ಗೆಲ್ಲುತ್ತಾರೆ ಎಂದುಅರವಿಂದ ಬೆಲ್ಲದ್ ಹೇಳಿದ್ದಾರೆ.

ಇನ್ನು ಲಿಂಗಾಯತರಿಗೆ ಬಿಜೆಪಿಯಿಂದ ಅನ್ಯಾಯ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಐವತ್ತು ವರ್ಷದ ಕರ್ನಾಟಕದ ಇತಿಹಾಸದಲ್ಲಿ ಕೇವಲ 9 ತಿಂಗಳ ಅವಧಿಗೆ ವೀರೇಂದ್ರ ಪಾಟೀಲ್‌ರನ್ನು ಮುಖ್ಯಮಂತ್ರಿ ಮಾಡಿ, ಅವರನ್ನು ಮನೆಗೆ ಕಳುಹಿಸಿದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಪಕ್ಷದ ಬಗ್ಗೆ ಕರ್ನಾಟಕದ ಜನತೆಗ ಗೊತ್ತಿದೆ ಎಂದು ಹೇಳಿದರು.
ಇಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ, ಶೆಟ್ಟರ್ ಸೋಲು ಖಚಿತ: ಅಮಿತ್ ಶಾ
ಜಗದೀಶ್ ಶೆಟ್ಟರ್ ಸ್ವಯಂ ಚುನಾವಣೆಯಲ್ಲಿ ಸೋಲುತ್ತಾರೆ. ಬಿಜೆಪಿ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ. ಇಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ. ಶೆಟ್ಟರ್ ಒಬ್ಬರಿಗೇ ಟಿಕೆಟ್ ತಪ್ಪಿಸಿಲ್ಲ. ಹಲವಾರು ಹಿರಿಯರಿಗೆ ಟಿಕೆಟ್ ಕೊಟ್ಟಿಲ್ಲ. ಕಾರಣವನ್ನು ಅವರಿಗೆ ಹೇಳಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ಭವಿಷ್ಯ ನುಡಿದಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಯಾವುದೇ ವ್ಯಕ್ತಿಯ ಕಪಿಮುಷ್ಠಿಯಲ್ಲಿ ಇಲ್ಲ. ಟೀಮ್ ವರ್ಕ್ ಮೂಲಕವೇ ಕೆಲಸ ಮಾಡುತ್ತಿರುವ ರಾಜಕೀಯ ಪಕ್ಷ. ಕಾಂಗ್ರೆಸ್ ಪಿಎಫ್ಐಗೆ ವಿಶೇಷ ಟ್ರೀಟ್ಮೆಂಟ್ ಕೊಟ್ಟಿತು. ಆದರೆ ನಾವು ಇದಕ್ಕೆ ಲಗಾಮು ಹಾಕಿದ್ದೇವೆ. ಕಾಂಗ್ರೆಸ್ ಕಿತ್ತೂರು ಕರ್ನಾಟಕಕ್ಕೆ ಅಪಮಾನ ಮಾಡುವ ಕೆಲಸ ಮಾಡಿತು. ಅಲ್ಲದೇ ಮಹಾದಾಯಿ ಹೋರಾಟಕ್ಕೆ ಕಾಂಗ್ರೆಸ್ ನ್ಯಾಯ ನೀಡಲಿಲ್ಲ. ಆದರೆ ನಮ್ಮ ಬಿಜೆಪಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ ಎಂದರು.

ಕೃಷ್ಣಾ ಮೇಲ್ದಂಡೆ, ತುಂಗಾ ಮೇಲ್ದಂಡೆ ಯೋಜನೆಗಳಿಗೂ ಆದ್ಯತೆ ನೀಡಿದ್ದೆವು. ಕೆರೂರು ಲಿಫ್ಟ್ ಯೋಜನೆಗೂ ಆದ್ಯತೆ ನೀಡಿದ್ದೇವೆ. ಧಾರವಾಡ- ಬೆಳಗಾವಿ ರೈಲ್ವೆ ಯೋಜನೆಗೂ ಚಾಲನೆ ಸಿಗಲಿದೆ ಎಂದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕೂಡ ಮಹದಾಯಿ ಬಗ್ಗೆಯಾಗಲಿ, ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ಹಾಗೂ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಪಕ್ಷ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಜನರ ಧ್ವನಿಯಾಗಿದ್ದು, ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು.
ಮಾತು ಮುಂದುವರಿಸಿದ ಅಮಿತ್ ಶಾ ಪಿಎಂ ಆವಾಸ್ ಅಡಿ 4.10 ಲಕ್ಷ ಮನೆ ನಿರ್ಮಿಸಿಕೊಡಲಾಗಿದೆ. ನಾಲ್ಕು ಕೋಟಿ ಜನರಿಗೆ ಉಚಿತವಾಗಿ ಪಡಿತರ ನೀಡಲಾಗುತ್ತಿದೆ. ತುಷ್ಟೀಕರಣ ರಾಜಕಾರಣ ಮಾಡಿ ಕಾಂಗ್ರೆಸ್, ಕರ್ನಾಟಕದ ಸುರಕ್ಷತೆಯನ್ನೇ ಬಲಿಕೊಡುತ್ತಿದೆ. ಇಲ್ಲಿನ ಜನ ಬಿಜೆಪಿಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದಾರೆ. ಬಿಜೆಪಿ ಖಂಡಿತಾ ಅಧಿಕಾರಕ್ಕೆ ಬರುತ್ತದೆ. ಸುರಕ್ಷಿತ, ವಿಕಸಿತ ಕರ್ನಾಟಕವನ್ನು ನಾವು ಕೊಡುತ್ತೇವೆ ಎಂದು ಅಮಿತ್ ಶಾ ಭರವಸೆ ನೀಡಿದರು.












Click it and Unblock the Notifications