ಬಂಧಿತ 3 ಕಾಶ್ಮೀರಿ ವಿದ್ಯಾರ್ಥಿಗಳು ಕೆಎಲ್ಇಯಿಂದ ಸಸ್ಪೆಂಡ್
ಹುಬ್ಬಳ್ಳಿ, ಫೆಬ್ರವರಿ 15: ಇಲ್ಲಿನ ಗೋಕಲ ರಸ್ತೆಯಲ್ಲಿರುವ ಕೆಎಲ್ಇ ಕಾಲೇಜಿನಲ್ಲಿ ಸಿವಿಎಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಕಾಲೇಜಿನ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಕಾಶ್ಮೀರ ಮೂಲದ ಆಮೀರ್, ಬಾಸಿತ್, ತಾಲಿಬ್ ಎಂಬುವರು ಫೆಬ್ರವರಿ 14ರಂದು ಪುಲ್ವಾಮಾ ಹುತಾತ್ಮರ ದಿನದಂದು ಪಾಕಿಸ್ತಾನದ ಸೇನೆಯನ್ನು ಹೊಗಳುವ ಹಾಡನ್ನು ಹಾಕಿಕೊಂಡು ರೂಮಿನಲ್ಲಿ ಕುಳಿತು ಪಾಕ್ ಪರ ಘೋಷಣೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆಯಾಗಿತ್ತು. ಈ ಬಗ್ಗೆ ಕಾಲೇಜು ಮಂಡಳಿಯಿಂದ ಪೊಲೀಸರಿಗೆ ದೂರು ನೀಡಿದ್ದರು.
ಮೂವರು ವಿದ್ಯಾರ್ಥಿಗಳನ್ನು ದೇಶದ್ರೋಹ, ಸಾರ್ವಜನಿಕ ಶಾಂತಿ ಕದಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು, ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಘಟನೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಪೂರ್ಣ ತನಿಖೆ ನಡೆಸಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಆರ್ ದಿಲೀಪ್ ಹೇಳಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ,ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಲಾಗಿದೆ ಎಂದು ಪ್ರಾಂಶುಪಾಲರಾದ ಬಸವರಾಜು ತಿಳಿಸಿದರು.

ಕೆಎಲ್ಇ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದುಕೊಂಡಿದ್ದ ಮೂವರನ್ನು ಬಂಧಿಸಿ ಕರೆದೊಯ್ಯುವಾಗ ಶ್ರೀರಾಮಸೇನೆಯವರು ಹಲ್ಲೆ ಮಾಡಲು ಯತ್ನಿಸಿದ ಘಟನೆಯೂ ನಡೆದಿದೆ.












Click it and Unblock the Notifications