ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು: ಸರ್ಕಾರಕ್ಕೆ ರಾಜಣ್ಣ ಕೊರವಿ ಮನವಿ
ಹುಬ್ಬಳ್ಳಿ, ಆಗಸ್ಟ್, 03: ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮೇಲೆ ಇಲ್ಲಸಲ್ಲದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಪಪ್ರಚಾರ ಮಾಡಲಾಗುತ್ತಿದ್ದು, ಇಂತಹ ಸುಳ್ಳು ವಿಷಯಗಳನ್ನು ಹರಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ರಾಜಣ್ಣ ಕೊರವಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳವು ಪವಿತ್ರ ಧಾರ್ಮಿಕ ಯಾತ್ರಾಸ್ಥಳವಾಗಿದೆ. ರಾಜ್ಯದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯೊಂದಿಗೆ ಹೆಸರುವಾಸಿಯಾಗಿದೆ. ಹೆಗ್ಗಡೆಯವರ ಯೋಜನಾ ಕೌಶಲ್ಯ ಅತ್ಯದ್ಭುತವಾದದ್ದು. ಧರ್ಮಸ್ಥಳದ ಚಾರಿತ್ರಿಕ ಮಹತ್ವ ಪರಂಪರೆ ಮತ್ತು ತಮ್ಮ ವ್ಯಕ್ತಿತ್ವಕ್ಕೆ ಸರಿದೂಗುವ ರೀತಿಯಲ್ಲಿ ಅವರು ಯೋಜನೆ ರೂಪಿಸುತ್ತಾ ಬರುತ್ತಿದ್ದಾರೆ. ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದಲ್ಲಿ 48 ಲಕ್ಷ ಕುಟುಂಬಗಳಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದರು.

ಇನ್ನು ಸ್ವ-ಸಹಾಯ ಸಂಘದ ಅಭಿವೃದ್ಧಿಯಲ್ಲದೇ "ನಮ್ಮೂರು ನಮ್ಮ ಕೆರೆ" ಕಾರ್ಯಕ್ರಮದ ಮೂಲಕ ಕೆರೆಗಳ ಮನಸ್ಸೇತನ, ರುದ್ರಭೂಮಿ ಅಭಿವೃದ್ಧಿ, ಮಹಿಳೆಯರ ಸಬಲೀಕರಣಕ್ಕಾಗಿ ಜ್ಞಾನವಿಕಾಸ ಕಾರ್ಯಕ್ರಮ ಹಾಗೂ ಉತ್ಸಲ್ಯ ಕಾರ್ಯಕ್ರಮದಲ್ಲಿ ಅಸಹಾಯಕರಿಗೆ ಮಾಶಾಸನ, ಸುಜ್ಞಾನನಿಧಿ ಶಿಷ್ಯವೇತನ , ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡಗಳಿಗೆ ಅನುದಾನ, ಶಿಕ್ಷಕರ ಕೊರತೆ ಇದ್ದಲ್ಲಿ ಜ್ಞಾನದೀಪ ಶಿಕ್ಷಕರ ನಿಯೋಜನೆ, ಮುಗ್ಗಟಮುಕ್ತ ಸಮಾಜ ನಿರ್ಮಾಣಕ್ಕೆ ಮಧ್ಯವರ್ಜನ ಶಿಬಿರ, ಆರೋಗ್ಯರಕ್ಷಾ, ಸಂರ್ಪೂ ಸುರಕ್ಷಾ ಕಾರ್ಯಕ್ರಮಗಲನ್ನು ಜಾರಿ ಮಾಡಿದ್ದಾರೆ.
ಅಲ್ಲದೆ 87 ಲಕ್ಷ ಮಂದಿಗೆ ಆಯುಷ್ಠಾನ ಕಾರ್ಡ್, ರೈತ ಮಿತ್ರ ಯೋಜನೆಗಳು, ಬಡವರಿಗೆ ಆರ್ಥಿಕ ಸಹಕಾರ, ಪುರಾತನ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಧನಸಹಾಯ ಸೇರಿದಂತೆ ರಾಜ್ಯದ ಜನರಿಗೆ ಅನುಕೂಲವಾಗಲು ನೂರಾರು ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ನಾಡಿನ ಸಮಸ್ತ ಜನರ ಆಶಯಗಳನ್ನು ಪೂರ್ಣಗೊಳಿಸಲಿಕ್ಕಾಗಿ ಸದಾ ಪಣತೊಟ್ಟು ಜನ ಸೇವೆಯೇ ಜನಾರ್ಧನ ಸೇವೆ ಎನ್ನುವ ತತ್ವದಡಿಯಲ್ಲಿ ಲಕ್ಷಾಂತರ ಕುಟುಂಬಗಳಲ್ಲಿ, ಆನಂದ, ಶಾಂತಿ, ನೆಮ್ಮದಿ, ದುಡಿಮೆ, ಸಕಲ ಸೌಕರ್ಯಗಳನ್ನು ಕೊಡಲು ಕಾರಣೀಭೂತರಾದ ವೀರೇಂದ್ರ ಹೆಗ್ಗಡೆ ಅವರ ಕುರಿತಾಗಿ ಕೆಲವು ಸಮಾಜ ದ್ರೋಹಿಗಳು ಮಾನಹಾನಿಕರ ನುಡಿಗಳನ್ನು ಹೇಳುತ್ತಿರುವುದು ನೋವುಂಟು ಮಾಡಿದೆ ಎಂದರು.
ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಒತ್ತಾಯ ಮಾಡಿ ನ್ಯಾಯಯುತ ತನಿಖೆಗೆ ಆಗ್ರಹಿಸಿರುವ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಬಗ್ಗೆಯೇ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಇಂತಹ ಸುಳ್ಳು ವಿಚಾರಗಳ ಬಗ್ಗೆ ಜನರು ಎಚ್ಚರವಹಿಸಬೇಕು. ಸರ್ಕಾರ ಇಂತಹ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ಜನಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಮುಂದಿನ ದಿನದಲ್ಲಿ ಇಂತಹ ಅಪಪ್ರಚಾರಗಳು ಮರುಕಳಿಸಿದ್ದಲ್ಲಿ ವೀರೇಂದ್ರ ಹೆಗ್ಗಡೆ ಅವರ ಭಕ್ತ ವೃಂದ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ನೀಡಿದರು.












Click it and Unblock the Notifications