ಹುಬ್ಬಳ್ಳಿಯಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ರೈಲ್ವೆ ನೌಕರಿ ಪಡೆದ ಭೂಪ; ಬಂಧನ ಆದವರ ವಿವರ ಇಲ್ಲಿದೆ
ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬ ನಖಲಿ ದಾಖಲೆ ಸೃಷ್ಟಿಸಿ ನೈರುತ್ಯ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಂಡಿರುವ ಪ್ರಕರಣವೊಂದು 32 ವರ್ಷದ ನಂತರ ಬೆಳಕಿಗೆ ಬಂದಿದೆ. ಈ ವಂಚಕನ ಜಾಲ ಬಯಲಾಗಿದ್ದು ಹೇಗೆ ಅನ್ನುವ ವಿವರ ಇಲ್ಲಿದೆ.
ಹುಬ್ಬಳ್ಳಿ, ಫೆಬ್ರವರಿ, 12: ಜನರು ನೌಕರಿಗಾಗಿ ಒಂದಿಲ್ಲೊಂದು ರೀತಿಯಲ್ಲಿ ಹೋರಾಟ ಮಾಡುತ್ತಲೇ ಇರುತ್ತಾರೆ. ಆದರೆ ಕೆಲವೊಂದಿಷ್ಟು ಜನರು ಮಾತ್ರ ವಾಮಮಾರ್ಗದ ಮೂಲಕ ನೌಕರಿ ಪಡೆಯಲು ಮುಂದಾಗಿರುತ್ತಾರೆ. ಆದರೆ ವಿಪರ್ಯಾಸಕರ ಸಂಗತಿ ಅಂದರೆ ವಾಮಮಾರ್ಗಗಳು ಬಹಳಷ್ಟು ದಿನ ನಡೆಯುವುದೇ ಇಲ್ಲ. ಹಾಗೆಯೇ ಹುಬ್ಬಳ್ಳಿಯಲ್ಲಿಯೂ ಕೂಡ ಇಂತಹದ್ದೇ ಒಂದು ಪ್ರಕರಣ ಇದೀಗ ಬಯಲಿಗೆ ಬಂದಿದೆ.
ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ವಂಚನೆ ಮಾಡಿ ನೌಕರಿ ಪಡೆದಿರುವ ಪ್ರಕರಣವೊಂದು 32 ವರ್ಷದ ನಂತರ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶ ಮೂಲದ ವ್ಯಕ್ತಿಯೊಬ್ಬ ರಾಜ್ಯದಲ್ಲಿನ ಪರಿಶಿಷ್ಟ ವರ್ಗದ ವಾಲ್ಮೀಕಿ ಸಮುದಾಯದ ಪ್ರಮಾಣ ಪತ್ರ ಪಡೆದು ವಂಚನೆ ಮಾಡಿ, ನೈರುತ್ಯ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಂಡಿದ್ದಾನೆ. ಈ ಪ್ರಕರಣ ಬರೋಬ್ಬರಿ 32 ವರ್ಷಗಳ ನಂತರ ಬೆಳಕಿಗೆ ಬಂದಿದೆ. ಪ್ರಕಾಶಂ ಜಿಲ್ಲೆಯ ಗುದ್ದಲೂರು ತಾಲೂಕಿನ ಪೊದಿಲಕುಂಟಪಲ್ಲೆ ಗ್ರಾಮದ ಮಂಡ್ಲಾಚಕ್ರಧರ ವೆಂಕಟಸುಬ್ಬಯ್ಯ ವಂಚಿಸಿದ ಆರೋಪಿಯಾಗಿದ್ದಾನೆ. ಪರಿಶೀಲನೆ ನಡೆಸದೆ ಪ್ರಮಾಣ ಪತ್ರ ನೀಡಿದ ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧವೂ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಖಲಿ ಪ್ರಮಾಣ ಪತ್ರ ಸೃಷ್ಟಿಸಿದ ಭೂಪ
ಇನ್ನು ಆಂಧ್ರಪ್ರದೇಶದಲ್ಲಿ ವಾಲ್ಮೀಕಿ ಸಮುದಾಯ ಹಿಂದುಳಿದ ವರ್ಗಕ್ಕೆ ಬರುತ್ತದೆ. ಈ ವಿಷಯ ತಿಳಿದಿದ್ದರೂ, 1991ರ ಡಿಸೆಂಬರ್‌ನಲ್ಲಿ ಮಂಡ್ಲಾ ಚಕ್ರಧರ, ಹುಬ್ಬಳ್ಳಿ ತಹಶೀಲ್ದಾರ್‌ಗೆ ಸುಳ್ಳು ಘೋಷಣಾ ಪತ್ರ, ದಾಖಲೆ ಸಲ್ಲಿಸಿ ರಾಜ್ಯದಲ್ಲಿನ ವಾಲ್ಮೀಕಿ ಪರಿಶಿಷ್ಟ ಸಮುದಾಯದ ಪ್ರಮಾಣ ಪತ್ರ ಪಡೆದಿದ್ದಾನೆ.

ದಾಖಲೆಗಳ ಪರಿಶೀಲನೆ ನಡೆಸದ ಅಧಿಕಾರಿಗಳು
ದಾಖಲೆಗಳನ್ನು ಪರಿಶೀಲನೆ ನಡೆಸದೆ, ಅವನ ಪೂರ್ವಜರ, ರಕ್ತಸಂಬಂಧಿಕರ ಹಾಗೂ ಆಚಾರ-ವಿಚಾರ ಪರಿಶೀಲನೆ ನಡೆಸದೆ ಅಂದಿನ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿ ಅಪರಾಧ ಎಸಗಿದ್ದಾರೆ. ಆಂಧ್ರದ ಮಂಡ್ಲಾ ವೆಂಕಟಸುಬ್ಬಯ್ಯ ತನ್ನ ಹಾಗೂ ಇಬ್ಬರು ಮಕ್ಕಳ ಹೆಸರಿನಲ್ಲೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದು ವಂಚಿಸಿದ್ದಾನೆ. ಈ ಕುರಿತು ಮತ್ತೊಂದು ಪ್ರಕರಣ ದಾಖಲಾಗಿದೆ.

15 ಮಂದಿ ವಿರುದ್ಧ ಪ್ರಕರಣ ದಾಖಲು
ಒಟ್ಟಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಅವಧಿಯ ತಹಶೀಲ್ದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿಯೆಂದು 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. 2000ನೇ ಇಸವಿಯಲ್ಲಿ ವೆಂಕಟಸುಬ್ಬಯ್ಯ ಸುಳ್ಳು ದಾಖಲೆ ನೀಡಿ ಪಡೆದ ಪ್ರಮಾಣ ಪತ್ರದ ಸಹಾಯದಿಂದ, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದಾನೆ. ನಂತರ 2013 ಮತ್ತು 2019 ರಲ್ಲಿ ಮಕ್ಕಳ ಹೆಸರಿನಲ್ಲೂ ಸುಳ್ಳು ದಾಖಲೆ ನೀಡಿ ವಾಲ್ಮೀಕಿ ಸಮುದಾಯದ ಪ್ರಮಾಣ ಪತ್ರ ಪಡೆದಿದ್ದಾರೆ ಎನ್ನುವ ಸತ್ಯವೊಂದು ಬಟಾಬಯಲಾಗಿದೆ.












Click it and Unblock the Notifications