Breaking; ನವೀನ್ ನಿವಾಸಕ್ಕೆ ಗುರುವಾರ ರಾಜ್ಯಪಾಲರ ಭೇಟಿ
ಹಾವೇರಿ, ಮಾರ್ಚ್ 23; ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಮೃತಪಟ್ಟ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಲಿದ್ದಾರೆ. ಮಾರ್ಚ್ 1ರಂದು ನವೀನ್ ಉಕ್ರೇನ್‌ನಲ್ಲಿ ರಷ್ಯಾ ಶೆಲ್ ದಾಳಿಗೆ ಸಿಲುಕಿ ಮೃತಪಟ್ಟಿದ್ದರು.
ದಾವಣಗೆರೆ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗುರುವಾರ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಳ್ಳಲಿದ್ದಾರೆ. ಬಳಿಕ ಮಧ್ಯಾಹ್ನ 2.15ಕ್ಕೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ.
ಸೋಮವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನವೀನ್ ಮೃತ ದೇಹ ಆಗಮಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರರು ಮೃತದೇಹ ಬರಮಾಡಿಕೊಂಡು ಅಂತಿಮ ನಮನ ಸಲ್ಲಿಸಿದ್ದರು. ಬಳಿಕ ಹಾವೇರಿಗೆ ಕಳಿಸಿಕೊಡಲಾಗಿತ್ತು.

ಚಳಗೇರಿ ಗ್ರಾಮದಲ್ಲಿ ನವೀನ್ ಕುಟುಂಬಸ್ಥರು ಮೃತದೇಹಕ್ಕೆ ಅಂತಿಮ ಪೂಜೆ ಸಲ್ಲಿಕೆ ಮಾಡಿದ ಬಳಿಕ ದೇಹವನ್ನು ದಾವಣಗೆರೆಯ ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ.
ಮಾರ್ಚ್ 1ರಂದು ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಆಹಾರ ತರಲು ಹೋದಾಗ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದರು. 20 ದಿನಗಳ ಬಳಿಕ ನವೀನ್ ಶೇಖರಪ್ಪ ಪಾರ್ಥಿವ ಶರೀರ ತಾಯ್ನಾಡಿಗೆ ತರಲಾಗಿತ್ತು.
ನವೀನ್ ಶೇಖರಪ್ಪ ಗ್ಯಾನಗೌಡರ್ ಮೃತಪಟ್ಟಾಗ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ಕುಟುಂಬದಕ್ಕೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು, ಪರಿಹಾರದ ಚೆಕ್ ಸಹ ಹಸ್ತಾಂತರ ಮಾಡಲಾಗಿದೆ.
ಶವವನ್ನು ತರುವ ಭರವಸೆ; ನವೀನ್ ಶೇಖರಪ್ಪ ಗ್ಯಾನಗೌಡರ್ ಕುಟುಂಬದ ಬೇಡಿಕೆಯಂತೆ ಶವವನ್ನು ತರಲು ಪ್ರಯತ್ನ ನಡೆಸುವುದಾಗಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಅಂತಿಮವಾಗಿ ಶವವನ್ನು ತರಲಾಗಿದೆ.
ಸೋಮವಾರ ಬೆಂಗಳೂರಿನಲ್ಲಿ ನವೀನ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದ್ದ ಬಸವರಾಜ ಬೊಮ್ಮಾಯಿ, "ಉಕ್ರೇನ್‌ನಿಂದ ನವೀನ್ ಮೃತ ದೇಹವನ್ನು ತರುವ ಅಸಾಧ್ಯವಾದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿಯವರ ಭಗೀರಥ ಪ್ರಯತ್ನದಿಂದ ಸಾಧಿಸಿ, ಐತಿಹಾಸಿಕ ಕೆಲಸವನ್ನು ಮಾಡಲಾಗಿದೆ" ಎಂದು ಹೇಳಿದ್ದರು.
"ಉಕ್ರೇನ್ ಸುತ್ತಲಿನ ಎಲ್ಲಾ ದೇಶಗಳ ಸಂಪರ್ಕವನ್ನು ಬೆಳೆಸಿ ರಾಜತಾಂತ್ರಿಕವಾಗಿ ವಿಮಾನನಿಲ್ದಾಣದಲ್ಲಿ ವಿಶೇಷ ವಿಮಾನಗಳಿಗೆ ಅನುಮತಿ ಪಡೆದು ಶವವನ್ನು ತರಲಾಗಿದೆ. ಇಡೀ ಪ್ರಕ್ರಿಯೆ ಸಮನ್ವಯದ ಆಧಾರದ ಮೇಲೆಯೇ ಆಗಿದೆ. ನವೀನ್ ವೈದ್ಯಕೀಯ ಶಿಕ್ಷಣ ಮುಗಿಸಿ ಹಿಂದಿರುಗುವ ವೇಳೆಗೆ ಅವನ ತಂದೆತಾಯಿಗಳು ಬರಮಾಡಿಕೊಳ್ಳಬೇಕಿತ್ತು. ಆದರೆ ನವೀನ್ ಮೃತದೇಹವನ್ನು ಬರಮಾಡಿಕೊಳ್ಳಬೇಕಿರುವುದು ಅತ್ಯಂತ ನೋವಿನ ಸಂಗತಿ" ಎಂದು ತಿಳಿಸಿದ್ದರು.












Click it and Unblock the Notifications