ಶಿಗ್ಗಾವಿ ಉಪ ಚುನಾವಣೆ: 9 ಸಚಿವರಿಗೆ ವಿಶೇಷ ಟಾಸ್ಕ್ ನೀಡಿದ ಸಿಎಂ ಸಿದ್ದರಾಮಯ್ಯ!
ಹಾವೇರಿ, ಅಕ್ಟೋಬರ್ 27: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಚನ್ನಪಟ್ಟಣದ ಚುನಾವಣೆ ಕುರಿತು ಲೆಕ್ಕಾಚಾರ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿದ್ದ ಬಂಡಾಯದ ಬಿಸಿ ತಣ್ಣಗಾಗಿದೆ. ನವೆಂಬರ್ 13ರಂದು ನಡೆಯುವ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಸಚಿವರಿಗೆ ವಿಶೇಷ ಟಾಸ್ಕ್ ನೀಡಿದ್ದಾರೆ.
ಶಿಗ್ಗಾವಿ ಉಪ ಚುನಾವಣೆಗೆ ಯಾಸೀರ್ ಅಹ್ಮದ್ ಖಾನ್ ಪಠಾಣ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅಭ್ಯರ್ಥಿ. ಕಾಂಗ್ರೆಸ್ ಪಕ್ಷಕ್ಕೆ ಬಂಡಾಯ ತಲೆನೋವಾಗಿತ್ತು. ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಅಜ್ಜಂಪೀರ್ ಖಾದ್ರಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಸಂಧಾನ ನಡೆಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರವನ್ನು ಖಾದ್ರಿ ವಾಪಸ್ ಪಡೆಯಲಿದ್ದಾರೆ.

ಸಚಿವರಿಗೆ ವಿಶೇಷ ಟಾಸ್ಕ್: ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಅವರ ಪುತ್ರ ಭರತ್ ಬೊಮ್ಮಾಯಿ ಸೋಲಿಸಿ ಬಿಜೆಪಿ ನಾಯಕರಿಗೆ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಆದ್ದರಿಂದ ಶಿಗ್ಗಾವಿಯಲ್ಲಿ ಯಾಸೀರ್ ಅಹ್ಮದ್ ಖಾನ್ ಪಠಾಣ ಗೆಲ್ಲಿಸಲು 9 ಸಚಿವರಿಗೆ ವಿಶೇಷ ಟಾಸ್ಕ್ ನೀಡಿದ್ದಾರೆ.
20 ವರ್ಷಗಳಿಂದ ಶಿಗ್ಗಾವಿ ಬಿಜೆಪಿಯ ವಶದಲ್ಲಿದೆ. ಆದ್ದರಿಂದ ಉಪ ಚುನಾವಣೆ ಗೆಲ್ಲುವ ಮೂಲಕ ಕ್ಷೇತ್ರವನ್ನು ವಶಕ್ಕೆ ಪಡೆಯಬೇಕು ಎಂಬುದು ಕಾಂಗ್ರೆಸ್ ನಾಯಕರ ಪಣವಾಗಿದೆ. ಚುನಾವಣೆ ನಿರ್ವಹಣೆಗಾಗಿ ಹೈಕಮಾಂಡ್ ಸೂಚನೆಯಂತೆ ಪ್ರತಿ ಜಿಲ್ಲಾ ಪಂಚಾಯಿತಿಯ ನಿರ್ವಹಣೆಯನ್ನು ಒಬ್ಬರು ಸಚಿವರಿಗೆ ನೀಡಲಾಗಿದೆ.
ಶಿಗ್ಗಾವಿಯಲ್ಲಿ 6 ಜಿಲ್ಲಾ ಪಂಚಾಯಿತಿ, 23 ತಾಲೂಕು ಪಂಚಾಯಿತಿ, 3 ಪುರಸಭೆಗಳಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದಿರುವ ಯೋಜನೆಗಳನ್ನು ಜನರ ಮುಂದಿಟ್ಟು ಚುನಾವಣಾ ಪ್ರಚಾರ ನಡೆಸಬೇಕು. ಉಪ ಚುನಾವಣೆಯಲ್ಲಿ ಯಾಸೀರ್ ಅಹ್ಮದ್ ಖಾನ್ ಪಠಾಣ ಗೆಲುವು ಸಾಧಿಸಬೇಕು, ಅದರ ಹೊಣೆ ನಿಮ್ಮದು ಎಂದು ಸಚಿವರಿಗೆ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಸೂಚನೆಯಂತೆ 9 ಸಚಿವರು, 23 ಶಾಸಕರು ಶಿಗ್ಗಾವಿ ಉಪ ಚುನಾವಣೆಯ ಕಾರ್ಯದಲ್ಲಿ ತೊಡಗಿದ್ದಾರೆ. ಚುನಾವಣೆಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಿದ್ದೇವೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಸಹ ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶಿಗ್ಗಾವಿಯಲ್ಲಿ ಯಾಸೀರ್ ಅಹ್ಮದ್ ಖಾನ್ ಪಠಾಣ ಗೆಲ್ಲಿಸಬೇಕು ಎಂದು ಪಣತೊಟ್ಟಿರುವ ಸಿದ್ದರಾಮಯ್ಯ ಸೈಯದ್ ಅಜ್ಜಂಪೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಶನಿವಾರ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರ ಜೊತೆ ಮಾತುಕತೆ ನಡೆಸಿ, ಅವರಿಗೆ ಅಧಿಕಾರ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ.
ಸೈಯದ್ ಅಜ್ಜಂಪೀರ್ ಖಾದ್ರಿ, "ಈ ಬಾರಿ ಟಿಕೆಟ್ ನೀಡಿದ್ದರೆ ನಾನೇ ಗೆಲುವು ಸಾಧಿಸುತ್ತಿದ್ದೆ. ಟಿಕೆಟ್ ನೀಡಿ ಎಂದು ನಾಯಕರ ಬಳಿಕ ಮನವಿ ಮಾಡಿದ್ದೆ. ಆದರೆ ಟಿಕೆಟ್ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ನಾನು ಪಕ್ಷದ ತೀರ್ಮಾನವನ್ನು ಕಾರ್ಯಕರ್ತರ ಬಳಿಕ ತೆಗೆದುಕೊಂಡು ಹೋಗುತ್ತೇನೆ" ಎಂದು ಹೇಳಿದ್ದಾರೆ.
ಶಿಗ್ಗಾವಿ ಚುನಾವಣೆ ಕುರಿತು ಮಾತನಾಡಿರುವ ಉಪ ಮುಖ್ಯಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಕಳೆದ ಬಾರಿಯ ಚುನಾವಣೆಯಲ್ಲಿ ಅಜ್ಜಂಪೀರ್ ಖಾದ್ರಿ ಅವರಿಗೆ ಟಿಕೆಟ್ ಕೊಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಶಿಗ್ಗಾವಿ ಉಪಚುನಾವಣೆಯಲ್ಲಿಯೂ ಅವರ ಹೆಸರು ಪ್ರಮುಖವಾಗಿದ್ದು, ಹೈಕಮಾಂಡ್ ಅವರಿಗೆ ಇದಕ್ಕೆ ಸಮನಾದ ಅಧಿಕಾರವನ್ನು ನೀಡುವ ಭರವಸೆ ನೀಡಿದೆ" ಎಂದು ಹೇಳಿದ್ದಾರೆ.
"ಖಾದ್ರಿಯವರು ಪಕ್ಷದ ನಿಲುವಿಗೆ ಬದ್ಧರಾಗಿ ನಮ್ಮ ಜೊತೆ ಇರಲಿದ್ದಾರೆ. ನಾನು ಹಾಗೂ ನಮ್ಮ ಶಾಸಕರು, ಮುಖ್ಯಮಂತ್ರಿಗಳು ಖಾದ್ರಿ ಅವರ ಜೊತೆ ಮಾತನಾಡಿದ್ದು, ಅಕ್ಟೋಬರ್ 30ರಂದು ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದು ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಲಿದ್ದಾರೆ" ಎಂದು ತಿಳಿಸಿದ್ದಾರೆ.












Click it and Unblock the Notifications