Shiggaon By Election: ಕಾಂಗ್ರೆಸ್‌ನಿಂದ ಕೊನೆಗೂ ಶಿಗ್ಗಾವಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಅನೌನ್ಸ್
ಬೆಂಗಳೂರು, ಅಕ್ಟೋಬರ್ 24: ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಕೊನೆಗೂ ಟಿಕೆಟ್ ಘೋಷಿಸಿದೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ಧ ಯಾಸಿರ್ ಅಹ್ಮದ್ ಪಠಾಣ್ ಅವರಿಗೆ ಗುರುವಾರ ಟಿಕೆಟ್ ನೀಡಿದೆ. ಈ ಮೂಲಕ ಆರನೇ ಬಾರಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಚುನಾವಣೆಗೆ ಅವಕಾಶ ನೀಡಿದಂತಾಗಿದೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಜೊತೆಗೆ ಮೂರು ಉಪ ಚುನಾವಣೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಧಿಕೃತ ಘೋಷಣೆ ಆದಂತಾಗಿದೆ. ಜಾತಿ ಲೆಕ್ಕಾಚಾರದಲ್ಲಿ ಇಲ್ಲಿ ಪಂಚಮಸಾಲಿ ಸಮುದಾಯದ ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಅವರ ಪುತ್ರಿ ವೈಶಾಲಿ ಕುಲಕರ್ಣಿ ಅವರಿಗೆ ನೀಡಲಿದೆ ಎಂಬ ಮಾತು ಕೇಳಿ ಬಂದಿತ್ತು.

ಈ ಹಿಂದಿನಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಕೊಂಡು ಬರಲಾಗಿತ್ತು. ಇಲ್ಲಿ ಮುಸ್ಲಿಂರು ಸೇರಿದಂತೆ, ಕುರುಬರು ಹಾಗೂ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. ಇದನ್ನು ಅರಿತು ಕೊನೆಗೂ ಅಲ್ಪಸಂಖ್ಯಾತ ನಾಯಕನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಶಿಗ್ಗಾವಿಯಲ್ಲಿ ಬಿಜೆಪಿಯಿಂದ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ. ಇವರು ಲಿಂಗಾಯತ ಸಮುದಾಯವಾಗಿದ್ದರಿಂದ ಅವರ ಮತ ಒಡೆಯಲು ಕಾಂಗ್ರೆಸ್ ಪ್ಲಾನ್ ಮಾಡಿತ್ತು ಎನ್ನಲಾಗಿದೆ. ಹೀಗಾಗಿಯೇ ಪಂಚಮಸಾಲಿ ಅಭ್ಯರ್ಥಿ ಹುಡುಕಾಟ ನಡೆಸಲಾಗಿತ್ತು ಎಂಬ ಮಾಹಿತಿ ಇದೆ. ಕೊನೆಗೆ ಅಲ್ಪ ಸಂಖ್ಯಾತ ನಾಯಕರಿಗೆ ಟಿಕೆಟ್ ನೀಡುವ ಮೂಲಕ ಹೊಸ ರಣತಂತ್ರ ರೂಪಿಸಲಾಗಿದೆ.
ಅಕ್ಟೋಬರ್ 25 ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನಾಳೆ ಶುಕ್ರವಾರ ಭರತ್ ಬೊಮ್ಮಾಯಿ ಬೃಹತ್ ರೋಡ್ ಶೋ ಮೂಲಕ ಯಡಿಯೂರಪ್ಪ ಹಾಗೂ ಇತರ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ಯಾಸಿರ್ ಅಹಮ್ಮದ್ ಪಠಾಣ್ ಅವರಿಗೆ ಟಿಕೆಟ್ ಪಕ್ಕಾ ಆಗುತ್ತಿದ್ದಂತೆ ನಾಳೆ ಅವರು ಸಹ ಪ್ರಮುಖ ನಾಯಕರ ಜೊತೆಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಚನ್ನಪಟ್ಟಣಕ್ಕೂ ಅಭ್ಯರ್ಥಿ ಫೈನಲ್
ಬಿಜೆಪಿಯಿಂದ ಕಾಂಗ್ರೆಸ್ ಸೇರಿದ ಸಿಪಿ ಯೋಗೇಶ್ವರ ಅವರನ್ನು ಪಕ್ಷ ಚನ್ನಪಟ್ಟಣದ ಅಭ್ಯರ್ಥಿಯಾಗಿಸಿದೆ. ಇಂದೇ ಜೆಡಿಎಸ್ ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದೆ. ಇದು ಹೈವೋಲ್ಟೇಜ್ ಕ್ಷೇತ್ರವಾಗಿದೆ. ಪ್ರಮುಖ ಪಕ್ಷಗಳಿಂದ ಮೂರು ಉಪ ಚುನಾವಣಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿದೆ. ಇನ್ನೇನಿದ್ದರೂ ಭರ್ಜರಿ ಪ್ರಚಾರ, ಗೆಲುವಿಗೆ ಸೂಕ್ತ ತಂತ್ರ ಹೆಣೆದಿದ್ದು, ಬಹುಮತ ಗಳಿಸಲು ಸಜ್ಜಾಗಿವೆ.












Click it and Unblock the Notifications