NWKRTC: ಬಸ್ ನಿಲ್ದಾಣದ ಕಟ್ಟಡಕ್ಕೆ ಬೆಂಕಿ, 2 ಮಳಿಗೆ ಆಹುತಿ
ಹಾವೇರಿ, ಜೂನ್ 24: ಮಧ್ಯ ಕರ್ನಾಟಕದ ಜಿಲ್ಲೆ, ಯಾಲಕ್ಕಿ ಕಂಪಿನ ಹಾವೇರಿಯು ಬೆಳ್ಳಂಬೆಳಗ್ಗೆ ಬೃಹತ್ ಬೆಂಕಿ ಅವಘಡಕ್ಕೆ ಸಾಕ್ಷಿ ಆಯಿತು. ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಕಟ್ಟಡಗಳಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿತು. ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ಕಟ್ಟಡದಲ್ಲಿನ ಎರಡು ಮಳಿಗೆಗಳಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಒಳಗಿದ್ದ ಗೃಹ ಬಳಕೆಯ ವಸ್ತುಗಳು ಸುಟ್ಟು ಕರಕಲಾಗಿದವು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮೇಲ್ನೋಟಕ್ಕೆ ಇದು ಶಾರ್ಟ್ ಸಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಎರಡು ಅಂಗಡಿಗಳಲ್ಲಿ ಹಬ್ಬಿತು. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (NWKRTC) ಸೇರಿದ ಬಸ್ ನಿಲ್ದಾಣ ಇದಾಗಿದೆ.

ಈ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ಕಾಂಪ್ಲೆಕ್ಸ್ ನಿರ್ಮಿಸಲಾಗಿದೆ. ಇದರಲ್ಲಿ ಹೋಟೆಲ್, ಬೇಕರಿ ಇನ್ನಿತರ ಮಳಿಗೆಗಳು ಇವೆ. ಇದರಲ್ಲಿನ ಎರಡು ಮಳಿಗೆ ಬಾಡಿಗೆ ನೀಡಲಾಗಿತ್ತು. ಅದರಲ್ಲಿ ಗೃಹ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇದೇ ಮಳಿಗೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸದಸ್ಯರು ಬೆಂಕಿ ನಂದಿಸಿದರು.
ಬೆಳಗ್ಗೆ 6ಗಂಟೆ ಆಸು ಪಾಸುಗೆ ಕಟ್ಟಡದಲ್ಲಿ ಕಂಡು ಬಂದ ಬೆಂಕಿಯು ನೋಡು ನೋಡುತ್ತಿದ್ದಂತೆ ಇಡಿ ಮಳಿಗೆಯನ್ನು ಆವರಿಸಿತು. ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ, ಮಳಿಗೆಯಲ್ಲಿ ಸುಟ್ಟು ಭಸ್ಮವಾದ ಕೆಲವು ವಸ್ತಗಳು, ಅಲ್ಲಲ್ಲಿ ಅರಬರೆಯಾಗಿ ಸುಟ್ಟು ಉಳಿದಿದ್ದ ವಸ್ತುಗಳನ್ನು ಹೊರಕ್ಕೆ ಹಾಕಲಾಯಿತು.
ಪರಿಶೀಲನೆ ಬಳಿಕ ಅವಘಡದ ಕಾರಣ ಬಯಲು
ಪ್ರಾಥಮಿಕ ವರದಿ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ನಡೆದಿದೆ ಎಂದು ಗೊತ್ತಾಗಿದೆ. ಸ್ಥಳದಲ್ಲಿ ಸಿಕ್ಕ ವಸ್ತುಗಳ ಮಾದರಿ ಸಂಗ್ರಹಿಸಿ ಪೂರ್ಣವಾಗಿ ಪರಿಶೀಲಿಸಲಾಗುವುದು. ಇವುಗಳ ಪರಿಶೀಲನೆ ಬಳಿಕ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬರಲಿದೆ.
ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳು, ಪೊಲೀಸರು ಬಾಡಿಗೆ ಪಡೆದಿದ್ದ ಮಳಿಗೆದಾರರು, ಅಕ್ಕಪ್ಪಕ್ಕದ ಅಂಗಡಿಯವರಿಂದ ಮಾಹಿತಿ ಪಡೆದಿದ್ದಾರೆ. ಅದೃಷ್ಟವಶಾತ್ ಈ ಬೆಂಕಿ ಅವಘಡದಲ್ಲಿ ಜೀವ ಹಾನಿ, ಗಾಯಗಳು ಆಗಿಲ್ಲ. ಒಂದಷ್ಟು ಆರ್ಥಿಕ ನಷ್ಟವಾಗಿದೆ ಎಂದು ವರದಿ ಆಗಿದೆ.












Click it and Unblock the Notifications