BJP CM Candidate: ಮುಂದಿನ ಮುಖ್ಯಮಂತ್ರಿ ಯಾರೆಂದು ಪರೋಕ್ಷವಾಗಿ ಸೂಚನೆ ಕೊಟ್ಟ ಜೆಪಿ ನಡ್ಡಾ
ಕರ್ನಾಟಕ ವಿಧಾನಸಭೆ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯಲು ಭಾರಿ ಹಣಾಹಣಿ ನಡೆಸುತ್ತಿವೆ. ಬಿಜೆಪಿ, ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು ಹೋರಾಟ ಮಾಡುತ್ತಿದ್ದರೆ, ಜೆಡಿಎಸ್ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ. ಕಾಂಗ್ರೆಸ್, ಬಿಜೆಪಿ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಇನ್ನೂ ಘೋಷಣೆ ಮಾಡಿಲ್ಲ. ಆದರೆ, ಶಿಗ್ಗಾವಿಯಲ್ಲಿ ಜೆಪಿ ನಡ್ಡಾ ಮುಂದಿನ ಮುಖ್ಯಮಂತ್ರಿ ಬಗ್ಗೆ ಪರೋಕ್ಷ ಹೇಳಿಕೆ ನೀಡಿದ್ದಾರೆ.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮಾಡಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ಶಿಗ್ಗಾಂವಿ ನಗರದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಸಾವಿರಾರು ಬಿಜೆಪಿ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ನಟ ಕಿಚ್ಚ ಸುದೀಪ್ ಪಾಲ್ಗೊಂಡಿದ್ದರು.

ನಾಮಪತ್ರ ಸಲ್ಲಿಕೆಗೆ ಮುನ್ನ ಸಮಾವೇಶದಲ್ಲಿ ಮಾತನಾಡಿದ ಜೆಪಿ ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದಾರೆ. ಅವರು ಕೇವಲ ಶಾಸಕ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸುತ್ತಿಲ್ಲ, ಈ ರಾಜ್ಯವನ್ನು ಹೊಸ ದಿಕ್ಕಿನತ್ತ ತೆಗೆದುಕೊಂಡು ಹೋಗುವ ಕೆಲಸವಾಗಲಿದೆ. ಇಲ್ಲಿನ ಜನಗಳ ಉತ್ಸಾಹವನ್ನು ನೋಡಿದರೆ ಮುಂದಿನ ಐದು ವರ್ಷಗಳ ಕಾಲ ಮತ್ತೆ ಅವಕಾಶ ಸಿಗಲಿದೆ ಎಂದು ಹೇಳುವ ಮೂಲಕ ಮತ್ತೊಂದು ಅವಧಿಗೆ ಬೊಮ್ಮಾಯಿ ಸಿಎಂ ಆಗಲಿದ್ದಾರೆ ಎನ್ನುವ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ ಎಂದ ನಡ್ಡಾ!
ತಮ್ಮ ಭಾಷಣದಲ್ಲಿ ಜೆಪಿ ನಡ್ಡಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ, ಕಾಂಗ್ರೆಸ್ ಅಂದ್ರೆ ಕಮಿಷನ್ ಎಂದು ಆರೋಪಿಸಿದ ಅವರು ಕಾಂಗ್ರೆಸ್ ನಾಯಕರು ಎಟಿಎಂ ಇದ್ದಂತೆ ಎಂದರು. ತುಮಕೂರಿನಲ್ಲಿ ಪ್ಲೇನ್, ಹೆಲಿಕ್ಯಾಪ್ಟರ್ ನಿರ್ಮಾಣವಾಗ್ತಿವೆ. ಕರ್ನಾಟಕದಲ್ಲಿ ಅನೇಕ ಹೊಸ ರೈಲುಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಬೇಕು ಎಂದರೆ ಬಿಜೆಪಿಗೆ ಮತ ಹಾಕಿ ಎಂದರು.

ಆಯುಷ್ಮಾನ ಭಾರತ ಯೋಜನೆ ಲಾಭವನ್ನು ಲಕ್ಷಾಂತಡ ಬಡವರು ಪಡೆದುಕೊಂಡಿದ್ದಾರೆ, ಈ ಯೋಜನೆ ಹೀಗೆ ಮುಂದುವರೆಯಬೇಕೆಂದರೆ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದರು. ಬಿಜೆಪಿ ಪಿಎಫ್‌ಐ ಬ್ಯಾನ್ ಮಾಡಿರುವುದನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಪಿಎಫ್‌ಐ ಬ್ಯಾನ್ ಮಾಡಿರುವುದರಿಂದ ರಾಜ್ಯದಲ್ಲಿ ಅಪರಾಧ ಸಂಖ್ಯೆ ಇಳಿಮುಖವಾಗಿದೆ. ಬೊಮ್ಮಾಯಿ ಆಡಳಿತದಲ್ಲಿ ರಾಜ್ಯದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಅನೇಕ ಸಮಾಜಘಾತುಕರು, ಅಪರಾಧಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ರಾಜ್ಯ ಶಾಂತಿಯುತವಾಗಿದೆ ಎಂದರು.
ರಾಜ್ಯದಲ್ಲಿ ಬಡವರಿಗೆ 12 ಸಾವಿರ ಮನೆ ನಿರ್ಮಾಣ ಮತ್ತು ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು. ನಟ ಸುದೀಪ್ ಕೂಡು ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯವನ್ನು ಮೆಚ್ಚುಕೊಂಡಿದ್ದಾರೆ ಎಂದು ನಡ್ಡಾ ತಿಳಿಸಿದರು. ಬೊಮ್ಮಾಯಿ ಅವರಿಗೆ ಕಡಿಮೆ ಸಮಯ ಸಿಕ್ಕಿದೆ, ಅಭಿವೃದ್ಧಿ ಕೆಲಸ ಮಾಡಲು ಇನ್ನಷ್ಟು ಸಮಯ ಬೇಕು ಎಂದು ಸುದೀಪ್ ಕೇಳಿದ್ದಾರೆ. ನಾನು ಇಲ್ಲಿ ಬೊಮ್ಮಾಯಿ ಪರವಾಗಿ ಮತ ಕೇಳಲು ಬಂದಿಲ್ಲ, ಕರ್ನಾಟಕದಲ್ಲಿ ಅಭಿವೃದ್ಧಿಯ ಗಂಗೆಯನ್ನು ಹರಿಸಲು ನಿಮ್ಮ ಮತ ಕೇಳಲು ಬಂದಿದ್ದೇನೆ ಎಂದರು.












Click it and Unblock the Notifications