ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕಾಗಿ 20 ಕೋಟಿ ರೂಪಾಯಿ
ಬೆಂಗಳೂರು, ಮಾರ್ಚ್ 4: ಕರ್ನಾಟಕದ 2022-23ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು 20 ಕೋಟಿ ಅನುದಾನ ಘೋಷಿಸಿದ್ದಾರೆ.
ಶುಕ್ರವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ ಸಿಎಂ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು 20 ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ತಳಸಮುದಾಯದ ವಿಶಿಷ್ಟ ಕಲೆಗಳ ಉತ್ತೇಜನಕ್ಕೆ ಸಾಂಸ್ಕೃತಿಕ ಶಿಬಿರವನ್ನು ನಡೆಸಲಾಗುವುದು. ಪ್ರತೀ ವಿಭಾಗ ಮಟ್ಟದಲ್ಲಿ ಒಟ್ಟು 4 ಸಾಂಸ್ಕೃತಿಕ ಶಿಬಿರ ಆಯೋಜಿಸಲಾಗುತ್ತದೆ. ಕರ್ನಾಟಕದ ಹೆಸರಾಂತ ಸಾಹಿತಿಗಳ ಸಾಹಿತ್ಯ ಪ್ರಚಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಡಾ.ಸಿದ್ದಲಿಂಗಯ್ಯ, ಡಾ.ಎಂ.ಚಿದಾನಂದಮೂರ್ತಿ, ಚನ್ನವೀರ ಕಣವಿ, ಡಾ.ಚಂದ್ರಶೇಖರ ಪಾಟೀಲ್ ಅವರ ಸಾಹಿತ್ಯ ಪ್ರಚಾರಕ್ಕಾಗಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.

ನೆರೆ ರಾಜ್ಯಗಳಲ್ಲಿ ಕನ್ನಡ ಭವನ ಸ್ಥಾಪನೆ:
ಕರ್ನಾಟಕದ ಗಡಿಯಲ್ಲಿರುವ ಕಾಸರಗೋಡು, ಅಕ್ಕಲಕೋಟೆ ಮತ್ತು ಗೋವಾದಲ್ಲಿ ಕನ್ನಡ ಭವನ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
86ನೇ ಕನ್ನಡ ಸಾಹಿತ್ಯ ಸಮ್ಮೇಳನ:
ರಾಜ್ಯದಲ್ಲಿ 2020ರ ಜನವರಿ 5, 6 ಮತ್ತು 7ನೇ ತಾರೀಖಿನಂದು 85ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಯಿತು. ಕಲಬುರಗಿಯಲ್ಲಿ ನಡೆದ ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಎಚ್ ಎನ್ ವೆಂಕಟೇಶಮೂರ್ತಿ ವಹಿಸಿಕೊಂಡಿದ್ದರು. ಸಾಹಿತ್ಯ ಸಮ್ಮೇಳನದ ಕೊನೆಯ ದಿನ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸುವುದಾಗಿ ಘೋಷಿಸಲಾಗಿತ್ತು.
2021ರ ಫೆಬ್ರವರಿ ತಿಂಗಳಿನಲ್ಲಿ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನವು ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಕಾರಣದಿಂದಾಗಿ ಮುಂದೂಡಿಕೆ ಆಗಿತ್ತು. ಹಾವೇರಿಯಲ್ಲಿ ಈ ಬಾರಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದೊಡ್ಡರಂಗೇಗೌಡರು ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.












Click it and Unblock the Notifications