ಹಾವೇರಿ ಜಿಲ್ಲೆಯ 60 ಅಭ್ಯರ್ಥಿಗಳಲ್ಲಿ 47 ಜನರಿಗೆ ಠೇವಣಿಯೇ ಸಿಕ್ಕಿಲ್ಲ: ಅಚ್ಚರಿ ಫಲಿತಾಂಶಕ್ಕೆ ಸಾಕ್ಷಿಯಾಯ್ತು ಸಿಎಂ ತವರು
ಹಾವೇರಿ, ಮೇ 15: ಹಾವೇರಿ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 60 ಅಭ್ಯರ್ಥಿಗಳ ಪೈಕಿ 47 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 1/6ರಷ್ಟು ಮತಗಳನ್ನು ಪಡೆಯಲು ವಿಫಲರಾದ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಳ್ಳುತ್ತಾರೆ.
ರಾಣೇಬೆನ್ನೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ. ಇಲ್ಲಿ ಒಟ್ಟು 1,91,436 ಮತಗಳು ಚಲಾವಣೆಯಾಗಿವೆ. ರಾಣೆಬೆನ್ನೂರಿನ ಎನ್‌ಸಿಪಿ ಅಭ್ಯರ್ಥಿ ಆರ್.ಶಂಕರ್ ಅವರು 31,906 ಮತಗಳನ್ನು ಪಡೆಯುವ ಮೂಲಕ ಠೇವಣಿ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾವೇರಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ 93,827 ಮತ್ತು ಬಿಜೆಪಿಯ ಗವಿಸಿದ್ದಪ್ಪ ದ್ಯಾಮಣ್ಣನವರ್ 75,261 ಮತಗಳನ್ನು ಪಡೆದಿದ್ದಾರೆ. ಉಳಿದವರೆಲ್ಲರೂ ಠೇವಣಿ ಕಳೆದುಕೊಂಡಿದ್ದಾರೆ.
ಹಾನಗಲ್‌ನಲ್ಲಿ ಠೇವಣಿ ಉಳಿಸಿಕೊಳ್ಳಲು ಅಭ್ಯರ್ಥಿಗಳಿಗೆ 29,758 ಮತಗಳು ಬೇಕಾಗುತ್ತವೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ 94,590 ಮತ್ತು ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ 72,645 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮಾಜಿ ಸಚಿವ ಹಾಗೂ ಜೆಡಿಎಸ್ ಅಭ್ಯರ್ಥಿ ಮನೋಹರ ತಹಶೀಲ್ದಾರ್ ಕೇವಲ 8,834 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಇನ್ನು ಒಂಬತ್ತು ಮಂದಿ ಠೇವಣಿಯನ್ನೂ ಕಳೆದುಕೊಂಡು ನಿರಾಶರಾಗಿದ್ದಾರೆ.
ಬ್ಯಾಡಗಿಯಲ್ಲಿ ಹಾಲಿ ಶಾಸಕ ಬಸವರಾಜ ಶಿವಣ್ಣನವರ್ ಮತ್ತು ವಿರೂಪಾಕ್ಷಪ್ಪ ಬಳ್ಳಾರಿ ಮಾತ್ರ ಠೇವಣಿ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಉಳಿದ ಆರು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಹಿರೇಕೆರೂರಿನಲ್ಲಿ ಹಾಲಿ ಶಾಸಕ ಯು ಬಿ ಬಣಕಾರ ಹಾಗೂ ಅವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಬಿ ಸಿ ಪಾಟೀಲ್ ಠೇವಣಿ ಉಳಿಸಿಕೊಂಡಿದ್ದಾರೆ.
ಶಿಗ್ಗಾವಿ-ಸವಣೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ. ಜೆಡಿಎಸ್‌ನ ಶಶಿಧರ್ ಯಲಿಗಾರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು 13,928 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.
ಸ್ವತಂತ್ರರಿಗಿಂತ ನೋಟಾ ಆದ್ಯತೆ
ಹಾವೇರಿ ಜಿಲ್ಲೆಯ ಎಲ್ಲಾ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 7,504 ಮತದಾರರು ನೋಟಾ ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ 33 ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ನೋಟಾ ಪಡೆದುಕೊಂಡಿದೆ. ಹಾವೇರಿಯ ಬಹುತೇಕ ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗಳಿಸಿದ ಮತಗಳಿಗಿಂತ ನೋಟಾ ಎಣಿಕೆ ಹೆಚ್ಚಾಗಿದೆ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಚಲಾವಣೆಯಾದ 10,61,673 ಮತಗಳಲ್ಲಿ ನೋಟಾ ಶೇ.0.7ರಷ್ಟು ಮತ ಗಳಿಸಿದೆ.












Click it and Unblock the Notifications