ಅಪಾಯವೆಂದು ಗೊತ್ತಿದ್ರೂ, ದೂರದ ಪಯಣ ತಪ್ಪಿಸಲು ದೋಣಿ ಮೊರೆ ಹೋಗುವ 2 ಗ್ರಾಮದ ಜನರು
ಹಾವೇರಿ, ಅಕ್ಟೋಬರ್ 10: ತಾಲೂಕಿನ ಹಾವನೂರು ಮತ್ತು ಶಾಕಾರ ಗ್ರಾಮಗಳ ಜನರು ರಸ್ತೆ ಮಾರ್ಗದ ಹತ್ತಾರು ಕಿಲೋ ಮೀಟರ್ ಅಂತರವನ್ನು ಕಡಿಮೆ ಮಾಡುವುದಕ್ಕಾಗಿ ದಿನನಿತ್ಯ ಜೀವವನ್ನು ಪಣಕ್ಕಿಟ್ಟು ಜಲಮಾರ್ಗವನ್ನು ಅನುಸರಿಸಿ ದೋಣಿಯಲ್ಲಿ ಪಯಣಿಸುತ್ತಿದ್ದಾರೆ.
ಒಂದು ದಡದಿಂದ ಇನ್ನೊಂದು ದಡಕ್ಕೆ ತಲುಪಲು ತೆಪ್ಪ, ದೋಣಿ ಜನರನ್ನು ಕರೆದುಕೊಂಡು ಹೋಗಿ ಬಂದು ಮಾಡುತ್ತಿದೆ. ಇಲ್ಲಿ ದಿನ ನಿತ್ಯ ದೋಣಿಯಲ್ಲಿ ವೃದ್ಧರು, ಚಿಕ್ಕ ಮಕ್ಕಳು ಸೇರಿದಂತೆ ಅಪಾಯವಿದ್ದರೂ ಎರಡು ಗ್ರಾಮಕ್ಕೆ ಹೊಗಿಬರಲು ದೋಣಿಯನ್ನೇ ಮೊರೆ ಹೋಗುತ್ತಿದ್ದಾರೆ.
ನೆನೆಗುದಿಗೆ ಬಿದ್ದ 19.5 ಕೋಟಿ ವೆಚ್ಚದ ಬೆಂಗಳೂರಿನ ಅಂಡರ್ಪಾಸ್ ಯೋಜನೆ
ಈ ಎರಡು ಗ್ರಾಮಗಳು ತುಂಗಭದ್ರಾ ನದಿ ದಡದಲ್ಲಿವೆ. ಇಲ್ಲಿ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಬೇಕಾದರೆ ಜೀವವನ್ನೆ ಒತ್ತೆಯಾಗಿಡಬೇಕು. ಎರಡು ಗ್ರಾಮಗಳಲ್ಲಿನ ಜನರು ಯಾವುದೋ ಕಾರಣಕ್ಕಾಗಿ ದಿನಕ್ಕೆ ಒಂದು ಬಾರಿಯಾದರು ಶಾಕಾರ ಮತ್ತು ಹಾವನೂರು ಮಧ್ಯ ಪ್ರಯಾಣ ಮಾಡುತ್ತಾರೆ. ದೋಣಿ ಹಿಡಿದು ದಡ ದಾಟಿದರೆ ಕೇವಲ ಅರ್ದ ಕಿಲೋಮೀಟರ್ ಮಾತ್ರ. ಒಂದು ವೇಳೆ ಡೋಣಿ ಇಲ್ಲ ಅಂದರೆ ಶಾಖಾರದ ಜನರು ಹಾವನೂರು ಬರುವುದಕ್ಕೆ ಸುಮಾರು 10 ಕಿಲೋಮೀಟರ್ ದೂರ ಸಂಚಾರ ಮಾಡಬೇಕು.
ಇಲ್ಲಿ ಒಂದು ಅಡ್ಡ ಸೇತುವೆ ಬೇಕು ಎಂದು ಹಲವಾರು ವರ್ಷಗಳಿಂದ ಕೂಗು ಕೇಳಿ ಬರುತ್ತಿದೆ. ಕೆಲವು ಭಾರಿ ಇಲ್ಲಿ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ಮಾಡುದ್ದು ಉಂಟು. ಆದರೆ ಇದುವರೆಗೂ ಸೇತುವೆ ನಿರ್ಮಾಣದ ಮಾತು ಕೇಳಿ ಬಂದಿಲ್ಲ. ಮಳೆಗಾಲದಲ್ಲಂತು ಇಲ್ಲಿನ ಪರಿಸ್ಥಿತಿ ಹೇಳ ತೀರದಂತಾಗುತ್ತದೆ. ತುಂಬಿ ಹರಿಯುವ ನದಿಯಲ್ಲಿ ಜನರು ಜೀವದ ಹಂಗು ತೊರೆದು ಸಂಚಾರ ಮಾಡಬೇಕಾಗುತ್ತದೆ.
ಕಳೆದ ನಲವತ್ತು ವರ್ಷಗಳಿಂದ ಈ ಎರಡು ಗ್ರಾಮಗಳ ನಡುವೆ ಹರಿಯುವ ನದಿಗೆ ಸೇತುವೆ ನಿರ್ಮಾಣ ಮಾಡುವಂತೆ ನಿರಂತರವಾಗಿ ಹೊರಾಟ ನಡೆಯುತ್ತಲೇ ಇದೆ. ನದಿಗೆ ಈ ಜಾಗದಲ್ಲಿ ಅಡ್ಡಲಾಗಿ ಸೇತುವೆ ಬೇಕು ಎಂದು ಜಿಲ್ಲೆಯವರೇ ಆದ ಸಿಎಂ ಬಸವರಾಜ ಬೊಮ್ಮಾಯಿ ಗಮನವನ್ನು ಎರಡು ಗ್ರಾಮದ ಮುಖಂಡರು ಸೆಳೆದಿದ್ದಾರೆ. ಈ ಬಾರಿ ಸೇತುವೆ ನಿರ್ಮಾಣ ಮಾಡಲಿಕ್ಕೆ ಎಲ್ಲಾ ದಾಖಲೆಗಳನ್ನು ಮುಖ್ಯಮಂತ್ರಿ ಅವರಿಗೆ ತಲುಪಿಸಿದ್ದರು. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಬಾರಿ ಬಜೆಟ್‌ನಲ್ಲಿ ಹಣ ಮಂಜೂರು ಮಾಡಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಅದು ಹುಸಿಯಾಗಿದ್ದು, ಈ ಭಾಗದ ಜನರಿಗೆ ಬೇಸರ ಉಂಟುಮಾಡಿದೆ.

ಇನ್ನೂ ಭಾಗದ ಮುಖಂಡರು ಹಲವು ಬಾರಿ ಶಾಸಕ ನೆಹರು ಓಲೇಕಾರ ಮತ್ತು ಮುಖ್ಯಮಂತ್ರಿ ಭೇಟಿ ಮಾಡಿ ಸೇತುವೆ ನಿರ್ಮಾಣಕ್ಕಾಗಿ ಮನವಿ ನೀಡಲಾಗಿತ್ತು. ಕಳೆದ ಭಾರಿ ನಡೆದ ಬಜೆಟ್‌ನಲ್ಲಿ ಈ ಕುರಿತು ಚಕಾರ ಎತ್ತದೆ ತವರು ಜಿಲ್ಲೆ ಮತ್ತು ಈ ಭಾಗದ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಶಾಕಾರ ಮತ್ತು ಹಾವನೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೆ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡದೇ ಇದ್ದಲ್ಲಿ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.