Heavy Rain: ಹಾವೇರಿ ಜಿಲ್ಲೆಯ ಈ ಭಾಗದಲ್ಲಿ ಭಾರೀ ಮಳೆಯಿಂದ ಬೆಳೆಗಳು ಜಲಾವೃತ-ಅನ್ನದಾತ ಕಂಗಾಲು
ಹಾವೇರಿ, ಅಕ್ಟೋಬರ್, 12: ಈಗಾಗಲೇ ನಿನ್ನೆ (ಅಕ್ಟೋಬರ್ 11) ಮೈಸೂರು ಸೇರಿದಂತೆ ರಾಜ್ಯಾದ್ಯಂತ ಆಯುಧ ಪೂಜೆ ಕಾರ್ಯಕ್ರಮ ಮುಗಿದಿದೆ. ಆದರೆ ವಿಜಯ ದಶಮಿ ಹಬ್ಬದ ದಿನದಂದೇ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಯುಟಿಪಿ ಕಾಲುವೆ ಒಡೆದಿದ್ದು, ಇದರಿಂದ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ಜಲಾವೃತವಾಗಿ ಅನ್ನದಾತರು ಕಣ್ಣೀರಿಡುತ್ತಿದ್ದಾರೆ.
ಭಾರೀ ಮಳೆಯಿಂದ ನಿನ್ನೆ ಹಾವೇರಿ ಜಿಲ್ಲೆಯ ಕನಕಾಪುರ ಗ್ರಾಮದ ಬಳಿಯಿರುವ ಉಟಿಬಿ ಕಾಲುವೆ ಒಡೆದು ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹತ್ತಿ, ಗೋವಿನಜೋಳ, ಶೇಂಗಾ ಸೋಯಾಬಿನ್, ಕಬ್ಬು ಬೆಳೆ ಜಲಾವೃತವಾಗಿವೆ. ಇಷ್ಟೆಲ್ಲ ಅವಾಂತರಗಳು ಸಂಭವಿಸಿದ್ರೂ ಕೂಡ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಬಂದಿಲ್ಲ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ

ಹಬ್ಬದ ಸಂಭ್ರಮ ಕಸಿದ ಕಾಡಾನೆ: ಮತ್ತೊಂದೆಡೆ ಆಹಾರ ಅರಸಿ ಬಂದ ಒಂಟಿ ಸಲಗವೊಂದು ಜಮೀನುಗಳಿಗೆ ಲಗ್ಗೆ ಇಟ್ಟು ಟೊಮೆಟೊ ಫಸಲನ್ನು ತುಳಿದು, ತಿಂದು ನಾಶ ಪಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ, ಹೊಸಪುರದಲ್ಲಿ ನಡೆದಿದ್ದು, ಆಯುಧ ಪೂಜೆ ಸಡಗರದಲ್ಲಿದ್ದ ರೈತರು ಕಂಗಲಾಗಿದ್ದಾರೆ.
ಯಡವನಹಳ್ಳಿ ಗ್ರಾಮದ ಜವರನಾಯಕ, ಮಾದೇಶ್, ಪಾಪನಾಯಕ ಎಂಬವರಿಗೆ ಸೇರಿದ ಜಮೀನುಗಳಿಗೆ ಒಂಟಿ ಸಲಗ ದಾಳಿ ಮಾಡಿ ಫಸಲು ನಾಶ ಮಾಡಿದೆ. ಜವರನಾಯಕ ಎಂಬವರಿಗೆ ಸೇರಿದ ಒಂದು ಹೆಕ್ಟೇರ್, ಪಾಪನಾಯಕಗೆ ಸೇರಿದ ಮುಕ್ಕಾಲು ಹೆಕ್ಟೇರ್, ಮಾದೇಶ್ ಅವರಿಗೆ ಸೇರಿದ ಒಂದು ಹೆಕ್ಟೇರ್ ಟೊಮೆಟೊ ನಾಶವಾಗಿದ್ದು, ರೈತರು ಕಂಗಲಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯದಲ್ಲಿ ಈ ದಾಳಿ ನಡೆದಿದೆ.
ಕಾರ್ಣಿಕ ಏನು?: ಅಕ್ಟೋಬರ್ 11ರಂದು ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ಸ್ವಾಮಿ ಕಾರ್ಣಿಕೋತ್ಸವ ನಡೆಯಿತು. ಈ ಕಾರ್ಣಿಕೋತ್ಸವದಲ್ಲಿ ದೇವರಗುಡ್ಡದ ಮಾಲತೇಶಸ್ವಾಮಿಯ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ವಾರ್ಷಿಕ ಕಾರ್ಣಿಕ ನುಡಿಯನ್ನು ನುಡಿದಿದ್ದಾರೆ.
"ಆಕಾಶನ ಚಿಗುರೀತಲೇ, ಬೇರೆಲ್ಲಾ ಮುತ್ತಾಯಿತಲೇ ಪರಾಕ್" ಎಂಬುದಾಗಿ ಭವಿಷ್ಯ ವಾಣಿಯನ್ನು ಗೊರವಪ್ಪ ನಾಗಪ್ಪಜ್ಜ ಉರ್ಮಿ ನುಡಿದಿದ್ದಾರೆ. ಇದರ ಅರ್ಥವನ್ನು ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ವಿವರಿಸಿದ್ದು, ರಾಜ್ಯದಲ್ಲಿ ಮಳೆ, ಬೆಳೆ, ರಾಜಕೀಯ ಅನಾಹುತದ ಬಗ್ಗೆ ಭವಿಷ್ಯವಾಣಿ ಇದಾಗಿದೆ ಎಂದರು.
'ಆಕಾಶದತ್ತ ಚಿಗುರಿತಲೆ' ಎಂದರೆ ಒಳ್ಳೆ ಮಳೆ ಆಗುತ್ತೆ, 'ಬೇರೆಲ್ಲ ಮುದ್ದಾಯಿತಲೇ' ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ ಅದನ್ನು ತೆಗೆದುಕೊಳ್ಳೋ ಫಲಾನುಭವಿಗಳಿಗೂ ಒಳ್ಳೆಯದಾಗುತ್ತೆ ಅಂತಾ ವಿಶ್ಲೇಷಣೆಯನ್ನು ಸಂತೋಷ್ ಭಟ್ ಗುರೂಜಿ ವಿವರಿಸಿ ಹೇಳಿದರು.












Click it and Unblock the Notifications